ಚಿತ್ರದುರ್ಗ: ಕಾರಾಗೃಹದಲ್ಲಿ ಎದೆನೋವು ಕಾಣಿಸಿಕೊಂಡಿದ್ದರಿಂದ ಶಿವಮೂರ್ತಿ ಮುರುಘಾ ಶರಣರನ್ನು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, ಇದಕ್ಕೆ ನ್ಯಾಯಾಲಯ ಅನುಮತಿ ನೀಡಲಿಲ್ಲ.
ಹೊರರೋಗಿಗಳ ವಿಭಾಗದಲ್ಲಿನ ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್, ಅಲ್ಟ್ರಾಸೌಂಡ್, ರಕ್ತ ಪರೀಕ್ಷೆ ಸೇರಿ ಇತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ಹೃದಯ ಸಂಬಂಧಿ ಸಮಸ್ಯೆ ಪತ್ತೆಯಾಗಿದ್ದರಿಂದ ತಜ್ಞ ವೈದ್ಯರ ತಂಡವನ್ನು ದಾವಣಗೆರೆಯಿಂದ ಕರೆತರಲಾಗಿತ್ತು.
‘ದಾವಣಗೆರೆಯ ಎಸ್.ಎಸ್. ನಾರಾಯಣ ಹೃದಯಾಲಯದ ವೈದ್ಯರಾದ ಡಾ.ಮಲ್ಲೇಶ ಹಾಗೂ ಶ್ರೀನಿವಾಸ್ ಶ್ರೀಗಳ ಆರೋಗ್ಯ ಪರೀಕ್ಷೆ ಮಾಡಿದ್ದು, ಹೃದ್ರೋಗ ಸಮಸ್ಯೆ ಇರುವುದು ಖಚಿತವಾಗಿದೆ. ವೈದ್ಯರ ತಂಡ ಹೆಚ್ಚಿನ ಚಿಕಿತ್ಸೆಯ ಸಲಹೆ ನೀಡಿದೆ. ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು’ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು.
ಇಷ್ಟಲಿಂಗ ಪೂಜೆಗೆ ಅವಕಾಶ ನಿರಾಕರಣೆ: ಗುರುವಾರ ರಾತ್ರಿ ಪೋಕ್ಸೊ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಇಷ್ಟಲಿಂಗ ಪೂಜೆ ನೆರವೇರಿಸಲು ಸಾಧ್ಯವಾಗಲಿಲ್ಲ. ಪೂಜಾ ಸಾಮಗ್ರಿಗಳೊಂದಿಗೆ ಬಂದಿದ್ದ ಮಠದ ಸಹಾಯಕರಿಗೆ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ಮಹಾಂತರುದ್ರ ಸ್ವಾಮೀಜಿ ಪ್ರಭಾರ ಪೀಠಾಧಿಪತಿ
ಶಿವಮೂರ್ತಿ ಮುರುಘಾ ಶರಣರ ಅನುಪಸ್ಥಿತಿಯಲ್ಲಿ ಮುರುಘಾ ಮಠದ ತಾತ್ಕಾಲಿಕ ಪೀಠಾಧಿಪತಿಯಾಗಿ ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
‘ಮಠದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮಠದ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹುದ್ದೆಗೆ ನಿವೃತ್ತ ನ್ಯಾಯಧೀಶ ಎಸ್.ಬಿ. ವಸ್ತ್ರದಮಠ ಅವರನ್ನು ನೇಮಕ ಮಾಡಲಾಗಿದೆ’ ಎಂದು ಮಠದ ಮೂಲಗಳು ಮಾಹಿತಿ ನೀಡಿವೆ.
ಕೈದಿ ಸಂಖ್ಯೆ 2261
ಮುರುಘಾ ಶರಣರನ್ನು ಶುಕ್ರವಾರ ನಸುಕಿನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಶುಕ್ರವಾರ ನಸುಕಿನ 3 ಗಂಟೆಯ ಸುಮಾರಿಗೆ ಶರಣರು ಜೈಲು ಪ್ರವೇಶಿಸಿದರು. ಶಿವಮೂರ್ತಿ ಮುರುಘಾ ಶರಣರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 2261 ನೀಡಲಾಗಿದೆ. ಕಾರಾಗೃಹ ಪ್ರವೇಶಿಸಿದ ಬಳಿಕ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದಂತೆ ಕಂಡುಬಂದರು ಎಂದು ಮೂಲಗಳು ಹೇಳಿವೆ.
ಹಾಸ್ಟೆಲ್ ವಾರ್ಡನ್ ಬಂಧನ
ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ 2ನೇ ಅರೋಪಿಯಾಗಿರುವ ಹಾಸ್ಟೆಲ್‌ನ ಮಹಿಳಾ ವಾರ್ಡನ್ ಅನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದರು.
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಎರಡನೇ ಆರೋಪಿ. ಮತ್ತೊಂದು ಪ್ರಕರಣದಲ್ಲಿ ದೂರುದಾರರಾಗಿರುವ ವಾರ್ಡನ್ ಗುರುವಾರ ನ್ಯಾಯಾಲಯಕ್ಕೆ ಹೇಳಿಕೆ ದಾಖಲಿಸಲು ಬಂದಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು.
ಶುಕ್ರವಾರ ಮತ್ತೆ ಆರೋಪಿಯನ್ನು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತು. ವಿಚಾರಣೆ ಪೂರ್ಣಗೊಂಡ ಬಳಿಕ ಬಂಧಿಸಲಾಯಿತು. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು, ವಿಚಾರಣೆ ಹಾಜರಾಗುವಂತೆ ಮೌಖಿಕವಾಗಿ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.
*
ಮುರುಘಾ ಶ್ರೀ ಪ್ರಕರಣದ ತನಿಖೆ ವಿಷಯದಲ್ಲಿ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.