ADVERTISEMENT

ಕೊಲೆ ಆರೋಪಿ ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರ: ಉಳಿದವರು ಎಲ್ಲೆಲ್ಲಿಗೆ?

24ನೇ ಎಸಿಎಂಎಂ ಕೋರ್ಟ್ ಅನುಮತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 13:46 IST
Last Updated 27 ಆಗಸ್ಟ್ 2024, 13:46 IST
<div class="paragraphs"><p>ದರ್ಶನ್‌, ಪವಿತ್ರಾಗೌಡ</p></div>

ದರ್ಶನ್‌, ಪವಿತ್ರಾಗೌಡ

   

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ, ನಿಯಮ ಉಲ್ಲಂಘಿಸಿ ವಿಶೇಷ ಆತಿಥ್ಯ ಪಡೆದಿದ್ದ ನಟ ದರ್ಶನ್‌ ಹಾಗೂ ಅವರ ಸಹಚರರನ್ನು ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲು 24ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ.

ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಬುಧವಾರ ಬೆಳಿಗ್ಗೆಯೇ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ನಟನ ಆಪ್ತೆ ಪವಿತ್ರಾಗೌಡ ಅವರನ್ನು ಪರಪ್ಪನ ಅಗ್ರಹಾರದಲ್ಲೇ ಇರಿಸುವಂತೆ ಸೂಚಿಸಲಾಗಿದೆ.

ADVERTISEMENT

ಜೈಲಿನ ಬ್ಯಾರಕ್‌ ಎದುರು ದರ್ಶನ್‌, ರೌಡಿಶೀಟರ್ ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್ ಅವರು ಕಾಫಿ ಕಪ್ ಹಿಡಿದು, ಸಿಗರೇಟ್ ಸೇದುತ್ತಾ ಹರಟೆ ಹೊಡೆ
ಯುತ್ತಿದ್ದ ಫೋಟೊವೊಂದು ಬಹಿರಂಗವಾಗಿತ್ತು.

ಬಂದಿಗಳಿಗೆ ಜೈಲಿನೊಳಗೆ ವಿಲಾಸಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದ ಜೈಲು ಮುಖ್ಯ ಅಧೀಕ್ಷಕ ವಿ.ಶೇಷುಮೂರ್ತಿ ಸೇರಿ ಒಂಬತ್ತು ಮಂದಿ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಮೂರು ಎಫ್‌ಐಆರ್‌ ದಾಖಲಿಸಿ, ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿತ್ತು.

ಅದರ ಬೆನ್ನಲ್ಲೇ ದರ್ಶನ್‌ ಮತ್ತು ಸಹಚರರನ್ನು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರಿಸಲು ಅನುಮತಿ ಕೋರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕರು ನ್ಯಾಯಾ
ಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ, ದರ್ಶನ್‌ ಸೇರಿದಂತೆ ಹತ್ತು ಆರೋಪಿಗಳನ್ನು ವಿವಿಧ ಜಿಲ್ಲೆ
ಗಳಲ್ಲಿರುವ ಎಂಟು ಕಾರಾಗೃಹಗಳಿಗೆ ಸ್ಥಳಾಂತರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

‘ಬುಧವಾರ ಬೆಳಿಗ್ಗೆಯೇ ಎಲ್ಲ ಆರೋಪಿಗಳನ್ನು ಪೊಲೀಸ್‌ ಭದ್ರತೆಯಲ್ಲಿ ಸ್ಥಳಾಂತರ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದ್ದ ನಂತರ 13 ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹದ ವಶಕ್ಕೆ ನೀಡಲಾಗಿತ್ತು. ಜೀವ ಬೆದರಿಕೆಯಿದ್ದ ನಾಲ್ವರನ್ನು ತುಮಕೂರು ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಂಬಂಧ ಅಲ್ಲಿನ ಕಾರಾಗೃಹದ ಅಧೀಕ್ಷಕರಿಂದ ಮಾಹಿತಿ ಪಡೆಯಲಾಗಿದೆ. ಭದ್ರತಾ ವ್ಯವಸ್ಥೆ, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿ ಇರಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ದರ್ಶನ್‌ ಅವರನ್ನು ಇನ್ನು ಮುಂದೆ ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಿಸಲು ಕಾರಾಗೃಹದ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಯಾರಿಗೆ, ಯಾವ ಜೈಲು?

ಆರೋಪಿ ಹೆಸರು;ಜಿಲ್ಲೆ
ದರ್ಶನ್;ಬಳ್ಳಾರಿ
ಪವನ್, ರಾಘವೇಂದ್ರ, ನಂದೀಶ್;ಮೈಸೂರು
ಜಗದೀಶ್, ಲಕ್ಷ್ಮಣ್;ಶಿವಮೊಗ್ಗ
ಧನರಾಜ್;ಧಾರವಾಡ
ವಿನಯ್;ವಿಜಯಪುರ
ನಾಗರಾಜ್;ಕಲಬುರಗಿ
ಪ್ರದೂಷ್‌;ಬೆಳಗಾವಿ
ಪವಿತ್ರಾಗೌಡ, ಅನುಕುಮಾರ್‌, ದೀಪಕ್‌;ಪರಪ್ಪನ ಅಗ್ರಹಾರದಲ್ಲೇ ಮುಂದುವರಿಕೆ

ಜೀವ ಬೆದರಿಕೆಯಿದ್ದ ರವಿ, ಕಾರ್ತಿಕ್, ನಿಖಿಲ್, ಕೇಶವಮೂರ್ತಿ ಅವರನ್ನು ಜೂನ್‌ನಲ್ಲೇ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿದೆ.

ಫೋಟೊ ತೆಗೆದಿದ್ದ ವೇಲುಗೆ ಥಳಿತ?

‘ದರ್ಶನ್, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರು ಸಿಗರೇಟ್‌ ಸೇದುತ್ತಾ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ತೆಗೆದಿದ್ದ ರೌಡಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ‘ಫೋಟೊ ತೆಗೆದು ನೀನೇ ಮಾಧ್ಯಮಕ್ಕೆ ಕಳುಹಿಸಿದ್ದೀಯಾ’ ಎಂದು ಆಕ್ರೋಶಗೊಂಡ ನಾಗನ ಕಡೆಯವರು ಥಳಿಸಿದ್ದಾರೆ’ ಎಂಬ ಮಾಹಿತಿ ಹರಿದಾಡುತ್ತಿದೆ.

ಜೈಲಿನಲ್ಲಿ ಇನ್ಯಾರು ಸಿಗುತ್ತಾರೆ: ಸುಮಲತಾ ಪ್ರಶ್ನೆ

‘ಜೈಲಿನಲ್ಲಿ ಬಹಳ ವರ್ಷಗಳಿಂದ ಕೈದಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದೆ. ದರ್ಶನ್‌ ಇರುವುದರಿಂದ ಮಾಧ್ಯಮಗಳು ಇದನ್ನು ಸುದ್ದಿ ಮಾಡುತ್ತಿವೆ. ಅವರದ್ದೇ ತಪ್ಪು ಎನ್ನುವ ರೀತಿ ಬಿಂಬಿಸುತ್ತಿವೆ’ ಎಂದು ನಟಿ ಸುಮಲತಾ ಅಂಬರೀಶ್‌ ಹೇಳಿದರು.

‘ಇದು ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಷ್ಟೇ ನಡೆಯುತ್ತಿಲ್ಲ. ಪ್ರತಿಯೊಂದು ಜೈಲಿನಲ್ಲೂ ಇಂತಹ ಕೃತ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಇದು ಕಾನೂನುಬಾಹಿರ. ಇದು ಇಡೀ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ. ಇಲ್ಲಿ ಒಬ್ಬ ವ್ಯಕ್ತಿಯನ್ನಷ್ಟೇ ಏಕೆ ಗುರಿ ಮಾಡುತ್ತಿದ್ದೀರಿ? ಜೈಲಲ್ಲಿ ಯಾರಿರುತ್ತಾರೆ? ಜೊತೆಯಲ್ಲಿ ಓಡಾಡಲು ಇನ್ಯಾರು ಸಿಗುತ್ತಾರೆ? ಜೈಲಲ್ಲಿ ಇರುವವರೇ ಕ್ರಿಮಿನಲ್‌ಗಳು. ಯಾವುದೋ ಒಂದು ತಪ್ಪು ಮಾಡಿದವರೇ ಜೈಲು ಸೇರಿರುತ್ತಾರೆ. ದರ್ಶನ್‌ ಆರೋಪಿ ಸ್ಥಾನದಲ್ಲಿ ಇದ್ದಾರೆ. ಅಪರಾಧಿ ಅಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

ದರ್ಶನಾತಿಥ್ಯಕ್ಕೆ ಬಣಗಳ ಮಧ್ಯೆ ಗಲಾಟೆ

ಆರೋಪಿ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಹಾಗೂ ನಟನ ಜತೆಗೆ ಆತ್ಮೀಯತೆ ಬೆಳೆಸುವ ವಿಚಾರಕ್ಕೆ ಎರಡು ರೌಡಿ ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ‘ರೌಂಡ್‌ ಟೇಬಲ್ ಪಾರ್ಟಿ’, ಬ್ಯಾರಕ್‌ ಒಳಗಿರುವ ಫೋಟೊಗಳು ಬಹಿರಂಗಗೊಂಡಿವೆ ಎಂಬುದು ಗೊತ್ತಾಗಿದೆ.

ಬೇರೆ ಬೇರೆ ಪ್ರಕರಣಗಳಲ್ಲಿ ಜೈಲಿನಲ್ಲಿರುವ ರೌಡಿಗಳಾದ ಬೇಕರಿ ರಘು ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮಧ್ಯೆ ಉಂಟಾದ ಗಲಾಟೆಯಿಂದ ದರ್ಶನಾತಿಥ್ಯದ ಫೋಟೊಗಳು ಹೊರಬಂದಿವೆ ಎನ್ನಲಾಗಿದೆ.

‘ಸೈಕಲ್‌ ರವಿಯ ಬಲಗೈ ಬಂಟ ಬೇಕರಿ ರಘು ಪರಿಚಯ ಮೊದಲೇ ದರ್ಶನ್‌ಗಿತ್ತು. ಆದರೆ, ವಿಲ್ಸನ್‌ ಗಾರ್ಡನ್‌ ನಾಗ ಪರಿಚಯ ಇರಲಿಲ್ಲ. ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ ಬಳಿಕ ರಘು ಉಸ್ತುವಾರಿಯಲ್ಲಿ ವಿಶೇಷ ಆತಿಥ್ಯ ದೊರೆಯುತ್ತಿತ್ತು. ರಘು ತನ್ನ ಪರಿಚಯಸ್ಥರಿಂದ ನಟನಿಗೆ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿದ್ದ. ದಿನ ಕಳೆದಂತೆ ದರ್ಶನ್‌ ಅವರು ರಘುವಿನಿಂದ ದೂರವಾದರು ಎನ್ನಲಾಗಿದೆ. ವಿಲ್ಸನ್‌ ಗಾರ್ಡನ್‌ ನಾಗನ ಸ್ನೇಹ ಬೆಳೆಸಿದ್ದರು. ನಂತರ, ನಾಗನೇ ದರ್ಶನ್‌ಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದ. ಜೈಲಿನ ಒಳಗೆ ಇಬ್ಬರೂ ತಮ್ಮ ಸಹಚರರ ಜತೆಗೆ ‘ರೌಂಡ್‌ ಟೇಬಲ್ ಪಾರ್ಟಿ’ ನಡೆಸುತ್ತಿದ್ದರು. ಇದು ರಘುಗೆ ಸಿಟ್ಟು ತರಿಸಿತ್ತು. ಇದೇ ವಿಚಾರಕ್ಕೆ ಒಂದು ರೌಡಿ ಗುಂಪು ಫೋಟೊ ತೆಗೆದು ಹೊರಗಿದ್ದ ವ್ಯಕ್ತಿಯೊಬ್ಬರಿಗೆ ಕಳುಹಿಸಿತ್ತು. ಈ ಬಗ್ಗೆಯೂ ಪೊಲೀಸ್‌ ತನಿಖೆ ಆರಂಭವಾಗಿದೆ. ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಜೈಲಿನ ಅಧಿಕಾರಿಗಳೇ ಅನುಮತಿ ನೀಡಿದ್ದರು. ಆಗಾಗ್ಗೆ ದರ್ಶನ್‌ ಬ್ಯಾರಕ್‌ಗೂ ಹೋಗುತ್ತಿದ್ದ’ ಎಂದು ಮೂಲಗಳು ಹೇಳಿವೆ.

ವಿಶೇಷಾತಿಥ್ಯಕ್ಕೆ ಸಚಿವರ ಆದೇಶ?

ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಸಚಿವರೊಬ್ಬರು ಮೌಖಿಕವಾಗಿ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಹೀಗಾಗಿ, ಬೇಕರಿ ರಘು ಹಾಗೂ ನಾಗನ ಕಡೆಯವರ ಚಲನವಲನಗಳ ಬಗ್ಗೆ ಜೈಲು ಸಿಬ್ಬಂದಿ ನಿಗಾ ವಹಿಸಿರಲಿಲ್ಲ. ಜೈಲು ಸಿಬ್ಬಂದಿಯೂ ದರ್ಶನ್‌ ಖ್ಯಾತ ನಟ ಎನ್ನುವ ಕಾರಣಕ್ಕೆ ಜೈಲು ನಿಯಮ ಪಾಲಿಸಿರಲಿಲ್ಲ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.