ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ಜಾಮೀನು ಕೋರಿ ಹೈಕೋರ್ಟ್‌ಗೆ ದರ್ಶನ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 15:32 IST
Last Updated 15 ಅಕ್ಟೋಬರ್ 2024, 15:32 IST
<div class="paragraphs"><p>ದರ್ಶನ್</p></div>

ದರ್ಶನ್

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ನಗರದ ಸೆಷನ್ಸ್‌ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಅವರೀಗ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ಈ ಕುರಿತ ಜಾಮೀನು ಅರ್ಜಿಯನ್ನು ದರ್ಶನ್‌ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎಸ್‌.ಸುನಿಲ್‌ ಕುಮಾರ್ ಮಂಗಳವಾರ ಮಧ್ಯಾಹ್ನ ಹೈಕೋರ್ಟ್‌ ಫೈಲಿಂಗ್ ವಿಭಾಗಕ್ಕೆ ಸಲ್ಲಿಸಿದರು.

ADVERTISEMENT

ಸುಮಾರು 300 ಪುಟಗಳಿಗೂ ಅಧಿಕ ದಸ್ತಾವೇಜು ಹೊಂದಿರುವ ಈ ಅರ್ಜಿಗೆ ಸದ್ಯ ಎಫ್‌ಆರ್‌ ನಂಬರ್‌ ನೀಡಲಾಗಿದ್ದು, ಪರಿಶೀಲನೆ ನಂತರ ಕ್ರಿಮಿನಲ್‌ ಅರ್ಜಿ ಸಂಖ್ಯೆ  ನಮೂದಾಗಬೇಕಿದೆ. ನಂತರವೇ ಅದು ನ್ಯಾಯಪೀಠದ ಮುಂದೆ ಬರಲಿದೆ ಅಥವಾ ಅವರ ಪರ ವಕೀಲರು ಮೆಮೊ ಸಲ್ಲಿಕೆಯ ಮೂಲಕ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸೂಕ್ತ ನ್ಯಾಯಪೀಠದಲ್ಲಿ ಮನವಿ ಮಾಡಲಿದ್ದಾರೆ.

ಯೋಗ್ಯತೆಯ ವಾದಾಂಶಗಳ ಆಧಾರದಲ್ಲಿ ಜಾಮೀನು ನೀಡುವಂತೆ ಕೋರಲಾಗಿರುವ ಈ ಅರ್ಜಿಯಲ್ಲಿ ದರ್ಶನ್‌ ಅವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ. ‘ದರ್ಶನ್‌ ಈಗ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು ಅಗತ್ಯ ಚಿಕಿತ್ಸೆಗಾಗಿ ತಕ್ಷಣವೇ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಲಾಗಿದೆ.

ಅರ್ಜಿಯ ಮುಖ್ಯಾಂಶಗಳು: 

* ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯ ವೇಳೆಯಲ್ಲಿ ಅಮಾನತು ಪಡಿಸಿಕೊಂಡಿರುವ ವಸ್ತುಗಳೆಲ್ಲಾ ಅವರೇ ಯೋಜಿಸಿ ತಯಾರು ಮಾಡಿದವುಗಳಾಗಿವೆ ಮತ್ತು ನಿರ್ಮಿಸಿದವುಗಳಾಗಿವೆ.

* ದರ್ಶನ್‌ ಅವರಿಗೆ ಬಂದ ಫೋನ್‌ ಕಾಲ್‌ಗಳಲ್ಲಿ ಆರೋಪಿಗಳ ಜೊತೆ ಮಾತನಾಡಿ ಸಂಚು ರೂಪಿಸಲಾಗಿದೆ ಎಂಬುದೆಲ್ಲಾ ಸುಳ್ಳು. ಅವರು ಮಾತನಾಡಿರುವ ಕಾಲ್‌ಗಳಲ್ಲಿ ಯಾವೊಂದೂ ಅಸ್ವಾಭಾವಿಕ ಕಾಲ್‌ಗಳಿಲ್ಲ.

* ಪ್ರತ್ಯಕ್ಷ ಸಾಕ್ಷಿದಾರರನ್ನು ತನಿಖಾಧಿಕಾರಿಗಳೇ ಸೃಷ್ಟಿ ಮಾಡಿದ್ದಾರೆ ಮತ್ತು ಅವರ ಹೇಳಿಕೆಗಳನ್ನು ತಡವಾಗಿ ದಾಖಲು ಮಾಡಿಕೊಳ್ಳಲಾಗಿದೆ.

* ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.