ADVERTISEMENT

ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲು ಸಿಎಂ ರಹಸ್ಯ ಪತ್ರ: ವಿ.ಸುನಿಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 15:47 IST
Last Updated 24 ಏಪ್ರಿಲ್ 2024, 15:47 IST
ವಿ.ಸುನಿಲ್‌ಕುಮಾರ್
ವಿ.ಸುನಿಲ್‌ಕುಮಾರ್   

ಬೆಂಗಳೂರು: ‘ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಗುಟ್ಟಾಗಿ ಶಿಫಾರಸು ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ  ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ’ ಎಂದು ಬಿಜೆಪಿ ಚುನಾವಣಾ ಸಮಿತಿ ಸಂಚಾಲಕ ವಿ.ಸುನಿಲ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹಿಂದುಳಿದ ವರ್ಗಗಳ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಂಡು ಅದನ್ನು ಮುಸ್ಲಿಮರಿಗೆ ಹಂಚುವ ಕುತ್ಸಿತ ಹಾಗೂ ಓಲೈಕೆಯ ರಾಜಕಾರಣದ ಸಂಚು ಇದರಲ್ಲಿ ಅಡಗಿದೆ’ ಎಂದು ಆರೋಪಿಸಿದ್ದಾರೆ.

‘ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಣೆಯ ಚಾಂಪಿಯನ್‌ ತಾನೆಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ಸಮುದಾಯಕ್ಕಿಂತ ಮುಸ್ಲಿಂ ಓಲೈಕೆಯೇ ಮುಖ್ಯ ಎಂಬುದು ಸಾಬೀತಾಗಿದೆ. ಕದ್ದುಮುಚ್ಚಿ ಪತ್ರ ಬರೆಯುವುದು ಬಿಟ್ಟು ಬಹಿರಂಗವಾಗಿ ಏಕೆ ಬರೆದಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಓಬಿಸಿ ಸಮುದಾಯದ ಪರ ಮಾತೃ ಹೃದಯ ಪ್ರದರ್ಶನ ಮಾಡುವುದನ್ನು ಬಿಟ್ಟು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಈ ಬಗ್ಗೆ ಆಕ್ಷೇಪ ಎತ್ತದೇ ಹೋಗಿದ್ದರೆ ಭವಿಷ್ಯದಲ್ಲಿ ಹಿಂದುಳಿದ ವರ್ಗ ಬೆಲೆ ತೆರಬೇಕಾಗಿತ್ತು. ಅದರ ಪರಿಣಾಮ ಊಹಿಸಲೂ ಅಸಾಧ್ಯ’ ಎಂದು ಅವರು ತಿಳಿಸಿದ್ದಾರೆ.

‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಯುವಕರ ಶೈಕ್ಷಣಿಕ ಮತ್ತು ಉದ್ಯೋಗದ ಮೀಸಲಾತಿ ಪಾಲನ್ನು ಮುಸ್ಲಿಮರಿಗೆ ಹಂಚುವ ಅಧಿಕಾರ ಸಿದ್ದರಾಮಯ್ಯ ಅವರಿಗೆ ಕೊಟ್ಟವರು ಯಾರು? ಹಿಂದುಳಿದ ವರ್ಗಗಳ ಮೇಲೆ ನಿಮಗೇಕೆ ಸಿಟ್ಟು? ಸಮುದಾಯಕ್ಕೆ ಮಾಡುವ ಚಾರಿತ್ರಿಕ ಅನ್ಯಾಯದಿಂದ ನಿಮಗೆ ಸಿಗುವ ಲಾಭವೇನು’ ಎಂದು ಸುನಿಲ್‌ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.