‘ಸಿದ್ದರಾಮಯ್ಯ ಪತ್ನಿ ಮುಡಾಕ್ಕೆ ಬರೆದಿದ್ದ ಪತ್ರಕ್ಕೆ ವೈಟ್ನರ್ ಹಚ್ಚಿ ತಿರುಚಲಾಗಿದೆ. ಹೆಲಿಕಾಪ್ಟರ್‌ನಿಂದ ಮೈಸೂರಿಗೆ ಹೋಗಿದ್ದವರು ಆ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯಗೆ ಗೊತ್ತಿಲ್ಲದೇ ಇವೆಲ್ಲಾ ನಡೆದಿವೆಯೇ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಅಕ್ರಮಗಳು ನಡೆದಿವೆ. ಬೇಲೆಕೇರಿಯಲ್ಲಿ ಅದಿರು ಕದ್ದವರಿಗೆ ಗಣಿಗಳನ್ನು ಮಂಜೂರು ಮಾಡಲಾಗಿದೆ. ಅವುಗಳ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದರು.
‘ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ 61 ಪ್ರಕರಣಗಳಿದ್ದವು. ಅವನ್ನು ಮುಚ್ಚಿಹಾಕಲೆಂದೇ ಲೋಕಾಯುಕ್ತದ ನರ ಕಿತ್ತುಹಾಕಿದರು. ಎಸಿಬಿ ರಚಿಸಿದರು’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸಂಬಂಧಿಸಿದ ಮುಡಾ ಕಡತಗಳನ್ನು ವೈಟ್ನರ್ ಬಳಸಿ ತಿದ್ದಿಲ್ಲ. ಸರ್ಕಾರಿ ದಾಖಲೆಗಳನ್ನು ತಿದ್ದುವ ದೈನೇಸಿ ಸ್ಥಿತಿ ನನಗೆ ಬಂದಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
‘ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಅರ್ಜಿ ಬರೆಯುವಾಗ ಏನೋ ತಪ್ಪು ಬರೆದಿರಬಹುದು. ಆಗ ವೈಟ್ನರ್ ಬಳಸಿ ತಪ್ಪನ್ನು ಸರಿಪಡಿಸಿದ್ದಾರೆ. ಅದರಲ್ಲಿ ತಪ್ಪೇನು? ಬರೆಯುವಾಗ ತಪ್ಪೇ ಆಗುವುದಿಲ್ಲವಾ? ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಕೊಡಿ ಎಂದು ಕೇಳಿದ್ದಾರೆ. ಅದರಲ್ಲಿ ವಿಸ್ತೀರ್ಣ, ವರ್ಷ ನಮೂದಿಸುವಾಗ ತಪ್ಪು ಆಗಿರಬಹುದು. ಅದನ್ನು ಸರಿಪಡಿಸಿದ್ದಾರೆ’ ಎಂದರು.
‘ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ. ನನ್ನ ವಿರುದ್ಧ ಕುಮಾರಸ್ವಾಮಿ ಬಳಿ ಏನಾದರೂ ದಾಖಲೆಗಳು ಇದ್ದರೆ ಅದನ್ನು ಅವರು ನ್ಯಾಯಾಲಯಕ್ಕೆ ಒಪ್ಪಿಸಲಿ’ ಎಂದು ಸುರೇಶ್ ಸವಾಲೆಸೆದರು.
ವೈಟ್ನರ್ ಬಳಸಿ ದಾಖಲೆ ಪತ್ರಗಳನ್ನು ತಿದ್ದಿರುವ ಆರೋಪ ಇರುವುದರಿಂದ ಬೈರತಿ ಸುರೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಅವರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಒತ್ತಾಯಿಸಿದರು.
ಸುರೇಶ್ ಸಚಿವರಾಗಿ ಮುಂದುವರಿದರೆ ಅವರನ್ನು ತನಿಖಾಧಿಕಾರಿ ಪ್ರಶ್ನೆ ಮಾಡಲು ಸಾಧ್ಯವೇ? ವೈಟ್ನರ್ ಹಚ್ಚುವಾಗ ಹೆಲಿಕಾಪ್ಟರ್‌ನಲ್ಲಿ ಕುಳಿತಿದ್ದಿರೇ? ಕಚೇರಿಗೆ ಬಂದು ಹಚ್ಚಿದಿರೇ ಎಂಬ ರೀತಿಯ ಪ್ರಶ್ನೆಗಳನ್ನು ಕೇಳಲು ಸಾಧ್ಯವೇ ಎಂದರು. ಮುಡಾ ಕಡತಗಳನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತಂದಿದ್ದಾರೆ. ಇದಕ್ಕೆ ಸಾರ್ವಜನಿಕರ ತೆರಿಗೆ ಹಣ ಬಳಕೆ ಆಗಿದೆ. ಸಾರ್ವಜನಿಕರ ಹಣದಲ್ಲೇ ವೈಟ್ನರ್ ಖರೀದಿಸಿ ದಾಖಲೆ ತಿದ್ದಿದ್ದಾರೆ. ಇಂತಹ ವ್ಯಕ್ತಿ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ಹೇಳಿದರು.
‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ. ವರದಿ, ಪತ್ರ ಅಥವಾ ಆದೇಶ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು ಮುಖ್ಯಮಂತ್ರಿ ಅಥವಾ ಸಚಿವನಾಗಿರಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯನ್ನೂ ತಿದ್ದಿಲ್ಲ. ನಿವೇಶನ ಹಂಚಿಕೆಯಾಗಿರುವುದು 2014ರ ಮನವಿ ಮೇರೆಗೆ ಅಲ್ಲ, 2021ರಲ್ಲಿ ಕೊಟ್ಟ ಮನವಿ ಮೇರೆಗೆ. ಆಗ ಮುಡಾ ಬಿಜೆಪಿ ಕೈಯಲ್ಲಿ ಇತ್ತು. ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಮುಖ್ಯಮಂತ್ರಿ ಆಗಿದ್ದವರು ಬಸವರಾಜ ಬೊಮ್ಮಾಯಿ. ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು. ಇದರ ತನಿಖೆಗೆ ಆಯೋಗ ರಚಿಸಲಾಗಿದ್ದು, ತನಿಖಾ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.