ADVERTISEMENT

ಜಯರಾಜ್‌ ಕೊಂದು ದುಬೈಗೆ ಹಾರಿದ್ದ ಮುತ್ತಪ್ಪ ರೈ 2002ರಲ್ಲಿ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 15 ಮೇ 2020, 8:53 IST
Last Updated 15 ಮೇ 2020, 8:53 IST
ಮುತ್ತಪ್ಪ ರೈ
ಮುತ್ತಪ್ಪ ರೈ   

ಬೆಂಗಳೂರು: ಪುತ್ತೂರಿನ ನೆಟ್ಟಾಳ ಮುತ್ತಪ್ಪ ರೈ, ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್‌ನನ್ನು ಕೊಂದ ಬಳಿಕವೇ ಹೆಚ್ಚು ಹೆಸರು ಮಾಡಿದ್ದು. 8 ಕೊಲೆ ಪ್ರಕರಣ, ಲೆಕ್ಕವಿಲ್ಲದಷ್ಟು ಜೀವ ಬೆದರಿಕೆ ಪ್ರಕರಣದಲ್ಲಿ ‘ಮೋಸ್ಟ್ ವಾಟೆಂಡ್’ ಆಗಿದ್ದ ಮುತ್ತಪ್ಪ ರೈಗಾಗಿ ಕರ್ನಾಟಕ ಹಾಗೂ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ, ಮುತ್ತಪ್ಪ ಮಾತ್ರ ದುಬೈಗೆ ಹೋಗಿ ತಲೆಮರೆಸಿಕೊಂಡಿದ್ದ.

2002ರಲ್ಲಿ ದುಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ರೈನನ್ನು ಸಿಬಿಐ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡು ದೇಶಕ್ಕೆ ಕರೆತಂದಿದ್ದರು. ನಂತರ, ಕರ್ನಾಟಕ ಹಾಗೂ ಮುಂಬೈ ಪೊಲೀಸರು ವಶಕ್ಕೆ ಪಡೆದು ಆತನ ಮೇಲಿನ ಪ್ರಕರಣಗಳ ವಿಚಾರಣೆ ನಡೆಸಿದ್ದರು.

2001ರಲ್ಲಿ ಉದ್ಯಮಿ ಸುಬ್ಬರಾಜು ಕೊಲೆ ಪ್ರಕರಣದಲ್ಲೂ ಮುತ್ತಪ್ಪ ರೈ ಪಾತ್ರವಿತ್ತು. ಆಸ್ತಿ ವಿಚಾರಕ್ಕಾಗಿ ಹಲವರನ್ನು ಬೆದರಿಸಿದ್ದ ಆರೋಪವೂ ಈತನ ಮೇಲಿತ್ತು.

ADVERTISEMENT

ನಕಲಿ ದಾಖಲೆ ಸೃಷ್ಟಿಸಿ ವಂಚನೆ, ಗೃಹ ಮಂಡಳಿ ಅಧಿಕಾರಿಗಳಿಂದಲೇ ಹಫ್ತಾ ವಸೂಲಿ, ಕೆಲ ರೌಡಿಗಳನ್ನು ಮುಂದಿಟ್ಟುಕೊಂಡು ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗೂಮುತ್ತಪ್ಪ ರೈ ಒಡನಾಟವಿಟ್ಟುಕೊಂಡಿದ್ದ ಸಂಗತಿ ಬಗ್ಗೆ ಅಂದಿನ ಪೊಲೀಸರು ತನಿಖೆ ನಡೆಸಿದ್ದರು. ಕೆಲ ವರ್ಷ ಜೈಲಿನಲ್ಲಿದ್ದ ಮುತ್ತಪ್ಪ, ಜಾಮೀನು ಮೇಲೆ ಹೊರ ಬಂದು ಬಿಡದಿ ಬಳಿ ಜಮೀನು ಖರೀದಿಸಿ ಅಲ್ಲಿಯೇ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದ.

ನಂತರವೂ ಆತನ ಮೇಲಿನ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ. ಇದರ ನಡುವೆಯೇ ಜಯ ಕರ್ನಾಟಕ ಸಂಘಟನೆ ಹುಟ್ಟುಹಾಕಿ ಇಡೀ ರಾಜ್ಯದಲ್ಲಿ ಸುತ್ತಾಡಿ ಸಂಘಟನೆ ಬೆಳೆಸಿದ್ದ.

‘ಜಯರಾಜ್‌ ಕೊಲೆ ಬಳಿಕ ಮುತ್ತಪ್ಪ ರೈ ಎನ್‌ಕೌಂಟರ್ ಮಾಡಲು ಹುಡುಕಾಡುತ್ತಿದ್ದೆವು. ಇದು ತಿಳಿಯುತ್ತಿದ್ದಂತೆ ಹೆದರಿದ ಮುತ್ತಪ್ಪ ರೈ ಬೆಂಗಳೂರು ಬಿಟ್ಟು ದುಬೈ ಸೇರಿದ್ದ. ಹೀಗಾಗಿಯೇ ಆತ ಬಚಾವಾದ. ಇಲ್ಲದಿದ್ದರೆ ಅವಾಗಲೇ ಎನ್‌ಕೌಂಟರ್‌ ಆಗಿರುತ್ತಿದ್ದ’ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ರವಿ ಪೂಜಾರಿ ಪ್ರಕರಣದಲ್ಲೂ ವಿಚಾರಣೆ: ಭೂಗತ ಪಾತಕಿ ರವಿ ಪೂಜಾರಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಆತನ ವಿರುದ್ಧದ ಪ್ರಕರಣದಲ್ಲೂ ಮುತ್ತಪ್ಪ ರೈನನ್ನು ವಿಚಾರಣೆ ನಡೆಸಲಾಗಿತ್ತು. ಮುತ್ತಪ್ಪ ರೈ ಆರೋಗ್ಯ ಸರಿ ಇಲ್ಲದಿದ್ದರಿಂದ ಅವರನ್ನು ಬೇಗನೇ ವಿಚಾರಣೆ ನಡೆಸಿ ಕಳುಹಿಸಲಾಗಿತ್ತು.

ಕುಟುಂಬದ ಹಿನ್ನೆಲೆ: ಪುತ್ತೂರಿನ ನೆಟ್ಟಾಳ ನಾರಾಯಣ ರೈ ಹಾಗೂ ಸುಶೀಲ ರೈ ದಂಪತಿಯ ಪುತ್ರನೇ ಈ ಮುತ್ತಪ್ಪ. ಮುತ್ತಪ್ಪ ರೈ ಪತ್ನಿ ರೇಖಾ ಅನಾರೋಗ್ಯದಿಂದಾಗಿ ಅಸುನೀಗಿದ್ದರು. ಉದ್ಯಮಿ ಆಗಿಯೇ ಗುರುತಿಸಿಕೊಂಡಿದ್ದ ಮುತ್ತಪ್ಪ, ತುಳು ಹಾಗೂ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು.

ಸಾಫ್ಟ್‌ವೇರ್‌ ಕಂಪನಿ ಸ್ಥಾಪಿಸಿದ್ದ:ಮುತ್ತಪ್ಪ ರೈ ದುಬೈಗೆ ಹೋಗುತ್ತಿದ್ದಂತೆ ಎನ್‌.ಎಂ.ರೈ ಎಂದೇ ಖ್ಯಾತನಾಗಿದ್ದ. ಈತನೇ ಮುತ್ತಪ್ಪ ರೈ ಎಂಬುದು ಆರಂಭದಲ್ಲಿ ಯಾರಿಗೂ ಗೊತ್ತಿರಲಿಲ್ಲ.

ದುಬೈನಲ್ಲೇ ಸಾಫ್ಟ್‌ವೇರ್‌ ಕಂಪನಿ ಕಟ್ಟಿದ್ದ ಮುತ್ತಪ್ಪ ರೈ, ಸ್ಥಳೀಯ ಉದ್ಯಮಿ ಜೊತೆ ಪಾಲುದಾರಿಕೆಯಲ್ಲಿ ಹಲವು ಉದ್ಯಮ ಆರಂಭಿಸಿದ್ದ. ಯಾವಾಗ ಪೊಲೀಸರಿಗೆ ಸಿಕ್ಕಿಬಿದ್ದನೋ ಅವಾಗಲೇ ಭಾರತಕ್ಕೆ ಬಂದ. ನಂತರವೇ ಬಿಡದಿಯಲ್ಲಿ ಜಮೀನು ಖರೀದಿಸಿ ಅಲ್ಲಿಯೇ ನೆಲೆಸಿದ್ದ. ಆತನ ಮನೆಯೇ ದೊಡ್ಡ ಕೋಟೆಯಂತಿತ್ತು.

ಬಾಡಿಗಾರ್ಡ್‌ ಇಟ್ಟುಕೊಂಡು ಆಯುಧ ಪೂಜೆ ಮಾಡಿದ್ದಕ್ಕೆ ನೋಟಿಸ್: ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದ ಮುತ್ತಪ್ಪ ರೈ ಕಳೆದ ವರ್ಷದ ದಸರಾ ಹಬ್ಬದಂದು ಆಯುಧಗಳ ಪೂಜೆ ಮಾಡಿದ್ದ. ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳು ಇದ್ದವು. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಮುತ್ತಪ್ಪ ರೈಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು.

ಖಾಸಗಿ ಕಂಪನಿಯಿಂದ ಅಂಗರಕ್ಷಕರನ್ನು ಪಡೆದಿದ್ದ ಮುತ್ತಪ್ಪ ರೈ, ಅವರ ಹಿನ್ನೆಲೆಯನ್ನೂ ತಿಳಿದುಕೊಂಡಿರಲಿಲ್ಲ. ಅಂಗರಕ್ಷಕರನ್ನು ನೀಡಿದ್ದ ಕಂಪನಿ ಪರವಾನಗಿ ನವೀಕರಣ ಸಹ ಆಗಿರಲಿಲ್ಲ. ಇದರಲ್ಲಿ ತನ್ನದೇನು ತಪ್ಪಿಲ್ಲವೆಂದು ಮುಚ್ಚಳಿಕೆ ಪತ್ರ ಬರೆದುಕೊಂಡು ಮುತ್ತಪ್ಪ ರೈ ಬಚಾವಾಗಿದ್ದ. ಅಂದಿನಿಂದಲೇ ಆತನ ಮೇಲೆ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.