ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಲೈಂಗಿಕ ದೌರ್ಜನ್ಯ, ಕೊಲೆ ಆರೋಪ ಪ್ರಕರಣಗಳನ್ನು ಉಲ್ಲೇಖಿಸಿ ನಟ ದರ್ಶನ್, ಪ್ರಜ್ವಲ್ ರೇವಣ್ಣ, ಬಿಜಿಪಿ ನಾಯಕ ಬಿ. ಎಸ್. ಯಡಿಯೂರಪ್ಪ ಮತ್ತು ಸೂರಜ್ ರೇವಣ್ಣ ವಿರುದ್ಧ ನಟಿ ರಮ್ಯಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸದ್ಯ ಸುದ್ದಿಯಲ್ಲಿರುವವರು ಕಾನೂನು ಉಲ್ಲಂಘಿಸಿರುವ ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಇವರ ಹಿಂಸಾತ್ಮಕ ಕೃತ್ಯಗಳಿಂದಾಗಿ ಬಡವರು, ಮಹಿಳೆಯರು ಮತ್ತು ಮಕ್ಕಳ ಬಾಳು ಹಾಳಾಗಿದೆ. ಈ ಅಪರಾಧಗಳನ್ನು ಹೊರಗೆ ತಂದ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಅಭಿನಂದನೆಗಳು. ವಿಚಾರಣೆ ತ್ವರಿತಗೊಳಿಸಿ ಪ್ರಕರಣ ತಾರ್ತಿಕ ಅಂತ್ಯ ಕಂಡಾಗ ನಿಜವಾದ ನ್ಯಾಯ ಸಿಗುತ್ತದೆ. ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ?’ ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರು ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ ರಮ್ಯಾ, ‘ಆತನಿಗೆ (ದರ್ಶನ್) ಸಿಕ್ಕಿರುವ ಜನಪ್ರಿಯತೆ ನೆತ್ತಿಗೇರಿದೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಹಿಂದೆಯೂ ಅವರು ತಪ್ಪು ಮಾಡಿದ್ದರು. ಆದರೆ, ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ ಎಂದು ಬಿಂಬಿಸಲಾಗಿದೆ. ಪೊಲೀಸ್ ಠಾಣೆ ಮುಂದೆ ಜನ ನಿಂತ ಮಾತ್ರಕ್ಕೆ ಆತ ಅಷ್ಟು ಪ್ರಭಾವ ಹೊಂದಿದ್ದಾನೆ ಎನ್ನಲಾಗುವುದಿಲ್ಲ ಎಂದು ದರ್ಶನ್ ವಿರುದ್ಧ ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.