ADVERTISEMENT

ಹೈಕೋರ್ಟ್ ತುರ್ತು ವಿಚಾರಣೆಯಲ್ಲಿ ಮುರುಘಾ ಶರಣರಿಗೆ ಸಿಕ್ಕ ಬಿಡುಗಡೆ ಆದೇಶ

ಹೈಕೋರ್ಟ್‌ ಹೇಳಿದ್ದೇನು? ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 15:52 IST
Last Updated 20 ನವೆಂಬರ್ 2023, 15:52 IST
<div class="paragraphs"><p>ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಚಿತ್ರದುರ್ಗ ಕಾರಾಗೃಹದಿಂದ ಹೊರಬಂದರು.</p></div>

ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಚಿತ್ರದುರ್ಗ ಕಾರಾಗೃಹದಿಂದ ಹೊರಬಂದರು.

   

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಸೋಮವಾರ ಬೆಳಿಗ್ಗೆ ಹೊರಡಿಸಿದ್ದ ಜಾಮೀನು ರಹಿತ ಬಂಧನ ವಾರಂಟ್‌ಗೆ ಸಂಜೆ ತಡೆ ನೀಡಿರುವ ಹೈಕೋರ್ಟ್‌, ಆರೋಪಿಯ ಬಿಡುಗಡೆಗೆ ಆದೇಶಿಸಿದೆ.

ವಾರಂಟ್‌ ಪ್ರಶ್ನಿಸಿ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಸಂಜೆ ತುರ್ತು ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಹಿರಿಯ ವಕೀಲ ಸಂಜಯ್ ಚೌಟ, ‘ಶರಣರ ವಿರುದ್ಧದ ಮೊದಲ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಆರೋಪಿಯು ಚಿತ್ರದುರ್ಗ ಪ್ರವೇಶಿಸಬಾರದು. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಆದರೆ, ವಿಚಾರಣಾ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್‌ ಪರ ವಕೀಲರು ಇದೇ 18ರಂದು ಮೆಮೊ ಸಲ್ಲಿಸಿದ್ದಾರೆ. ಇದನ್ನು ಸೆಷನ್ಸ್‌ ನ್ಯಾಯಾಲಯ ಪರಿಗಣಿಸಿದೆ‘ ಎಂದು ಆಕ್ಷೇಪಿಸಿದರು. 

‘ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮತ್ತೊಂದು ಏಕಸದಸ್ಯ ನ್ಯಾಯಪೀಠವು; ದೋಷಾರೋಪ ನಿಗದಿಯ ನಂತರದ ಪ್ರಕ್ರಿಯೆಯನ್ನು ಮುಂದೂಡುವಂತೆ ಸೆಷನ್ಸ್‌ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಹೀಗಿದ್ದರೂ, ಸೆಷನ್ಸ್‌ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ ಸಲ್ಲಿಸಿದ ಮೆಮೊ ಪರಿಗಣಿಸಿದ್ದಾರೆ. ಸೋಮವಾರ (ನ.20) ಮಧ್ಯಾಹ್ನ 12.30ಕ್ಕೆ ಶರಣರ ವಿರುದ್ಧ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಿದ್ದಾರೆ. ಇದರನ್ವಯ ಅವರನ್ನು ಬಂಧಿಸಿ ಮಧ್ಯಾಹ್ನವೇ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪರಿಣಾಮ ಅವರನ್ನು ಚಿತ್ರದುರ್ಗ ಜೈಲಿಗೆ ಕಳುಹಿಸಲಾಗಿದೆ. ಇದು ಹೈಕೋರ್ಟ್‌ ಆದೇಶದ ಉಲ್ಲಂಘನೆ‘ ಎಂದರು.

ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪ್ರಾಸಿಕ್ಯೂಟರ್‌ ವಿಜಯಕುಮಾರ ಮಜಗೆ, ‘ಆರೋಪಿ ವಿರುದ್ಧ ಎರಡು ಪ್ರಕರಣಗಳಿದ್ದು ಅವುಗಳ ಕೇಸ್‌ ನಂಬರ್ ಬೇರೆ ಬೇರೆ‘ ಎಂದರು. ಆದರೆ, ಇದಕ್ಕೆ ಶರಣರ ಪರ ವಕಾಲತ್ತು ವಹಿಸಿರುವ ವಕೀಲ ಸಂದೀಪ್‌ ಎಸ್‌.ಪಾಟೀಲ್, ‘ಒಂದೇ ಕ್ರೈಂ ನಂಬರ್‌. ಆದರೆ, ಎರಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ‘ ಎಂದು ಸಮರ್ಥಿಸಿಕೊಂಡರು.

ವಾದ–‍ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಒಳ್ಳೆಯ ಪ್ರಕರಣವಿರಲಿ, ಕೆಟ್ಟ ಪ್ರಕರಣವೇ ಇರಲಿ. ಕಾನೂನು ಪ್ರಕ್ರಿಯೆ ಪ್ರಕಾರವೇ ನಡೆದುಕೊಳ್ಳಬೇಕು. ಸಮಾಜದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ ಎಂದ ಮಾತ್ರಕ್ಕೆ ಹೈಕೋರ್ಟ್‌ ಆದೇಶವನ್ನು ತಪ್ಪಾಗಿ ಅರ್ಥೈಸಲಾಗದು. ಯಾರೇ ಆದರೂ ಕಾನೂನು ಪಾಲಿಸಬೇಕು‘ ಎಂದು ವಿಜಯ ಮಜಗೆ ಅವರಿಗೆ ಹೇಳಿ, ವಾರಂಟ್‌ಗೆ ತಡೆ ನೀಡಿ ಬಿಡುಗಡೆಗೆ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.