ADVERTISEMENT

ಮುಸ್ಲಿಂ ಶಾಸಕರಿಂದ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:19 IST
Last Updated 9 ಮೇ 2022, 16:19 IST

ಬೆಂಗಳೂರು: ಕಾಂಗ್ರೆಸ್‌ನ ಮುಸ್ಲಿಂ ಶಾಸಕರು ಮತ್ತು ರಾಜ್ಯಸಭೆ ಸದಸ್ಯರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೋಮವಾರ ಭೇಟಿಮಾಡಿ, ಆಜಾನ್‌– ಹನುಮಾನ್‌ ಚಾಲೀಸಾ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ರಾಜ್ಯಸಭೆ ಸದಸ್ಯ ಡಾ. ಸೈಯದ್‌ ನಾಸೀರ್‌ ಹುಸೇನ್‌, ಶಾಸಕ ಎನ್‌.ಎ. ಹ್ಯಾರಿಸ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ನಜೀರ್‌ ನಿಯೋಗದಲ್ಲಿದ್ದರು. ಸುಪ್ರೀಂ ಕೋರ್ಟ್‌ ಆದೇಶ ಪಾಲನೆಗೆ ಎಲ್ಲ ಮಸೀದಿಗಳೂ ಸಿದ್ಧವಾಗಿವೆ ಎಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಖಾದರ್‌, ‘ಶ್ರೀರಾಮ ಸೇನೆ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ. ಶಾಂತಿ, ಸೌಹಾರ್ದ ಕದಡುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

ಶಬ್ಧ ಮಾಲಿನ್ಯದಲ್ಲೂ ಜಾತಿ, ಧರ್ಮ ಹುಡುಕಬಾರದು. ಎಲ್ಲ ರೀತಿಯ ಶಬ್ಧ ಮಾಲಿನ್ಯ ತಡೆಗೆ ಸರ್ಕಾರ ನಿಯಮ ರೂಪಿಸಲಿ. ಸುಪ್ರೀಂ ಕೋರ್ಟ್‌ ಆದೇಶ ಮತ್ತು ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಲಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.