ಬೆಂಗಳೂರು: ‘ದೇಶದ ವಿರೋಧ ಪಕ್ಷಗಳು ನಾಯಿಗಳಂತೆ ಕಿತ್ತಾಡುತ್ತಿರುವ ಕಾರಣ ಕತ್ತೆ ಸಿಂಹಾಸನದಲ್ಲಿ ಕುಳಿತು ರಾಜ್ಯಭಾರ ನಡೆಸುವಂತಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದರು.
ಸಮಾಜವಾದಿ ಪಕ್ಷ ಬುಧವಾರ ಹಮ್ಮಿಕೊಂಡಿದ್ದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದ ದೇವೇಗೌಡರೂ ದೇಶದ ಪ್ರಧಾನಿಯಾಗಿದ್ದರು. ನಾನೂ ಕೇಂದ್ರ ಸಚಿವನಾಗಿದ್ದೆ. ನಮ್ಮನ್ನೂ ಸೇರಿದಂತೆ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರವೂ ಈ ಪರಿಯಾಗಿ ಸರ್ಕಾರದ ಆಸ್ತಿ ಮಾರಾಟ ಮಾಡಿರಲಿಲ್ಲ. ಒಂದಡಿ ಜಾಗ ಮಾರಿರಲಿಲ್ಲ. ಲಾಭದಾಯಕ ಉದ್ಯಮಗಳು, ವಿಮಾನನಿಲ್ದಾಣಗಳು, ಬಂದರುಗಳನ್ನೂ ಖಾಸಗಿ ಪಾಲು ಮಾಡಿದ್ದಾರೆ’ ಎಂದು ದೂರಿದರು.
‘ದ್ವಿಪಕ್ಷ ವ್ಯವಸ್ಥೆಗಿಂತ ಕನಿಷ್ಠ ಮೂರು ಪಕ್ಷಗಳು ಪ್ರಬಲವಾಗಿದ್ದರೆ ದೇಶಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಇದನ್ನು ಮನಗೊಂಡು ಮುಲಾಯಂ ಅವರಂತಹ ನಾಯಕರು ತೃತೀಯರಂಗ ಕಟ್ಟಿದರು. ಇಂದು ಕೇಜ್ರಿವಾಲ್ ಅಂಥವರು ಒಂದಷ್ಟು ಪೈಪೋಟಿ ನೀಡುತ್ತಿದ್ದಾರೆ. ತೃತೀಯ ರಂಗ ಪ್ರಬಲವಾಗದಿದ್ದರೆ ಪ್ರಜಾಪ್ರಭತ್ವ ಗಟ್ಟಿಯಾಗದು’ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮುಲಾಯಂ ಕೂಡ ನೆಹರೂ ಅವರಂತೆ ಸಮಾಜವಾದಿಯಾಗಿದ್ದರು. ಬಿಜೆಪಿ ಜತೆ ರಾಜಿ ಮಾಡಿಕೊಳ್ಳದೆ ರಾಜಕೀಯ ಮಾಡಿದರು.
ಪ್ರಾದೇಶಿಕ ಪಕ್ಷಗಳಿಗೂ ಅಭಿವೃದ್ಧಿಯ ಬದ್ಧತೆ ಇದೆ ಎನ್ನುವುದು ದೇಶಕ್ಕೇ ತೋರಿಸಿದರು ಎಂದು ಶ್ಲಾಘಿಸಿದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ, ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎನ್.ಮಂಜಪ್ಪ, ಸಮಾಜವಾದಿಗಳಾದ ಬಿ.ಆರ್.ರಾಮೇಗೌಡ, ವಿ.ಜಿ.ಪರಶುರಾಮ್, ಕೆ.ಎಸ್.ನಾಗರಾಜ್, ವಕೀಲ ಎಸ್.ಜಿ.ಮಠ, ಪತ್ರಕರ್ತ ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.