ಮೈಸೂರು: ‘ಸಂಗೀತ ಶಿಕ್ಷಣದ ವ್ಯಾಪ್ತಿ ವಿಸ್ತರಣೆಗಾಗಿ ಸಂಗೀತ ಮತ್ತು ನೃತ್ಯ ಕಲೆಗಳ ವಿಷಯದಲ್ಲಿ ಸರ್ಟಿಫಿಕೆಟ್ ಹಾಗೂ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲು 17 ಖಾಸಗಿ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಇಲ್ಲಿನ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ತಿಳಿಸಿದರು.
‘ಕರ್ನಾಟಕ ಸಂಗೀತ, ಭರತನಾಟ್ಯ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಸುಗಮ ಸಂಗೀತ, ವೀಣೆ, ಸಿತಾರ್, ಹಾರ್ಮೋನಿಯಂ ಸೇರಿದಂತೆ ಒಟ್ಟು 16 ವಿಷಯಗಳಲ್ಲಿ ಆಸಕ್ತರು ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಅಭ್ಯಾಸ ಮಾಡಬಹುದು. ಪ್ರಸಕ್ತ ಸಾಲಿನಿಂದಲೇ ಅನುಮೋದನೆ ನೀಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
‘ಮೊದಲ ಹಂತದಲ್ಲಿ 10 ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈಗ 17 ಸಂಸ್ಥೆಗಳೊಂದಿಗೆ ಪ್ರಕ್ರಿಯೆ ನಡೆದಿದೆ. ಇವುಗಳಲ್ಲಿ 2 ಸಂಸ್ಥೆಗಳು ಸಂಶೋಧನಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಪಠ್ಯಕ್ರಮವನ್ನು ನಾವೇ ನೀಡುತ್ತೇವೆ. ಪರೀಕ್ಷೆಯನ್ನೂ ನಡೆಸುತ್ತೇವೆ. ಪದವಿ ಪ್ರಮಾಣವಪತ್ರವನ್ನೂ ಕೋಡುತ್ತೇವೆ. ಸಂಸ್ಥೆಗಳು ತರಗತಿಗಳನ್ನು ನಡೆಸುತ್ತವೆ. ಈ ಮೂಲಕ, ಈವರೆಗೆ ಮೈಸೂರಿಗೆ ಸೀಮಿತವಾಗಿದ್ದ ಶೈಕ್ಷಣಿಕ ಚಟುವಟಿಕೆಗಳನ್ನು ರಾಜ್ಯದಾದ್ಯಂತ ವಿಸ್ತರಿಸಲಾಗಿದೆ. ರಾಜ್ಯಪಾಲರಿಂದ ಅನುಮೋದನೆ ದೊರೆತಿದೆ. ವಿಶ್ವವಿದ್ಯಾಲಯವು ಸ್ವಂತ ನೆಲೆ ಹೊಂದುವುದು ಸಾಧ್ಯವಾಗದಿದ್ದರೂ, ಚಟುವಟಿಕೆಗಳನ್ನು ಈ ಮೂಲಕ ವಿಸ್ತರಿಸುತ್ತಿದೆ’ ಎಂದು ಹೇಳಿದರು.
‘ವಿಶ್ವವಿದ್ಯಾಲಯದಿಂದ ಅಲ್ಪಾವಧಿ ಕೋರ್ಸ್‌ಗಳನ್ನೂ ಆರಂಭಿಸಲಾಗುವುದು’ ಎಂದು ತಿಳಿಸಿದರು.
‘ಬೆಂಗಳೂರಿನ ಮಲ್ಲೇಶ್ವರಂ ಮಹಿಳಾ ಸಂಘ, ರಾಜೇಶ್ವರಿ ಕಲಾನಿಕೇತನ, ಸಮರ್ಥನಂ ಟ್ರಸ್ಟ್, ಕರ್ನಾಟಕ ಭರತಂಗಮ ಪ್ರತಿಷ್ಠಾನ, ಕಲಾ ಕದಂಬ ಕಲಾ ಕೇಂದ್ರ, ಸೃಷ್ಟಿ ಪ್ರದರ್ಶಕ ಕಲೆಗಳು ಮತ್ತು ನೃತ್ಯ ಥೆರಫಿ ಕೇಂದ್ರ, ನಾಟ್ಯಯಾನ ಟ್ರಸ್ಟ್, ಲಕ್ಷ್ಮಿನಾರಾಯಣ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್, ವೆಂಕಟ್ ಸಂಗೀತ ಹಾಗೂ ನೃತ್ಯ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ದಕ್ಷಿಣ ಜಿಲ್ಲೆ ನೆಲಮಂಗಲದ ದಿವ್ಯಜ್ಯೋತಿ ವಿದ್ಯಾಕೇಂದ್ರ, ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರ, ಮಂಗಳೂರಿನ ಸಂದೇಶ ಪ್ರತಿಷ್ಠಾನ ಹಾಗೂ ಮಾಂಡ್ ಸೊಭಾಣ್, ಹುಬ್ಬಳ್ಳಿಯ ಕಲಾ ಸುಜಯ, ಗುಬ್ಬಿಯ ವಿವೇಕಾನಂದ ವಿದ್ಯಾಪೀಠ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕನಕಪ್ರಿಯ ನಾಟ್ಯಕಲಾ ಕೇಂದ್ರ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಗಳಲ್ಲಿ ಅಗತ್ಯ ಸೌಕರ್ಯ ಇರುವುದನ್ನು ಪರಿಶೀಲಿಸಲಾಗಿದೆ’ ಎಂದು ವಿವರಿಸಿದರು.
‘ಈವರೆಗೆ ಪ್ರೌಢಶಿಕ್ಷಣ ಮಂಡಳಿಯು ರಾಜ್ಯದಾದ್ಯಂತ ನಡೆಸುತ್ತಿದ್ದ ಸಂಗೀತ, ತಾಳವಾದ್ಯ ಹಾಗೂ ನೃತ್ಯಕ್ಕೆ ಸಂಬಂಧಿಸಿದ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಪರೀಕ್ಷೆಗಳನ್ನು ನಮ್ಮ ವಿಶ್ವವಿದ್ಯಾಲಯದಿಂದ ನಿರ್ವಹಿಸಲು ಅನುಮೋದನೆ ದೊರೆತಿದೆ. ಏಪ್ರಿಲ್–ಮೇನಿಂದ ಆರಂಭಿಸಲಾಗುವುದು. ಇದರಿಂದಾಗಿ, ಈ ಪರೀಕ್ಷೆಗಳಿಗೆ ವಿಶ್ವದಾದ್ಯಂತ ಮನ್ನಣೆ ಸಿಗಲಿದೆ’ ಎಂದು ತಿಳಿಸಿದರು.
‘ಸರ್ಕಾರದ ಸೂಚನೆ ಮೇರೆಗೆ, ‘ಯುವನಿಧಿ’ ಯೋಜನೆಗೆ ಫಲಾನುಭವಿಗಳಾಗಬಹುದಾದ ವಿಶ್ವವಿದ್ಯಾಲಯದ ಪದವೀಧರರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ವಾರದಲ್ಲೇ ಅಪ್‌ಲೋಡ್ ಮಾಡಿದ್ದೇವೆ’ ಎಂದು ಹೇಳಿದರು.
‘ವಿಶ್ವವಿದ್ಯಾಲಯವು ಸ್ವಂತ ನೆಲೆ ಹೊಂದಲು ಸಾತಗಳ್ಳಿಯಲ್ಲಿ ಮುಡಾದಿಂದ ಜಾಗ ನೀಡಲಾಗಿತ್ತು. ಅಲ್ಲಿ ಹೈಟೆನ್ಷನ್ ಮಾರ್ಗ ಹಾದು ಹೋಗಿದ್ದು ಸೇರಿದಂತೆ ಕೆಲವು ಕಾರಣಗಳಿಂದ ಅದನ್ನು ಪಡೆದುಕೊಳ್ಳಲಾಗಲಿಲ್ಲ. ಅದರ ಬದಲಿಗೆ, ನಾಡನಹಳ್ಳಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ 5 ಎಕರೆ ಸಿಎ (ನಾಗರಿಕ ಸೌಲಭ್ಯ) ನಿವೇಶನವನ್ನು ಖರೀದಿಸಿದ್ದೇವೆ. ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.
ಕುಲಸಚಿವರಾದ ಪ್ರೊ.ಎಂ.ಕೆ. ಮಹದೇವನ್ ಹಾಗೂ ರಾಜೇಶ್ ಎಂ.ಆರ್. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.