ADVERTISEMENT

ಕೊಲೆ ಆರೋಪಿಗೆ ಹೈಕೋರ್ಟ್ ಜಾಮೀನು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:53 IST
Last Updated 25 ಅಕ್ಟೋಬರ್ 2024, 23:53 IST
ಗೇಟ್‌ ತೆರವು ಹೈಕೋರ್ಟ್ ತಾಕೀತು
ಗೇಟ್‌ ತೆರವು ಹೈಕೋರ್ಟ್ ತಾಕೀತು   

ಬೆಂಗಳೂರು: ‘ಕೊಲೆ ಉದ್ದೇಶಪೂರ್ವಕವೊ ಅಥವಾ ಹಠಾತ್ ಪ್ರಚೋದನೆಯಿಂದ ಉಂಟಾದದ್ದೋ ಎಂಬುದು ವಿಚಾರಣೆಯಲ್ಲೇ ಹೊರಬರಬೇಕು’ ಎಂಬ ಅಭಿಪ್ರಾಯದೊಂದಿಗೆ ಕೊಲೆ ಪ್ರಕರಣವೊಂದರ ಆರೋಪಿಗೆ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ 2022ರ ಆಗಸ್ಟ್‌ನಲ್ಲಿ ನಡೆದಿದ್ದ ವೆಂಕಟೇಶ್‌ ಎಂಬುವವರ ಕೊಲೆ ಪ್ರಕರಣದ ಮೊದಲ ಆರೋಪಿ ಕೆ.ಶಿವಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ಅವರು, ‘ಹಲ್ಲೆ ಉದ್ದೇಶಪೂರ್ವಕವಾಗಿ ನಡೆದಿಲ್ಲ. ಆರೋಪಿಯು ವೆಂಕಟೇಶಪ್ಪ ನೀಡಿದ್ದ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಕಳೆದುಕೊಂಡು ಹಲ್ಲೆ ನಡೆಸಿರುತ್ತಾರೆ. ಆದರೆ, ಹತ್ಯೆ ಮಾಡುವ ಯಾವುದೇ ಉದ್ದೇಶ ಹೊಂದಿರಲಿಲ್ಲ. ಆದ್ದರಿಂದ, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 300(1) ಅಡಿಯಲ್ಲಿ ವಿನಾಯಿತಿಗೆ ಅರ್ಹರಾಗಿದ್ದು, ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದ್ದರು.

ADVERTISEMENT

ಈ ವಾದವನ್ನು ಅಲ್ಲಗಳೆದಿದ್ದ ಪ್ರಾಸಿಕ್ಯೂಷನ್‌ ಪರ ವಕೀಲರು, ‘ಪ್ರಕರಣದಲ್ಲಿ ಮೂವರು ಪ್ರತ್ಯಕ್ಷ ಸಾಕ್ಷಿದಾರರಿದ್ದು, ಆರೋಪಿಗೆ ಜಾಮೀನು ನೀಡಿದರೆ, ಸಾಕ್ಷಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು’ ಎಂದು ಆಕ್ಷೇಪಿಸಿದ್ದರು. ಆದರೆ, ನ್ಯಾಯಪೀಠ ಅರ್ಜಿದಾರರ ಪರ ವಕೀಲರ ವಾದವನ್ನು ಮಾನ್ಯ ಮಾಡಿ ಷರತ್ತುಬದ್ಧ ಜಾಮೀನು ನೀಡಿದೆ.

‘ನನ್ನ ತಂದೆ ವೆಂಕಟೇಶ್‌ ಮೇಲೆ ಶಿವಪ್ಪ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಲ್ಲೆ ನಡೆದ ಮರುದಿನವೇ ಅವರು ಮೃತಪಟ್ಟಿದ್ದಾರೆ’ ಎಂದು ಅವರ ಪುತ್ರ ಮುರಳಿ ಎಂಬುವವರು ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಕಲಂ 302ರ ಅನುಸಾರ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸೆಷನ್ಸ್‌ ನ್ಯಾಯಾಲಯ ಶಿವಪ್ಪ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.