ಚಿತ್ರದುರ್ಗ: ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರು ಬಂಧಿಸಿದ್ದಾರೆ.
‘ಮುರುಘಾ ಶರಣರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದೇವೆ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಭಾರಿ ಸಂಖ್ಯೆಯಲ್ಲಿ ಮುರುಘಾ ಮಠಕ್ಕೆ ಬಂದಿದ್ದ ಪೊಲೀಸ್ ತನಿಖಾ ತಂಡ, ಮುರುಘಾ ಶರಣರನ್ನು ವಶಕ್ಕೆ ಪಡೆದು ಬಿಗಿ ಭದ್ರತೆಯಲ್ಲಿ ತಮ್ಮೊಂದಿಗೆ ಕರೆದುಕೊಂಡು ಹೋದರು. ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ತನಿಖಾಧಿಕಾರಿ ಡಿವೈಎಸ್‌ಪಿ ಅನಿಲ್‌ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಇದಕ್ಕೂ ಮೊದಲು ಗುರುವಾರ ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್ ವಾರ್ಡನ್ ಅವರನ್ನು ತನಿಖಾ ತಂಡ ವಶಕ್ಕೆ ಪಡೆದಿತ್ತು.
ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಆಗಸ್ಟ್ 26ರಂದು ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿ ಎದುರು ಮಕ್ಕಳ ಹಾಜರು ಪಡಿಸಿದ ಬಳಿಕ ಅಂದು ರಾತ್ರಿ ನಜರಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶರಣರು ಸೇರಿ ಐವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಮೈಸೂರಿನಿಂದ ಪ್ರಕರಣವನ್ನು ಆ.27ರಂದು ಚಿತ್ರದುರ್ಗದ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣ ದಾಖಲಾಗಿ ಕೆಲ ದಿನಗಳಾದರೂ ಮುರುಘಾ ಶರಣರನ್ನು ಬಂಧಿಸದೇ ಇರುವುದನ್ನು ಖಂಡಿಸಿ ಮೂರ್ನಾಲ್ಕು ದಿನಗಳಿಂದ ವಿವಿಧ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದವು.
ಮಠದ ಸುತ್ತ ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮುರುಘಾ ಶ್ರೀಗೆ ವಿಶೇಷ ವಾರ್ಡ್: ಜಿಲ್ಲಾ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ಮುರುಘಾ ಶರಣರ ಸಲುವಾಗಿಯೇ ಕಳೆದ ಮೂರು ದಿನಗಳಿಂದ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಅದೇ ವಾರ್ಡ್‌ನಲ್ಲಿ ಶರಣರನ್ನು ದಾಖಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
*
ಶಿವಮೂರ್ತಿ ಮುರುಘಾ ಶರಣರನ್ನು ಮುರುಘಾ ಮಠದಲ್ಲಿಯೇ ಬಂಧಿಸಲಾಗಿದೆ. ತನಿಖಾ ತಂಡ ಅವರನ್ನು ವಿಚಾರಣೆಗೆ ಒಳಪಡಿಸಿದೆ.
-ಕೆ.ಪರಶುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇವನ್ನೂ ಓದಿ...
ಲೈಂಗಿಕ ಕಿರುಕುಳ ಆರೋಪ: ಮುರುಘಾ ಶ್ರೀ ಪ್ರಕರಣ ವರ್ಗಾವಣೆಗೆ ಆಗ್ರಹ
ಮುರುಘಾಶರಣರ ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಆರಗ ವಿರುದ್ಧ ದೂರು
ಲೈಂಗಿಕ ದೌರ್ಜನ್ಯ ಆರೋಪ: ಮಠಕ್ಕೆ ದೌಡಾಯಿಸಿದ ಪೊಲೀಸರು, ಅಜ್ಞಾತ ಸ್ಥಳಕ್ಕೆ ಶರಣರು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.