ADVERTISEMENT

ಬೆಂಗಳೂರಿನಲ್ಲಿ ಮಾಲ್ದೀವ್ಸ್ ದೂತಾವಾಸ ಕಚೇರಿ: ರಾಜ್ಯಪಾಲ ಗೆಹಲೋತ್

ಕರ್ನಾಟಕದ ಪ್ರವಾಸೋದ್ಯಮ, ಐಟಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:26 IST
Last Updated 9 ಅಕ್ಟೋಬರ್ 2024, 14:26 IST
ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಅವರ ಜತೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ. 
ಮಾಲ್ದೀವ್ಸ್ ಅಧ್ಯಕ್ಷ ಮೊಹಮದ್ ಮುಯಿಜು ಅವರ ಜತೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ.    

ಬೆಂಗಳೂರು: ಭಾರತದ ಪ್ರವಾಸದಲ್ಲಿರುವ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ನೇತೃತ್ವದ ನಿಯೋಗ ಕರ್ನಾಟಕಕ್ಕೆ ಭೇಟಿ ನೀಡಿ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ವಿವಿಧ ವಿಷಯಗಳ ಕುರಿತು ಚರ್ಚಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಗೆಹಲೋತ್ ಅವರು, ಮಾಲ್ದೀವ್ಸ್‌ನ ಅಡ್ಡುವಿನಲ್ಲಿ ಭಾರತೀಯ ದೂತಾವಾಸ ಮತ್ತು ಬೆಂಗಳೂರಿನಲ್ಲಿ ಮಾಲ್ದೀವ್ಸ್ ದೂತಾವಾಸ ತೆರೆಯುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಿದರು.

‘ದೂತಾವಾಸ ಸ್ಥಾಪನೆ ವಿಚಾರ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಇದು ಭಾರತೀಯರಿಗೆ ಮಾಲ್ದೀವ್ಸ್‌ಗೆ ಭೇಟಿ ನೀಡಲು ಮತ್ತು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಆಗುತ್ತದೆ. ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದೆ. ಮಾಲ್ದೀವ್ಸ್ ಜನರ ಪ್ರಗತಿಗೆ ಸಾಧ್ಯವಿರುವ ಎಲ್ಲ ನೇರವನ್ನೂ ನೀಡುತ್ತೇವೆ’ ಎಂದು ಅವರು ಹೇಳಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಾಲ್ದೀವ್ಸ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಬೆಂಗಳೂರಿನ ಪ್ರಮುಖ ಐ.ಟಿ ಉದ್ಯಮಗಳೊಂದಿಗೆ ಸಹಭಾಗಿತ್ವ ಹೊಂದಲು ಆಸಕ್ತಿ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ ಎಂದರು.

‘ಕರ್ನಾಟಕವು ತನ್ನ ಪ್ರಕೃತಿಯ ವೈವಿಧ್ಯ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ನಮ್ಮ ಕವಿ ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದಿದ್ದಾರೆ. ಸುಮಾರು 300 ಕಿ.ಮೀ ಕಡಲ ತೀರದ ಹೊರತಾಗಿ ವಿಶ್ವದ ಎರಡನೇ ಅತಿದೊಡ್ಡ ಶೋಲಾ ಅರಣ್ಯವನ್ನು ಹೊಂದಿರುವ ರಾಜ್ಯ. ಹುಲಿ ಮತ್ತು ಪಕ್ಷಿಧಾಮಗಳನ್ನು ಹೊಂದಿದ್ದೇವೆ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಉತ್ತೇಜಿಸಲು ಮಾಲ್ದೀವ್ಸ್‌ನೊಂದಿಗೆ ಪಾಲುದಾರಿಕೆ ಹೊಂದಲು ಬಯಸಿದ್ದೇವೆ’ ಎಂದು ಹೇಳಿದರು.

ಮೊಹಮ್ಮದ್ ಮುಯಿಜು ಮಾತನಾಡಿ, ಭಾರತದಲ್ಲಿ ಬಹಳ ಹೆಸರು ಮಾಡಿರುವ ಕರ್ನಾಟಕ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗೆ ಭೇಟಿ ನೀಡಿರುವುದು ಬಹಳ ಸಂತಸವಾಗಿದೆ. ಮಾಲ್ದೀವ್ಸ್ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಸತ್ಯವತಿ.ಜಿ ಉಪಸ್ಥಿತರಿದ್ದರು. ಮುಯಿಜು ಅವರೊಂದಿಗೆ ಅಲ್ಲಿನ ವಾಣಿಜ್ಯೋದ್ಯಮಿಗಳೂ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.