ಬೆಂಗಳೂರು: ಕಾರವಾರದ ಶಾಸಕರಾಗಿದ್ದ ವಸಂತ್ ಅಸ್ನೋಟಿಕರ್ ಕೊಲೆ ಆರೋಪಿ ದಿಲೀಪ್ ಅರ್ಜುನ್ ನಾಯ್ಕ್ ಬಂಧನಕ್ಕೆ ಮುತ್ತಪ್ಪ ರೈ ಸಹಕರಿಸಿದ್ದ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕಾರವಾರ ಬಂದರಿನ ಕಾರ್ಮಿಕ ಸಂಘವನ್ನು ನಿಯಂತ್ರಿಸುವ ಕುರಿತು ಅಸ್ನೋಟಿಕರ್ ಹಾಗೂ ನಾಯ್ಕ್ ನಡುವೆ ಜಗಳವಿತ್ತು. ಈ ಜಗಳ ಅಸ್ನೋಟಿಕರ್ ಕೊಲೆಯಲ್ಲಿ ಅಂತ್ಯಗೊಂಡಿತ್ತು. ವಸಂತ್ ಕಾರವಾರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ನಂತರ ಸಂಘವನ್ನು ತನಗೆ ಬಿಟ್ಟುಕೊಡುವಂತೆ ದಿಲೀಪ್ ಒತ್ತಾಯಿಸಿದ್ದ. ಅದಕ್ಕೆ ಅವರು ಒಪ್ಪಿರಲಿಲ್ಲ.
ಕಿತ್ತಾಟ ತಾರಕಕ್ಕೆ ಹೋದಾಗ ನಾಯ್ಕ್ ಮುಂಬೈನ ಮೂವರು ಬಾಡಿಗೆ ಹಂತಕರಾದ ಟೋನಿ, ಪಕ್ಯಾ ಹಾಗೂ ಸಂಜಯ್ ಕಿಷನ್ ಮೋಹಿತೆ ಎಂಬುವವರ ಮೂಲಕ ಅಸ್ನೋಟಿಕರ್ ಹತ್ಯೆ ಮಾಡಿಸಿದ ಎಂದು ಆರೋಪಿಸಲಾಗಿತ್ತು. ಈ ಘಟನೆಯ ಬಳಿಕ ನಾಯ್ಕ್ ದುಬೈಗೆ ಹಾರಿದ್ದ. ಇದೊಂದು ಗಂಭೀರ ಪ್ರಕರಣವಾದ್ದರಿಂದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಆಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ.
ಸಿಐಡಿ ಡಿಐಜಿ ಆಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಕೆಲವು ದಕ್ಷ ಅಧಿಕಾರಿಗಳನ್ನು ತನಿಖಾ ತಂಡಕ್ಕೆ ಆಯ್ಕೆ ಮಾಡಿಕೊಂಡರು. ಇನ್‌ಸ್ಪೆಕ್ಟರ್‌ಗಳಾಗಿದ್ದ ಲವಕುಮಾರ್, ಎಂ.ಡಿ. ಮುಲ್ಲಾ, ಪೆಮ್ಮಯ್ಯ ಒಳಗೊಂಡಂತೆ ಅನೇಕರು ತಂಡದಲ್ಲಿದ್ದರು. ದುಬೈಗೆ ಪರಾರಿಯಾಗಿರುವ ನಾಯ್ಕ್‌ನನ್ನು ಬಂಧಿಸುವುದು ಹೇಗೆ ಎಂಬ ಚಿಂತೆ ತನಿಖಾ ತಂಡಕ್ಕೆ ಕಾಡಿತ್ತು. ಅಷ್ಟರೊಳಗೆ ದುಬೈನಲ್ಲಿ ಇದ್ದ ಮುತ್ತಪ್ಪರೈನನ್ನು ಸಂಪರ್ಕಿಸಲಾಯಿತು ಎಂದು ನಿವೃತ್ತ ಎಸ್‌ಪಿ ಲವಕುಮಾರ್ ಎರಡು ದಶಕದ ಹಿಂದಿನ ಘಟನೆ ನೆನಪು ಮಾಡಿಕೊಂಡರು.
ಅರ್ಜುನ್ ದಿಲೀಪ್ ನಾಯ್ಕ್, ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಶರತ್‌ಶೆಟ್ಟಿ ಸಂಪರ್ಕದಲ್ಲಿದ್ದ. ಮುತ್ತಪ್ಪರೈ ಕೂಡಾ ಇದೇ ಗ್ಯಾಂಗ್‌ನ ಆಶ್ರಯ ಪಡೆದಿದ್ದು. ದೂರವಾಣಿಯಲ್ಲಿ ಮಾತನಾಡಿದ ಅಧಿಕಾರಿಗಳಿಗೆ ಅಣ್ಣನನ್ನು (ಶರತ್‌ಶೆಟ್ಟಿ) ಕೇಳಿ ಹೇಳುತ್ತೇನೆ ಎಂಬ ಭರವಸೆ ರೈಯಿಂದ ಸಿಕ್ಕಿತು. ಆತ ಹೇಳಿದಂತೆ ಎರಡು, ಮೂರು ದಿನಗಳಲ್ಲಿ ಫೋನ್ ಬಂತು. ದುಬೈಗೆ ಬರಲು ಕರೆ ಬಂತು. ಅದರಂತೆ ತನಿಖಾ ತಂಡ ದುಬೈ ಹಾದಿ ಹಿಡಿಯಿತು. ವಿಮಾನ ನಿಲ್ದಾಣದಲ್ಲಿ ಸ್ವತಃ ರೈ ಪೊಲೀಸ್ ಅಧಿಕಾರಿಗಳನ್ನು ಬರಮಾಡಿಕೊಂಡ.
ಅತ್ತ ಕ್ರಿಕೆಟ್ ಪಂದ್ಯದಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದ ಶರತ್‌ಶೆಟ್ಟಿಯನ್ನು ಭೇಟಿ ಮಾಡಲು ತನಿಖಾ ತಂಡಕ್ಕೆ ಮೂರ್ನಾಲ್ಕು ದಿನ ಅವಕಾಶ ಸಿಗಲಿಲ್ಲ. ಆನಂತರ ಭೇಟಿ ಆಯಿತು. ಶರತ್ ಶೆಟ್ಟಿ ಮರುದಿನ ನಾಯ್ಕ್‌ನನ್ನು ಕರೆಸಿದರು. ಆದರೆ, ಪೊಲೀಸರಿಗೆ ಶರಣಾಗಲು ಆತ ಒಪ್ಪಲಿಲ್ಲ. ಆಗ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಇಲ್ಲದ್ದರಿಂದ ತಂಡ ಬರಿಗೈಯಲ್ಲಿ ಮರಳಿತು. ಆದರೆ, ವಾರದಲ್ಲಿ ನಾಯ್ಕ್ ಮನವೊಲಿಸಿ ವಾಪಸ್ ಕಳುಹಿಸುವ ಭರವಸೆ ಶೆಟ್ಟಿಯಿಂದ ಸಿಕ್ಕಿತು. ಅದರಂತೆ ವಿಮಾನದಲ್ಲಿ ನಾಯ್ಕ್‌ನನ್ನು ಬೆಂಗಳೂರಿಗೆ ಕಳುಹಿಸಿ ಸಿಐಡಿ ಪೊಲೀಸರಿಗೆ ವಿಷಯ ಮುಟ್ಟಿಸಲಾಯಿತು. ಹಳೇ ವಿಮಾನ ನಿಲ್ದಾಣದಲ್ಲಿ ನಾಯ್ಕ್ ಬಂಧನವಾಯಿತು. ಕೆಲವು ಸಮಯದ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ನಾಯ್ಕ್‌ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು.
ಅಸ್ನೋಟಿಕರ್ ಹತ್ಯೆ ಮಾಡಿದ್ದ ಟೋನಿ, ಪಕ್ಯಾ ಮುಂಬೈ ಹಾಗೂ ಉತ್ತರ ಪ್ರದೇಶದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದರು. ಮೋಹಿತೆ ಇನ್ನೂ ಜೈಲಿನಲ್ಲಿದ್ದಾರೆ ಎಂದು ಲವಕುಮಾರ್ ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.