ADVERTISEMENT

ಕೊಲೆ ಪ್ರಕರಣ: ರೇಣುಕಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದ ದರ್ಶನ್‌

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 19:59 IST
Last Updated 13 ಜೂನ್ 2024, 19:59 IST
<div class="paragraphs"><p>ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲು ನಟ ದರ್ಶನ್ ಅವರನ್ನು ಕರೆದೊಯ್ದ ದೃಶ್ಯ &nbsp;</p></div>

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಲು ನಟ ದರ್ಶನ್ ಅವರನ್ನು ಕರೆದೊಯ್ದ ದೃಶ್ಯ  

   

 –ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಬೆಂಗಳೂರು: 'ಚಿತ್ರದುರ್ಗದ ರೇಣುಕಸ್ವಾಮಿ ಅವರ ಮರ್ಮಾಂಗಕ್ಕೆ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಹಾಗೂ ಸಹಚರರು ಎಲ್ಲರೂ ಸೇರಿಕೊಂಡು ಹಲವು ಬಾರಿ ಒದ್ದು ಹತ್ಯೆ ಮಾಡಿದ್ದಾರೆ. ಕೊಲೆಯ ನಂತರ ಪ್ರಕರಣದಿಂದ ಬಚಾವಾಗಲು ದರ್ಶನ್, ಕೆಲ ಪೊಲೀಸರು, ಕೆಲ ವೈದ್ಯರು ಹಾಗೂ ಇತರರಿಗೆ ಕೋಟಿ ಕೋಟಿ ಆಮಿಷವೊಡ್ಡಿ ನೆರವು ಪಡೆಯಲು ಯತ್ನಿಸಿದ್ದರು’ ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಗಳನ್ನು ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿಗಳು, ನಾನಾ ರೀತಿಯಲ್ಲಿ ಹೇಳಿಕೆ ನೀಡಿದ್ದು ಅವುಗಳ ಪರಿಶೀಲನೆ ನಡೆಯುತ್ತಿದೆ.

‘ದರ್ಶನ ಹಾಗೂ ಪವಿತ್ರಾ ಗೌಡ ನಡುವೆ ಹಲವು ವರ್ಷಗಳಿಂದ ಸಲುಗೆ ಇದೆ. ಪವಿತ್ರಾ ಗೌಡಗೆ ರೇಣುಕಸ್ವಾಮಿ ಖಾಸಗಿ ಅಂಗಾಂಗದ ಫೋಟೊ ಸಮೇತ ಅಶ್ಲೀಲ ಸಂದೇಶ ಕಳುಹಿಸಿದ್ದ ಸಂಗತಿ, ಡಿ–ಗ್ಯಾಂಗ್ ಸದಸ್ಯನ ಮೂಲಕ ದರ್ಶನ್‌ಗೆ ಗೊತ್ತಾಗಿತ್ತು. ಇದೇ ಸಿಟ್ಟಿನಲ್ಲಿ ದರ್ಶನ್, ಗ್ಯಾಂಗ್ ಸದಸ್ಯರ ಜೊತೆ ಸೇರಿ ಸಂಚು ರೂಪಿಸಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಸ್ವಾಮಿ ಅವರನ್ನು ನೋಡಿದ್ದ ದರ್ಶನ್, ಬೆಲ್ಟ್‌ನಿಂದ ಥಳಿಸಿದ್ದರು. ನಂತರ, ಮರ್ಮಾಂಗಕ್ಕೆ ಮೂರು ಬಾರಿ ಒದ್ದಿದ್ದರು. ನಂತರ, ಗ್ಯಾಂಗ್‌ನ ಇತರರು ಸಹ ಮರ್ಮಾಂಗಕ್ಕೆ ಒದ್ದಿದ್ದರು. ಈ ಬಗ್ಗೆ ಆರೋಪಿ ದೀಪಕ್‌ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಲವರಿಗೆ ಕರೆ, ಕೋಟಿ ಕೋಟಿ ಆಮಿಷ: ‘ಮರ್ಮಾಂಗಕ್ಕೆ ಒದ್ದ ನಂತರ ಸ್ಥಳದಲ್ಲಿಯೇ ನರಳಾಡಿ ರೇಣುಕಸ್ವಾಮಿ ಮೃತಪಟ್ಟಿದ್ದರು. ಸ್ಥಳದಿಂದ ಪರಾರಿಯಾಗಿದ್ದ ದರ್ಶನ್, ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಗೆ ತಲುಪಿದ್ದರು. ಕೊಲೆ ವಿಷಯದಲ್ಲಿ ತಮ್ಮ ಹೆಸರು ಬಾರದಂತೆ ಮಾಡಲು, ಹಲವರಿಗೆ ಕರೆ ಮಾಡಿದ್ದರು. ಪ್ರಕರಣದಿಂದ ಪಾರು ಮಾಡಿದರೆ ಕೋಟಿ ನೀಡುವುದಾಗಿ ಆಮಿಷವೊಡ್ಡಿದ್ದರೆಂಬುದು ಸದ್ಯದ ಪುರಾವೆಗಳ ಮೂಲಕ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಪರಿಚಯಸ್ಥ ಕೆಲ ಪೊಲೀಸರು, ಕೆಲ ರಾಜಕಾರಣಿಗಳು, ಕೆಲ ವೈದ್ಯರು ಹಾಗೂ ಇತರರಿಗೆ ದರ್ಶನ್ ಕರೆ ಮಾಡಿದ್ದರು. ಆದರೆ, ಅವರಲ್ಲಿ ಬಹುತೇಕರು ದರ್ಶನ್‌ಗೆ ಸಹಾಯ ಮಾಡಲು ನಿರಾಕರಿಸಿದ್ದರು. ಕೆಲವರಷ್ಟೇ ಮೃತದೇಹ ಸಾಗಿಸುವ ಬಗ್ಗೆ ಸಲಹೆ ನೀಡಿದ್ದರೆಂಬುದು ತಿಳಿದುಬಂದಿದೆ. ಅವರ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ’ ಎಂದು ಮೂಲಗಳು ಹೇಳಿವೆ.

ಪವಿತ್ರಾ ಗೌಡ ಮೇಲೆ ಹಲ್ಲೆ: ‘ಚಿತ್ರದುರ್ಗದ ರೇಣುಕಸ್ವಾಮಿ ಅಕ್ಕನಿಗೆ (ಪವಿತ್ರಾ ಗೌಡ) ಅಶ್ಲೀಲ ಫೋಟೊ ಕಳುಹಿಸಿದ್ದಾನೆ. ಇದನ್ನು ನೋಡಿಕೊಂಡು ನೀವು ಸುಮ್ಮನಿದ್ದಿರಾ?’ ಎಂದು ಸಹಚರನೊಬ್ಬ ದರ್ಶನ್‌ಗೆ ಹೇಳಿದ್ದ. ಇದೇ ಮಾತಿನಿಂದಾಗಿ ದರ್ಶನ್, ರೇಣುಕಸ್ವಾಮಿಯನ್ನು ಎಳೆದು ತರಲು ಹೇಳಿದ್ದರು. ಸಹಚರರಿಗೆ ಸ್ಕಾರ್ಪಿಯೊ ಹಾಗೂ ಕಾರು ಸಹ ಕೊಟ್ಟು ಕಳುಹಿಸಿದ್ದರು. ಕೈಗೆ ಹಣವನ್ನೂ ನೀಡಿದ್ದರೆಂಬುದು ತನಿಖೆಯಲ್ಲಿ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶೆಡ್‌ನಲ್ಲಿ ಪವಿತ್ರಾಗೌಡ ಎದುರೇ ರೇಣುಕಸ್ವಾಮಿಗೆ ದರ್ಶನ್ ಹೊಡೆದಿದ್ದರು. ಬಳಿಕ, ಪವಿತ್ರಾ ಗೌಡ ಮೇಲೂ ದರ್ಶನ್ ಹಲ್ಲೆ ಮಾಡಿದ್ದರು. ಇದರಿಂದ ಗಾಯಗೊಂಡಿದ್ದ ಪವಿತ್ರಾ ಗೌಡ, ರಾತ್ರಿಯೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆ ವರದಿ ಶೀಘ್ರ: ‘ರೇಣುಕಸ್ವಾಮಿ ಅವರ ದೇಹದ 16 ಕಡೆಗಳಲ್ಲಿ ಗಾಯಗಳಾಗಿವೆ. ಮರ್ಮಾಂಗಕ್ಕೆ ಹೆಚ್ಚು ಪೆಟ್ಟು ಬಿದ್ದಿದೆ. ಮರ್ಮಾಂಗದ ಬಳಿ ರಕ್ತ ಹೆಪ್ಪುಗಟ್ಟಿದ್ದರಿಂದಲೇ ಸಾವು ಸಂಭವಿಸಿದೆ. ಇದರಿಂದಾಗಿ ರೇಣುಕಸ್ವಾಮಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ವರದಿ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ತನಿಖಾಧಿಕಾರಿ ದಿಢೀರ್ ವರ್ಗಾವಣೆ

ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿಯಾದ ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಪ್ರಕರಣದ ತನಿಖೆ ಹೊಣೆಯನ್ನು ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ವಹಿಸಿಕೊಂಡಿದ್ದಾರೆ.

ವರ್ಗಾವಣೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ‘ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಗಿರೀಶ್ ಅವರನ್ನು ಚುನಾವಣೆ ನಿಮಿತ್ತ ಕಾಮಾಕ್ಷಿಪಾಳ್ಯ ಠಾಣೆಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು. ಇದೀಗ, ಅವರನ್ನು ಪುನಃ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ವರ್ಗಾಯಿಸಲಾಗಿದೆ. ಇದು, ಸಹಜ ವರ್ಗಾವಣೆ ಹೊರತು ದಿಢೀರ್ ವರ್ಗಾವಣೆಯಲ್ಲ’ ಎಂದರು.

ಇನ್ನೊಬ್ಬ ಅಧಿಕಾರಿ, ‘ಕೊಲೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪುವವರೆಗೂ ಗಿರೀಶ್ ಅವರನ್ನು ಇನ್‌ಸ್ಪೆಕ್ಟರ್ ಹುದ್ದೆಯಲ್ಲಿ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಇಂಥ ಸೂಕ್ಷ್ಮ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ದಿಢೀರ್ ವರ್ಗಾವಣೆ ಅಗತ್ಯವಿರಲಿಲ್ಲ. ಹಿರಿಯ ಅಧಿಕಾರಿಗಳು ಹಾಗೂ ಗೃಹ ಸಚಿವರು, ವರ್ಗಾವಣೆ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ರೇಣುಕಸ್ವಾಮಿ ಮೃತದೇಹ ಸಾಗಿಸಿದ್ದ ಸ್ಕಾರ್ಪಿಯೊ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಅದರ ಮಾಲೀಕ ಪುನೀತ್‌ನನ್ನು ಗುರುವಾರ ವಿಚಾರಣೆ ನಡೆಸಿದರು.

ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ತನಿಖಾಧಿಕಾರಿ ಎದುರು ಹಾಜರಾದ ಪುನೀತ್, ‘ದರ್ಶನ್ ಅವರದು ಹಲವು ವರ್ಷಗಳ ಪರಿಚಯ. ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ನಾನೇ ನಿರ್ವಹಣೆ ಮಾಡುತ್ತಿದ್ದೆ. ಆಗಾಗ ನನ್ನ ವಾಹನಗಳನ್ನು ಕೊಂಡೊಯ್ಯುತ್ತಿದ್ದರು. ಇತ್ತೀಚೆಗೆ, ಚಿಕ್ಕಬಳ್ಳಾಪುರದಿಂದ ಮೇಕೆ ತರಬೇಕೆಂದು ಹೇಳಿ ನನ್ನ ಸ್ಕಾರ್ಪಿಯೊ ತೆಗೆದುಕೊಂಡು ಹೋಗಿದ್ದರು’ ಎಂದು ಹೇಳಿಕೆ ನೀಡಿರುವುದಾಗಿ ಗೊತ್ತಾಗಿದೆ.

‘ನನ್ನ ಸ್ಕಾರ್ಪಿಯೊದಲ್ಲಿ ಮೃತದೇಹ ಸಾಗಿಸಿದ್ದ ವಿಷಯ ಮಾಧ್ಯಮಗಳ ಮೂಲಕ ತಿಳಿಯಿತು. ಕೆಲಸ ನಿಮಿತ್ತ ಬೇರೆ ಊರಿನಲ್ಲಿದ್ದರಿಂದ ಆರಂಭದಲ್ಲಿ ವಿಚಾರಣೆಗೆ ಬರಲು ಆಗಿರಲಿಲ್ಲ. ಈಗ ಹಾಜರಾಗುತ್ತಿದ್ದೇನೆ. ತನಿಖೆಗೆ ಸಹಕರಿಸುತ್ತೇನೆ’ ಎಂದು ಪುನೀತ್ ಹೇಳಿರುವುದಾಗಿ ತಿಳಿದುಬಂದಿದೆ.

ಮೃತದೇಹ ಎಸೆಯಲು ಹೇಳಿದ್ದ ಪಿಎಸ್‌ಐ?

ರೇಣುಕಸ್ವಾಮಿ ಅವರನ್ನು ಕೊಲೆ ಮಾಡಿದ ನಂತರ ಆರೋಪಿಗಳು, ನಗರದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಒಬ್ಬರಿಗೆ (ಪಿಎಸ್‌ಐ) ಕರೆ ಮಾಡಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ‘ಹಣಕಾಸು ವಿಚಾರವಾಗಿ ವ್ಯಕ್ತಿಯೊಬ್ಬನನ್ನು ನಮ್ಮ ಸ್ನೇಹಿತರು ಕೊಂದಿದ್ದಾರೆ. ಅವರು ಪೊಲೀಸರಿಗೆ ಶರಣಾಗಲು ಸಿದ್ಧರಾಗಿದ್ದಾರೆ. ಆದರೆ, ಮೃತದೇಹ ಎಲ್ಲಿ ಎಸೆಯುವುದೆಂಬ ಗೊಂದಲ ಇದೆ’ ಎಂದು ಆರೋಪಿಗಳು ಹೇಳಿದ್ದರು. ಸಲಹೆ ನೀಡಿದ್ದ ಪಿಎಸ್‌ಐ, ‘ಮೃತದೇಹವನ್ನು ನಮ್ಮ ಠಾಣೆ ವ್ಯಾಪ್ತಿಯಲ್ಲಿ ಎಸೆಯಬೇಡಿ. ಕಾಮಾಕ್ಷಿಪಾಳ್ಯದ ಬಳಿ ರಾಜಕಾಲುವೆಯಲ್ಲಿ ಎಸೆಯಿರಿ. ಅದು ತೇಲಿಕೊಂಡು ಹೋಗುತ್ತದೆ. ಮೃತದೇಹ ಸಿಕ್ಕರೆ, ಮುಂದೆ ನೋಡೋಣ’ ಎಂದಿದ್ದರು. ಅದಾದ ನಂತರವೇ ಆರೋಪಿಗಳು, ಮೃತದೇಹವನ್ನು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಬಿಸಾಕಿದ್ದರು. ಈ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.