ADVERTISEMENT

ಸಂಗೀತ ವಿ.ವಿ ಅವ್ಯವಸ್ಥೆ: ಬಿಳಿ ಹಾಳೆಯಲ್ಲೇ ಪರೀಕ್ಷೆ!

ಮೊದಲ ಅವಧಿ ಪರೀಕ್ಷೆ ವಿಳಂಬ, ಸಂಜೆ 4ಕ್ಕೆ ಇದ್ದ ಎರಡನೇ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 0:36 IST
Last Updated 28 ಜುಲೈ 2024, 0:36 IST
ಬೆಂಗಳೂರಿನ ಜ್ಞಾನಭಾರತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಪರೀಕ್ಷೆಯ ಅವ್ಯವಸ್ಥೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಜ್ಞಾನಭಾರತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಪರೀಕ್ಷೆಯ ಅವ್ಯವಸ್ಥೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.   

ಬೆಂಗಳೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಶನಿವಾರ ನಡೆಸಿದ ಪರೀಕ್ಷೆಯು ಅವ್ಯವಸ್ಥೆಯ ಆಗರವಾಗಿದ್ದರಿಂದ ವಿದ್ಯಾರ್ಥಿಗಳು ಪರದಾಡಿದರು.

ಬೆಂಗಳೂರಿನ ಜ್ಞಾನ ಭಾರತಿ ಆವರಣದ ಕೆಲ ಕೊಠಡಿಗಳಲ್ಲಿ ಎರಡು ಗಂಟೆ ತಡವಾಗಿ ಪ್ರಶ್ನೆಪತ್ರಿಕೆ ನೀಡಿದರೆ, ಕೆಲ ಕೊಠಡಿಗಳಲ್ಲಿ ಉತ್ತರ ಪತ್ರಿಕೆಗಳ ಬುಕ್‌ಲೆಟ್‌ ಲಭ್ಯವಿಲ್ಲದ ಕಾರಣ ಬಳಿ ಹಾಳೆಗಳಲ್ಲೇ ಪರೀಕ್ಷೆ ಬರೆಸಲಾಯಿತು.

ಜುಲೈ 27ರಂದು ಮಧ್ಯಾಹ್ನ 1ಕ್ಕೆ ಭರತನಾಟ್ಯ ಜೂನಿಯರ್ ಹಾಗೂ ಸಂಜೆ 4ರಿಂದ ದೃಶ್ಯ– ಶ್ರವಣ ಜ್ಞಾನ ವಿಷಯಗಳ ಲಿಖಿತ ಪರೀಕ್ಷೆ ಆಯೋಜಿಸಲಾಗಿತ್ತು. ರಾಜ್ಯದಾದ್ಯಂತ 17 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ ಬೆಂಗಳೂರು ಹಾಗೂ ಸುತ್ತಲ ಪ್ರದೇಶದ ವಿದ್ಯಾರ್ಥಿಗಳೇ ಐದು ಸಾವಿರಕ್ಕೂ ಹೆಚ್ಚು ಇದ್ದರು.

ADVERTISEMENT

ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದರೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣ ಹಾಗೂ ದೇವನಹಳ್ಳಿ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. 

ಸಂಚಾರ ದಟ್ಟಣೆಗೆ ಸಿಲುಕಿದ ವಿದ್ಯಾರ್ಥಿಗಳು: ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯಿಂದಾಗಿ ಪರೀಕ್ಷಾ ಕೇಂದ್ರ ತಲುಪಲು ವಿದ್ಯಾರ್ಥಿಗಳು ಪರದಾಡಿದರು. ‘ಜ್ಞಾನ ಭಾರತಿ ಆವರಣದಲ್ಲಿ ಮಧ್ಯಾಹ್ನ 1ಕ್ಕೆ ಇದ್ದ ಪರೀಕ್ಷೆಗೆ 11 ಗಂಟೆಗೆ ಮನೆ ಬಿಟ್ಟರೂ ನಿಗದಿತ ಅವಧಿಯ ಒಳಗೆ ತಲುಪಲು ಸಾಧ್ಯವಾಗಲಿಲ್ಲ. ನಿತ್ಯದ ದಟ್ಟಣೆ ಜೊತೆಗೆ ವಿದ್ಯಾರ್ಥಿಗಳನ್ನು ಕರೆತಂದಿದ್ದ ಪೋಷಕರ ವಾಹನಗಳು ಸೇರಿಕೊಂಡು ವಾಹನಗಳ ದಟ್ಟಣೆ ಮಿತಿ ಮೀರಿತ್ತು. ಇದರಿಂದ ಸಾಕಷ್ಟು ಸಂಕಷ್ಟ ಅನುಭವಿಸಿದೆವು’ ಎಂದು ಪೋಷಕ ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪರೀಕ್ಷೆ ಇರುವ ಕುರಿತು ಸ್ಥಳೀಯ ಹಾಗೂ ಸಂಚಾರ ಪೊಲೀಸರಿಗೂ ವಿಶ್ವವಿದ್ಯಾಲಯ ಮಾಹಿತಿ ನೀಡಿರಲಿಲ್ಲ. ಇದರಿಂದ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಿರಲಿಲ್ಲ ಎಂದು ದೂರಿದರು.

ನೂರಾರು ಮಕ್ಕಳು ಪರೀಕ್ಷಾ ಕೊಠಡಿಗಳ ಮಾಹಿತಿ ಇಲ್ಲದೆ ಸಂಕಷ್ಟ ಅನುಭವಿಸಿದರು. ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅವ್ಯವಸ್ಥೆ ಖಂಡಿಸಿ ಕೆಲವರು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

‘ಈ ಮೊದಲು ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ನಡೆಸುತ್ತಿತ್ತು. ಈಗ ಸಂಗೀತ ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯದಲ್ಲಿ ಅಗತ್ಯ ಅನುದಾನ, ಸಿಬ್ಬಂದಿ, ಸೌಕರ್ಯಗಳು ಇಲ್ಲದ ಕಾರಣ ಇಂತಹ ಅವ್ಯವಸ್ಥೆಗೆ ದಾರಿ ಮಾಡಿಕೊಟ್ಟಿದೆ’ ಎಂದು ಪರೀಕ್ಷಾ ಉಸ್ತುವಾರಿ ಹೊತ್ತಿದ್ದ, ಹೆಸರು ಹೇಳಲು ಬಯಸದ ಅಧಿಕಾರಿ ಹೇಳಿದರು. 

ಬೆಂಗಳೂರಿನ ಜ್ಞಾನಭಾರತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಪರೀಕ್ಷೆಯ ಅವ್ಯವಸ್ಥೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೆ ಪತ್ರಿಕೆ ಎರಡು ಗಂಟೆ ವಿಳಂಬ 

ಭರತನಾಟ್ಯ ಜೂನಿಯರ್ ವಿಷಯದ ಪರೀಕ್ಷೆ ಮಧ್ಯಾಹ್ನ 1ಕ್ಕೆ ನಿಗದಿಯಾಗಿತ್ತು. ಕೆಲ ಕೊಠಡಿಗಳಲ್ಲಿ ಪ್ರಶ್ನೆಪತ್ರಿಕೆ ನೀಡಿದಾಗ ಮಧ್ಯಾಹ್ನ 3 ಗಂಟೆ ದಾಟಿತ್ತು. ಕೆಲ ಕೊಠಡಿಗಳಲ್ಲಿ 1.45ಕ್ಕೆ ನೀಡಲಾಗಿದೆ. ಸಂಜೆ 5ರವರೆಗೂ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜ್ಞಾನಭಾರತಿ ಆವರಣದ ಪರೀಕ್ಷಾ ಕೇಂದ್ರದಲ್ಲಿ ಮೊದಲ ಅವಧಿಯ ಪರೀಕ್ಷೆ ತುಂಬಾ ವಿಳಂಬವಾದ ಕಾರಣ ಸಂಜೆ 4ಕ್ಕೆ ಇದ್ದ ದೃಶ್ಯ–ಶ್ರವಣ ಜ್ಞಾನ ವಿಷಯದ ಪರೀಕ್ಷೆಯನ್ನು ಮುಂದೂಡಲಾಯಿತು. ಇದರಿಂದ ಪರೀಕ್ಷೆಗೆ ಸಿದ್ಧರಾಗಿ ಬಂದಿದ್ದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮುಂದೂಡಿದ ದೃಶ್ಯ–ಶ್ರವಣ ಜ್ಞಾನ ವಿಷಯದ ಪರೀಕ್ಷೆಯನ್ನು ಪ್ರಾಯೋಗಿಕ ಪರೀಕ್ಷೆಯ ದಿನವೇ ನಡೆಸುವುದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ. ಪ್ರಾಯೋಗಿಕ ಪರೀಕ್ಷೆಗೆ ಮಕ್ಕಳು ಮೇಕಪ್‌ ಸಹಿತ ವಸ್ತ್ರಾಲಂಕೃತರಾಗಿ ಬಂದಿರುತ್ತಾರೆ. ವೇಷಭೂಷಣದಲ್ಲಿ ಕುಳಿತು ಲಿಖಿತ ಪರೀಕ್ಷೆ ಬರೆಯಲು ಸಾಧ್ಯವೇ’ ಎಂದು ಪೋಷಕಿ ಲೀಲಾಮಣಿ ಪ್ರಶ್ನಿಸಿದರು. 

ಪರೀಕ್ಷೆಗಳನ್ನು ಸುಗಮವಾಗಿ ನಡೆಸುವಂತೆ ಎಲ್ಲ ಕೇಂದ್ರಗಳ ‍ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು. ಜ್ಞಾನ ಭಾರತಿ ಸೇರಿದಂತೆ ಒಂದೆರಡು ಕೇಂದ್ರಗಳಲ್ಲಷ್ಟೇ ಸಮಸ್ಯೆಯಾಗಿದೆ
– ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಕುಲಪತಿ
ದೇಶದ ಯಾವ ವಿಶ್ವವಿದ್ಯಾಲಯಗಳಲ್ಲೂ ಈ ರೀತಿ ನಿಗದಿತ ಸಮಯಕ್ಕಿಂತ ಎರಡು ಗಂಟೆ ವಿಳಂಬ ಮಾಡಿದ ಬಿಳಿ ಹಾಳೆಯಲ್ಲಿ ಉತ್ತರ ಬರೆಯಿಸಿದ ಉದಾಹರಣೆಯೇ ಇಲ್ಲ
–ಗಂಗಾಧರ ಆರ್.ವಿ ಪೋಷಕ ಮಲ್ಲತ್ತಹಳ್ಳಿ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.