ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರು ವಿದ್ಯಾರ್ಥಿನಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಹೇಳಿಕೆ ನೀಡಿದ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
‘ಆಮಿಷ ಒಡ್ಡಿರುವುದಕ್ಕೆ ಪೂರಕವಾದ ಸಾಕ್ಷ್ಯದೊಂದಿಗೆ ನ.29ರಂದು ವಿಚಾರಣೆಗೆ ಹಾಜರಾಗಿ’ ಎಂದು ತನಿಖಾಧಿಕಾರಿ ಡಿವೈಎಸ್‌ಪಿ ಲೋಕೇಶ್ ನೋಟಿಸ್ ಜಾರಿ ಮಾಡಿದ್ದಾರೆ. ಮೇಲ್ ಮೂಲಕ ನೋಟಿಸ್ ತಲುಪಿರುವುದನ್ನು ‘ಒಡನಾಡಿ’ ಖಚಿತಪಡಿಸಿದೆ.
₹ 3 ಕೋಟಿ ಆಮಿಷ ಒಡ್ಡಿರುವುದನ್ನು ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಪರಶುರಾಮ್ ಬಹಿರಂಗಪಡಿಸಿದ್ದರು. ಸಚಿವರೊಬ್ಬರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಈ ಹೇಳಿಕೆ ಸಂಚಲನ ಸೃಷ್ಟಿಸಿತ್ತು.
ಡಿ.12ರವರೆಗೆ ನ್ಯಾಯಾಂಗ ಬಂಧನ
ಶಿವಮೂರ್ತಿ ಶರಣರ ವಿರುದ್ಧ ಪ್ರಕರಣ ದಾಖಲಿಸುವಂತೆ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಶಿಕ್ಷಕ ಬಸವರಾಜೇಂದ್ರ ನ್ಯಾಯಾಂಗ ಬಂಧನದ ಅವಧಿಯನ್ನು ಡಿ.12ರವರೆಗೆ ವಿಸ್ತರಿಸಲಾಗಿದೆ.
ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡಿದ್ದರಿಂದ ಇಬ್ಬರು ಆರೋಪಿಗಳನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಧೀಶರು ಆದೇಶಿಸಿದರು.
ಜಾಮೀನು: ಡಿ.1ಕ್ಕೆ ವಿಚಾರಣೆ
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಡಿ.1ಕ್ಕೆ ಮುಂದೂಡಿದೆ.
ಎರಡನೇ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎದುರು ಬಂದಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಡಿ.1ಕ್ಕೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.