ADVERTISEMENT

ಮಾಜಿ ಡಾನ್, ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ

​ಪ್ರಜಾವಾಣಿ ವಾರ್ತೆ
Published 15 ಮೇ 2020, 7:49 IST
Last Updated 15 ಮೇ 2020, 7:49 IST
ಮುತ್ತಪ್ಪ ರೈ
ಮುತ್ತಪ್ಪ ರೈ   
""
""

ರಾಮನಗರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (68) ಶುಕ್ರವಾರ ನಸುಕಿನ ಎರಡು ಗಂಟೆ ಸುಮಾರಿಗೆ ನಿಧನರಾದರು.

ಒಂದು ವರ್ಷದ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಕೆಲವು ದಿನದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಕೊನೆಯುಸಿರು ಎಳೆದರು.

ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿ ಇದ್ದಾರೆ.ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಇರುವ ಅವರ ಸ್ವಗೃಹದಲ್ಲಿ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT
ಮೊದಲ‌ ಪತ್ನಿ ರೇಖಾ ಹಾಗೂ ಪುತ್ರರಾದ ರೋಖಿ, ರಿಕ್ತಿ ಅವರೊಂದಿಗೆ ಮುತ್ತಪ್ಪ ರೈ. ರೇಖಾ ಅನಾರೋಗ್ಯದಿಂದ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು

ಅನಾರೋಗ್ಯದ ವಿವರಹಂಚಿಕೊಂಡಿದ್ದ ಮುತ್ತಪ್ಪ ರೈ

‘ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು‌‌ ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ’ ಎಂದು ಕಳೆದ ಜನವರಿಯಲ್ಲಿ ಮುತ್ತಪ್ಪ ರೈ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

‘ವರ್ಷದ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು‌ ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ’ ಎಂದು ಮಾಹಿತಿ ಹಂಚಿಕೊಂಡಿದ್ದರು.

‘ಶೇ 90ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದರು. ಆದರೆ ನಂತರದಲ್ಲಿ ಮಿದುಳಿಗೆ‌ ಕ್ಯಾನ್ಸರ್‌ ತಗುಲಿತ್ತು. ಕೆಲವು ತಿಂಗಳಷ್ಟೇ ಬದುಕುವುದಾಗಿ ವೈದ್ಯರು ಹೇಳಿದರು. ಹೀಗಾಗಿ ಬಿಡದಿಗೆ ವಾಪಸ್ ಆಗಿದ್ದೇನೆ. ನನಗೀಗ 68 ವರ್ಷ. ಐದು ಗುಂಡು ಬಿದ್ದರೂ‌ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್‌ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರಿಸುತ್ತೇನೆ’ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದರು.

‘ವರ್ಷಕ್ಕೆ 25-30 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ 15-20 ವರ್ಷದಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ತಿಳಿಸಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ’ಎಂದು ತಮ್ಮ ಅನುಪಸ್ಥಿತಿಯಲ್ಲಿಯೂ ತಮ್ಮನ್ನು ನಂಬಿದವರ ಯೋಗಕ್ಷೇಮಕ್ಕೆ ವ್ಯವಸ್ಥೆ ಮಾಡಿದ್ದ ವಿವರ ತಿಳಿಸಿದ್ದರು.

ಮುತ್ತಪ್ಪ ರೈ

ಮುತ್ತಪ್ಪ ರೈ ಬದುಕು ಸಾಗಿ ಬಂದ ಹಾದಿ

ತುಳು ಭಾಷಿಕ ಬಂಟರ ಕುಟುಂಬದ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ನೆಟ್ಟಲ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂದು ಕುಖ್ಯಾತರಾಗಿದ್ದರು.

ಮೊದಲ ಪತ್ನಿ ರೇಖಾ ಸಿಂಗಪುರದಲ್ಲಿ ನಿಧನರಾಗಿದ್ದರು. ಪುತ್ರರಾದ ರಾಖಿ ಮತ್ತು ರಿಕ್ಕಿ ಇದ್ದಾರೆ. ತುಳು ಸಿನಿಮಾ ‘ಕಂಚಿಲ್ದ ಬಾಲೆ’ಯಲ್ಲಿ ಮುತ್ತಪ್ಪ ರೈ ಕಾಣಿಸಿಕೊಂಡಿದ್ದರು. ‘ಜಯ ಕರ್ನಾಟಕ’ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ನ್ಯಾಯಾಲಯಗಳಲ್ಲಿ ಮುತ್ತಪ್ಪ ರೈ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಭದ್ರತಾ ಸಂಸ್ಥೆಗಳು ವಿಫಲವಾದವು. ಆದರೆ ಇಂದಿಗೂ ಸಮಾಜ ಅವರನ್ನು ಭೂಗತ ಲೋಕದ ಮಾಜಿ ಡಾನ್ ಎಂದೇ ಗುರುತಿಸುತ್ತದೆ.

ಮುತ್ತಪ್ಪ ರೈ ವಿರುದ್ಧ ಪೊಲೀಸರು ದಂಡ ಸಂಹಿತೆ 302 (ಕೊಲೆ) ಮತ್ತು 120ಬಿ (ಸಂಚು) ಅನ್ವಯ 8 ಪ್ರಕರಣಗಳನ್ನು ದಾಖಲಿಸಿದ್ದರು. 2001ರಲ್ಲಿ ನಡೆದಿದ್ದ ಬೆಂಗಳೂರಿನ ರಿಯಲ್‌ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಕೊಲೆ ಪ್ರಕರಣದಲ್ಲಿಯೂ ಮುತ್ತಪ್ಪ ರೈ ಅವರ ಹೆಸರು ಕೇಳಿ ಬಂದಿತ್ತು.

2002ರಲ್ಲಿ ದುಬೈ ಪೊಲೀಸರು ಮುತ್ತಪ್ಪ ರೈ ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ಸಿಬಿಐ, ರಾ, ಐಬಿ ಮತ್ತು ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಅವರ ವಿಚಾರಣೆ ನಡೆಸಿದ್ದರು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ರೈ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಲಿಲ್ಲ.

ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆ, ರಕ್ಷಣೆಗಾಗಿ ಹಣ ವಸೂಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗಿನ ನಂಟು ಸೇರಿದಂತೆ ಹತ್ತಾರು ಆರೋಪಗಳು ಮುತ್ತಪ್ಪ ರೈ ಮೇಲಿದ್ದವು. ಮುತ್ತಪ್ಪ ರೈ ಜೀವನ ಆಧರಿಸಿದ ಚಲನಚಿತ್ರವೊಂದನ್ನು (ರೈ)ರಾಮ್‌ ಗೋಪಾಲ್ ವರ್ಮಾ ಸಿದ್ಧಪಡಿಸಲು ಯತ್ನಿಸಿದ್ದರು. ಆದರೆ ಈ ಚಿತ್ರ ಬಿಡುಗಡೆಯಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.