ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಹಗರಣ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ಮುಂದುವರಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, 'ಒಲಿಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ' ಎಂದು ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಪದಕ, ಮಾಜಿ ಸಚಿವ ನಾಗೇಂದ್ರ ಅವರು ಬೆಳ್ಳಿ ಪದಕ ಹಾಗೂ ಶಾಸಕ ಬಸನಗೌಡ ದದ್ದಲ್ ಅವರು ಕಂಚಿನ ಪದಕ ಧರಿಸಿರುವ ಎಡಿಟೆಡ್ ಫೋಟೊವನ್ನು ಪೋಸ್ಟ್ ಮಾಡಿದೆ.
ತಾವು ಮಾಡಿರುವ ಹಗರಣಗಳನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಅವರು, ಪದೇ ಪದೇ ಕೇಂದ್ರದ ವಿರುದ್ಧ ಹರಿಹಾಯುತ್ತಾರೆ. ಮನುಷ್ಯನ ಹಸಿವನ್ನು ನೀಗಿಸಬಹುದು ಆದರೆ ಭ್ರಷ್ಟಾಚಾರದ ಪಿತಾಮಹನ ಹಸಿವನ್ನು ನೀಗಿಸುವುದು ಅಸಾಧ್ಯ ಎಂದಿದೆ.
ಈಗ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಸಿಕ್ಕಿಲ್ಲ ಅಂತ ಕೂಗುಮಾರಿಯಂತೆ ಅರಚುತ್ತಿದ್ದಾರೆ. ಆದರೆ ಸತ್ಯ ಇಲ್ಲಿದೆ. ಕಾಂಗ್ರೆಸ್ ಬೊಗಳೆ ಬಯಲಾಗಿದೆ. ಖುರ್ಚಿ ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಸಿಎಂ ಸಿದ್ದರಾಮಯ್ಯನವರು, ಸಚಿವ ಸಂಪುಟದ ಹೊರತಾಗಿಯೂ 56 ಮಂದಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವ ಮೂಲಕ ಸಂವಿಧಾನದ 91ನೇ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ.
ಸ್ವಯಂ ಘೋಷಿತ ಕಾನೂನು ತಜ್ಞ ಸಿದ್ದರಾಮಯ್ಯನವರೇ, 2003ರ 91ರ ಸಾಂವಿಧಾನಿಕ ತಿದ್ದುಪಡಿ ಪ್ರಕಾರ ಯಾವುದೇ ಸರ್ಕಾರದಲ್ಲಿ ಪ್ರಧಾನಮಂತ್ರಿ/ಮುಖ್ಯಮಂತ್ರಿ ಸೇರಿ ಒಟ್ಟು ಸಂಪುಟ ಸಚಿವರ ಸಂಖ್ಯೆ, ಲೋಕಸಭೆ ಅಥವಾ ರಾಜ್ಯ ಶಾಸಕಾಂಗದ ಒಟ್ಟು ಬಲದ ಶೇ.15ಕ್ಕೆ ಸೀಮಿತವಾಗಿರಬೇಕು ಎಂಬುದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದೆ.
ಗದ್ದುಗೆ ಉಳಿಸಿಕೊಳ್ಳಲು ಆಪ್ತರಿಗೆ ಮಣೆ ಹಾಕುವುದು, ಬೊಕ್ಕಸ ಬರಿದು ಮಾಡಿ, ಜನರಿಗೆ ಟೋಪಿ ಹಾಕುವುದು, ಸ್ವಾರ್ಥಕ್ಕಾಗಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದೆ.
ಈ ಮಧ್ಯೆ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಆ ವಿಚಾರವಾಗಿಯೂ ಲೇವಡಿ ಮಾಡಿರುವ ಬಿಜೆಪಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ. ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವುದಕ್ಕಿಂತಲೂ, ಹೈಕಮಾಂಡ್‌ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿರುವ ಸಿಎಂ-ಡಿಸಿಎಂ ಎಂದು ವಾಗ್ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.