ADVERTISEMENT

ಮುಸ್ಲಿಂ ಮೀಸಲಾತಿ: ಶಿಫಾರಸಿಲ್ಲದೇ ಮೀಸಲು ರದ್ದು!

ಮುಸ್ಲಿಂ ಮೀಸಲಾತಿ: ‘ಸುಪ್ರೀಂ’ಗೆ ಲಿಖಿತ ಮಾಹಿತಿ – ಆಯೋಗದ ಅಧ್ಯಕ್ಷ ಹೆಗ್ಡೆ

ರಾಜೇಶ್ ರೈ ಚಟ್ಲ
Published 10 ಜುಲೈ 2023, 1:18 IST
Last Updated 10 ಜುಲೈ 2023, 1:18 IST
ಕೆ. ಜಯಪ್ರಕಾಶ್ ಹೆಗ್ಡೆ
ಕೆ. ಜಯಪ್ರಕಾಶ್ ಹೆಗ್ಡೆ   

ಬೆಂಗಳೂರು: ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ಯಾವುದೇ ವರದಿ ಅಥವಾ ಶಿಫಾರಸಿಲ್ಲದೇ ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿರುವುದು ಬಹಿರಂಗವಾಗಿದೆ.

ಹಿಂದುಳಿದ ವರ್ಗಗಳ ಕೋಟಾದಲ್ಲಿ ಮುಸ್ಲಿಮರಿಗೆ ‘ಪ್ರವರ್ಗ 2ಬಿ’ ಅಡಿ ಶೇ 4ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದೆಯೇ ನೀಡಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಈ ಹಿಂದಿನ ಸರ್ಕಾರ, ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಮೊದಲು (ಮಾರ್ಚ್‌ 27) ಈ ಮೀಸಲಾತಿಯನ್ನು ರದ್ದುಪಡಿಸಿತ್ತು. ಈ ಶೇ 4ರಷ್ಟು ಮೀಸಲಾತಿಯನ್ನು, ಮೀಸಲು ಪ್ರಮಾಣ ಹೆಚ್ಚಳ ಮಾಡುವಂತೆ ಬೇಡಿಕೆ ಮಂಡಿಸಿದ್ದ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಶೇ 2ರಂತೆ ಮರು ಹಂಚಿಕೆ ಮಾಡಿತ್ತು. ಮೀಸಲಾತಿ ರದ್ದತಿ ಮತ್ತು ಮರು ಹಂಚಿಕೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಸುದ್ದಿಗೋಷ್ಠಿಯಲ್ಲಿ ಬೊಮ್ಮಾಯಿ ಅವರೇ ಪ್ರಕಟಿಸಿದ್ದರು. ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತನ್ನ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ’ ಎಂದು ಹೇಳಿದ್ದರು.

ಕರ್ನಾಟಕ ಸರ್ಕಾರದ ಮಾರ್ಚ್‌ 27ರ ಆದೇಶವನ್ನು ಪ್ರಶ್ನಿಸಿ ಎಲ್‌. ಗುಲಾಮ್ ರಸೂಲ್‌ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣ ಇದೇ 24ರಂದು ವಿಚಾರಣೆಗೆ ಬರಲಿದೆ. ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಮುಸ್ಲಿಂ ಮೀಸಲಾತಿ ರದ್ಧತಿ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ಶಿಫಾರಸು ಮಾಡಿಲ್ಲ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಲಿಖಿತವಾಗಿ ತಿಳಿಸಲು ನಿರ್ಧರಿಸಿದೆ.

ADVERTISEMENT

‘ಮುಸ್ಲಿಮರನ್ನು ಒಬಿಸಿ (ಇತರ ಹಿಂದುಳಿದ ಜಾತಿ) ಪಟ್ಟಿಯಿಂದ ಕೈಬಿಟ್ಟಿರುವುದು ಕಾನೂನುಬಾಹಿರ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಪಟ್ಟಿಗೆ ಸೇರಿಸಿರುವುದು ಕೂಡ ಕಾನೂನಿಗೆ ವಿರುದ್ಧ’ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ. ವಿಚಾರಣೆ ನಡೆಸಿದ್ದ ಕೋರ್ಟ್‌, ‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂತಿಮ ವರದಿಗೆ ಕಾಯದೆ ಮಧ್ಯಂತರ ವರದಿಯ ಆಧಾರದಲ್ಲಿ ಮೀಸಲಾತಿ ಕೋಟಾವನ್ನು ಹಿಂಪಡೆಯುವ ಅಗತ್ಯ ಏನಿತ್ತು’ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು. ನಂತರ, ‘ಮಾರ್ಚ್‌ 27ರ ಆದೇಶದ ಮೇಲೆ ಸದ್ಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಕರ್ನಾಟಕ ಸರ್ಕಾರ ಭರವಸೆ ನೀಡಿತ್ತು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ‘ಮುಸ್ಲಿಂ ಮೀಸಲಾತಿ ರದ್ದುಪಡಿಸುವ ಮೊದಲು ಈ ಹಿಂದಿನ ರಾಜ್ಯ ಸರ್ಕಾರ (ಬಿಜೆಪಿ) ನಮ್ಮ (ಆಯೋಗ) ಅಭಿಪ್ರಾಯ ಕೇಳಿಲ್ಲ. ಮೀಸಲಾತಿ ರದ್ದುಪಡಿಸಲು ನಾವು ಹೇಳಿಯೂ ಇಲ್ಲ. ಈ ಬಗ್ಗೆ ಸರ್ಕಾರ ನಮ್ಮಿಂದ ಯಾವುದೇ ಸಲಹೆಯನ್ನೂ ಪಡೆದಿಲ್ಲ. ಅದು ಸರ್ಕಾರದ್ದೇ ತೀರ್ಮಾನ’ ಎಂದರು.

‘ಮುಸ್ಲಿಂ ಮೀಸಲಾತಿ ರದ್ದು ವಿಚಾರ ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಾವೂ (ಆಯೋಗ) ಪ್ರತಿವಾದಿಗಳು. ಹೀಗಾಗಿ, ಈ ಬಗ್ಗೆ ನಮ್ಮ ಅಭಿಪ್ರಾಯವನ್ನು ತಿಳಿಸಲಿದ್ದೇವೆ’ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

‘ಪ್ರವರ್ಗ 2ಎಗೆ ಸೇರಿಸಬೇಕೆಂಬ ಪಂಚಮಸಾಲಿ ಸಮುದಾಯದ ಬೇಡಿಕೆ ವಿಚಾರವಾಗಿ ಆಯೋಗದಿಂದ ಹಿಂದಿನ ಸರ್ಕಾರ ವರದಿ ಕೇಳಿತ್ತು. ಮಧ್ಯಂತರ ವರದಿಯನ್ನಷ್ಟೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಪ್ರಸ್ತಾವ ಇಲ್ಲ. ಅದರಲ್ಲಿ ಮುಸ್ಲಿಂ ಮೀಸಲಾತಿ ರದ್ದು ವಿಷಯವೂ ಇರಲಿಲ್ಲ. ರಾಜ್ಯದಲ್ಲಿರುವ ಮುಸ್ಲಿಂ ಸಮುದಾಯದ ಸ್ಥಿತಿಗತಿಯ ಕುರಿತಂತೆ ಆಯೋಗ ಯಾವುದೇ ಸಮೀಕ್ಷೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಿ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯು ಈಗ ಸಾರ್ವಜನಿಕ ದಾಖಲೆಯಾಗಿದೆ. ನಾವು ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ಸರ್ಕಾರ ಅದನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ನೀಡಿತ್ತು. ಈ ಮಧ್ಯೆ, ಸುಪ್ರೀಂ ಕೋರ್ಟ್‌ ಆದೇಶವೊಂದನ್ನು ಮಾಡಿ, ಮುಚ್ಚಿದ ಲಕೋಟೆಯಲ್ಲಿ ಯಾವುದೇ ಮಾಹಿತಿ ನೀಡುವ ವ್ಯವಸ್ಥೆ ಹೋಗಬೇಕು ಎಂದು ಹೇಳಿದೆ. ಹೀಗಾಗಿ, ಆ ವರದಿಯನ್ನು ಅರ್ಜಿದಾರರು ಮತ್ತು ಸಂಬಂಧಿಸಿದ ಎಲ್ಲರಿಗೂ ನೀಡುವಂತೆ ಹೈಕೋರ್ಟ್‌ ಹೇಳಿದೆ. ಪಂಚಮಸಾಲಿ ಸಮುದಾಯದ ಬೇಡಿಕೆಯ ಕುರಿತಂತೆ ಅಂತಿಮ ವರದಿ ಬಂದ ಬಳಿಕವಷ್ಟೆ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕು. ಮಧ್ಯಂತರ ವರದಿಯ ಆಧಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆಯೂ ನಾವು (ಆಯೋಗ) ತಿಳಿಸಿದ್ದೆವು’ ಎಂದೂ ಅವರು ವಿವರಿಸಿದರು.

'ಮುಸ್ಲಿ ಸಮುದಾಯದವರ ಮೀಸಲಾತಿ ರದ್ದುಪಡಿಸುವ ಮೊದಲು ಈ ಹಿಂದಿನ ರಾಜ್ಯ ಸರ್ಕಾರ ಆಯೋಗದಿಂದ ಯಾವುದೇ ಅಭಿಪ್ರಾಯ‌ ಕೇಳಿರಲಿಲ್ಲ. ನಾವೂ ಅಂತಹ ವರದಿ ಕೊಟ್ಟಿಲ್ಲ"

-ಕೆ. ಜಯಪ್ರಕಾಶ್‌ ಹೆಗ್ಡೆ ಅಧ್ಯಕ್ಷರು ಹಿಂದುಳಿದ ವರ್ಗಗಳ ಆಯೋಗ

‘ಮೀಸಲಾತಿ ಮರು ವರ್ಗೀಕರಣ ಆಗಬೇಕಿದೆ’

‘ಪ್ರತಿ 10 ವರ್ಷಗಳಿಗೊಮ್ಮೆ ಮೀಸಲಾತಿಯ ಮರು ವರ್ಗೀಕರಣ ಆಗಬೇಕಿದೆ. ಆದರೆ 20 ವರ್ಷ ಕಳೆದರೂ ಜಾತಿಗಳ ಮರು ವರ್ಗೀಕರಣ ಆಗಿಲ್ಲ. ಹೀಗಾಗಿ ಮೀಸಲಾತಿಯ ಮರು ವರ್ಗೀಕರಣ ಆಗಬೇಕೆಂದು ವರದಿಯಲ್ಲಿ ಸರ್ಕಾರಕ್ಕೆ ನಾವು ಸಲಹೆ ನೀಡಿದ್ದೇವೆ. ಹೀಗೆ ಮರು ವರ್ಗೀಕರಣ ಆದಾಗ ಹಿಂದುಳಿದ ವರ್ಗದಲ್ಲಿರುವ ಬಲಾಢ್ಯ ಜಾತಿಗಳು ಮೀಸಲಾತಿ ಪಟ್ಟಿಯಿಂದ ಹೊರ ಹೋಗುತ್ತವೆ. ಸದ್ಯ ಇರುವ ಜಾತಿಗಳ ವರ್ಗೀಕರಣ 2011ರ ಜನಗಣತಿ ಆಧರಿಸಿದ್ದು. ಎಚ್‌. ಕಾಂತರಾಜ ನೇತೃತ್ವದ ಆಯೋಗ 2015ರಲ್ಲಿ ರಾಜ್ಯದಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ವರದಿಯ ಆಧಾರದಲ್ಲಿ ಮೀಸಲಾತಿಯ ಮರು ವಿಂಗಡಣೆ ಮಾಡಬಹುದು. ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಂದುವರಿದ ಜಾತಿಗಳನ್ನು ಕೈಬಿಟ್ಟು ಯಾರು ಇನ್ನೂ ಹಿಂದುಳಿದಿದ್ದಾರೆ ಅಂಥ ಸಮುದಾಯಗಳನ್ನು ಮೀಸಲಾತಿ ವ್ಯಾಪ್ತಿಗೆ ತರುವ ಕೆಲಸ ಆಗಬೇಕಿದೆ’ ಎಂದು ಜಯಪ್ರಕಾಶ್‌ ಹೆಗ್ಡೆ ಪ್ರತಿಪಾದಿಸಿದರು.

ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಸರ್ಕಾರ

ಮುಸ್ಲಿಮರ ಶೇ 4ರಷ್ಟು ಮೀಸಲಾತಿ ರದ್ದು ಪ್ರಕರಣದ ವಿಚಾರಣೆಯನ್ನು ಮೇ 9ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ‘2023 ಮಾರ್ಚ್‌ 27ರ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ಕಾರ್ಯಗತಗೊಳಿಸಲಾಗುವುದಿಲ್ಲ. ಅಲ್ಲದೆ ಮೀಸಲಾತಿಗೆ ಸಂಬಂಧಿಸಿದ 2002 ಮಾರ್ಚ್‌ 30ರ ಅಧಿಸೂಚನೆಯನ್ನೇ ಮುಂದುವರಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಪರ ಸಾಲಿಟರ್‌ ಜನರಲ್‌ ತುಷಾರ್ ಮೆಹ್ತಾ ನೀಡಿದ್ದ ವಾಗ್ದಾನವನ್ನು ಉಲ್ಲೇಖಿಸಿದೆ. ಈ ರೀತಿ ಆದೇಶ ಇದ್ದರೂ ವೃತ್ತಿಪರ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಹಳೆ ಮೀಸಲಾತಿ ಮುಂದುವರಿಸುವ ಕುರಿತು ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.