ADVERTISEMENT

ಗುತ್ತಿಗೆಯಲ್ಲಿ ಮೀಸಲಾತಿ ಮುಸ್ಲಿಮರ ಬೇಡಿಕೆಯಷ್ಟೇ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ವಿಚಾರ ಬುಧವಾರವೂ ರಾಜಕೀಯ ವಲಯದಲ್ಲಿ ಚರ್ಚಾ ವಿಷಯವಾಗಿತ್ತು.

ADVERTISEMENT

ಈ ಬಗ್ಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ತಮಗೂ ನೀಡಬೇಕು ಎಂದು ಮುಸ್ಲಿಂ ಮುಖಂಡರೂ ಮನವಿ ಮಾಡಿದ್ದರು. ಪರಿಶೀಲಿಸಲು ಸೂಚಿಸಿದ್ದೆ. ಈ ಬಗ್ಗೆ ಯಾವುದೇ ತೀರ್ಮಾನವನ್ನೂ ತೆಗೆದುಕೊಂಡಿಲ್ಲ’ ಎಂದಿದ್ದಾರೆ.

‘ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆ ಆಧಾರರಹಿತ. ಅವರಿಗೆ ಕೋಮುವಾದವನ್ನು ಸೃಷ್ಟಿಸುವುದೇ ಕಾಯಕ. ಎರಡು ಧರ್ಮಗಳ ಜನರ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಶಾಂತಿ, ಸಹೋದರತ್ವವನ್ನೂ ಬಿಜೆಪಿ ಎಂದೂ ಬಯಸಿದವರಲ್ಲ’ ಎಂದರು.

ಮುಸ್ಲಿಮರ ಮನವಿಯ ಪರಿಶೀಲನೆ ಅಷ್ಟೆ: ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ, ‘ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಯಾವುದೇ ತೀರ್ಮಾನ ಸರ್ಕಾರದ ಮಟ್ಟದಲ್ಲಿ ಆಗಿಲ್ಲ. ಮುಸ್ಲಿಂ ಸಮುದಾಯದ ಕೆಲ ಶಾಸಕರು ಹಾಗೂ ಮುಖಂಡರು ಸಲ್ಲಿಸಿದ ಮನವಿ ಪರಿಶೀಲಿಸಲು ಮುಖ್ಯಮಂತ್ರಿ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ. ಇಲಾಖೆ ಪರಿಶೀಲಿಸಿದ ಬಳಿಕ ಪ್ರಸ್ತಾವ ಸಂಪುಟದ ಮುಂದೆ ತರಬೇಕು. ಅಲ್ಲಿ ಸಮ್ಮತಿ ಸಿಕ್ಕರೆ ಸರ್ಕಾರಿ ಆದೇಶ ಆಗಬೇಕಾಗುತ್ತದೆ. ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆಯೇ ನಡೆದಿಲ್ಲ’ ಎಂದು ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ ಎನ್ನುವ ಬಿಜೆಪಿ ಆರೋಪ ಸರಿಯಲ್ಲ. ಪರಿಶಿಷ್ಟರಿಗೆ ನೀಡಿದಂತೆ ತಮಗೂ ಸೌಲಭ್ಯ ಕಲ್ಪಿಸಬೇಕು ಎಂಬ ಮುಸ್ಲಿಂ ಮುಖಂಡರ ವಿನಂತಿಯನ್ನೇ ಆದೇಶ ಎಂಬಂತೆ ಬಿಂಬಿಸಲಾಗುತ್ತಿದೆ. ಯಾವುದೇ ಸಮುದಾಯ, ಧರ್ಮದ ಬಡವರ ಅಭಿವೃದ್ಧಿಗೆ ಒತ್ತು ನೀಡುವುದು ಸರ್ಕಾರದ ಕರ್ತವ್ಯ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.