ಬೆಂಗಳೂರು: ‘ಸಾಮಾನ್ಯ ಚಿತ್ರಮಂದಿರಗಳಿಗಿಂತ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 10 ಪಟ್ಟು ಜಾಸ್ತಿ ಇದೆ. ವಾರಾಂತ್ಯದ ದಿನಗಳಲ್ಲಿ ಟಿಕೆಟ್ ದರ ₹2,000 ದಾಟುತ್ತದೆ. ಮಲ್ಟಿಪ್ಲೆಕ್ಸ್‌ಗಳ ಚಟುವಟಿಕೆಗೆ ಮೂಗುದಾರ ತೊಡಿಸಬೇಕು’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯೆ ತಾರಾ ಅನೂರಾಧಾ ಆಗ್ರಹಿಸಿದರು.
ಕನ್ನಡ ಚಲನಚಿತ್ರೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ನೀಡುವ ಸಹಕಾರದ ಬಗ್ಗೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಗಮನ ಸೆಳೆದರು. ‘ತಮಿಳುನಾಡಿನಲ್ಲಿ ಟಿಕೆಟ್‌ಗೆ ₹120 ದರ ನಿಗದಿಪಡಿಸಲಾಗಿದೆ. ಆದರೆ, ನಮ್ಮಲ್ಲಿ ಆ ಕೆಲಸ ಆಗಿಲ್ಲ. ಮಲ್ಟಿಪ್ಲೆಕ್ಸ್‌ಗಳು ಮಾಡುವ ಅನಾಹುತ ಒಂದೆರಡು ಅಲ್ಲ. ಅಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಕೆಲವು ಸಲ ಮಧ್ಯರಾತ್ರಿ ವೇಳೆ ಚಿತ್ರ ಪ್ರದರ್ಶಿಸುತ್ತಾರೆ. ಆಗ ಯಾರು ಸಿನಿಮಾ ನೋಡುತ್ತಾರೆ’ ಎಂದು ಅವರು ಪ್ರಶ್ನಿಸಿದರು.
‘ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ 10 ಪರದೆಗಳ ಪೈಕಿ ಎರಡು ಪರದೆಗಳನ್ನು ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಮೀಸಲಿಡುತ್ತಾರೆ. ಮಲ್ಟಿಪ್ಲೆಕ್ಸ್‌ಗಳ ಬೇಕಾಬಿಟ್ಟಿ ವರ್ತನೆಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ಪರಿಸ್ಥಿತಿ ಸುಧಾರಣೆ ಆಗಿಲ್ಲ’ ಎಂದರು.
ಮಲ್ಟಿಪ್ಲೆಕ್ಸ್‌ಗಳಿಂದಾಗಿ ಏಕತೆರೆಯ ಚಲನಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದು, ಚಿತ್ರಮಂದಿರಗಳನ್ನು ನೆಲಸಮ ಮಾಡಿ ಮಳಿಗೆ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಆರಂಭಿಸುತ್ತಿದ್ದಾರೆ ಎಂದು ಗಮನ ಸೆಳೆದರು. ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ, 'ವಿಮಾನಗಳ ಟಿಕೆಟ್ ಮಾದರಿಯಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರ ಏರುತ್ತಿದೆ’ ಎಂದು ಕಿಡಿಕಾರಿದರು.
ಸಭಾನಾಯಕಿ ಜಯಮಾಲಾ ಪ್ರತಿಕ್ರಿಯಿಸಿ, ‘ಮಲ್ಟಿಪ್ಲೆಕ್ಸ್ ಹಾಗೂ ಏಕತೆರೆ ಸಿನಿಮಾ ದರದ ಗರಿಷ್ಠ ಮಿತಿಯನ್ನು ₹200ಕ್ಕೆ ನಿಗದಿಪಡಿಸಲಾಗಿದೆ. ಇದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾವು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು ವಿಚಾರಣಾ ಹಂತದಲ್ಲಿದೆ’ ಎಂದರು.
ಬಿಜೆಪಿಯ ರವಿಕುಮಾರ್, ‘ಸಿನಿಮಾ ರೀತಿ ಕಳ್ಳತನ, ಸಿನಿಮಾ ರೀತಿ ಗೂಂಡಾಗಿರಿ ಹೆಚ್ಚುತ್ತಿದೆ. ನಿರ್ಮಾಪಕರು ಆದರ್ಶ ಸಿನಿಮಾ ತರಲು ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.
ತಾರಾ ಮಾತನಾಡಿ, ‘ರಾಜ್ಯ ಸರ್ಕಾರ 125 ಚಿತ್ರಗಳಿಗೆ ತಲಾ ₹10 ಲಕ್ಷ ಸಬ್ಸಿಡಿ ನೀಡುತ್ತಿದೆ. ಆದರೆ, ಕೆಲವು ಚಿತ್ರಗಳು ಬಿಡುಗಡೆಯಾಗುವುದೇ ಇಲ್ಲ. ಸಬ್ಸಿಡಿ ಪಡೆಯುವ ಉದ್ದೇಶದಿಂದಲೇ ಸಿನಿಮಾ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.
ಕಾಂಗ್ರೆಸ್‌ನ ಐವನ್ ಡಿಸೋಜ, ‘ತುಳುವಿನಲ್ಲಿ ವರ್ಷಕ್ಕೆ 50 ಚಿತ್ರಗಳು ಬಿಡುಗಡೆಯಾಗುತ್ತಿವೆ. ಮೂರು ಚಿತ್ರಕ್ಕಷ್ಟೇ ಸಬ್ಸಿಡಿ ನೀಡಲಾಗುತ್ತಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.