ADVERTISEMENT

ಎದುರಾಳಿಗಳೊಂದಿಗೆ ಮುಖಾಮುಖಿಯಾಗದ ಮುತ್ತಪ್ಪ ರೈ

​ಪ್ರಜಾವಾಣಿ ವಾರ್ತೆ
Published 18 ಮೇ 2020, 2:49 IST
Last Updated 18 ಮೇ 2020, 2:49 IST
ಮುತ್ತಪ್ಪ ರೈ
ಮುತ್ತಪ್ಪ ರೈ   

ಬೆಂಗಳೂರು: ಭೂಗತ ಲೋಕದ ಮರೆಯಲಾಗದ ಹೆಸರು ಮುತ್ತಪ್ಪ ರೈ. ಮೂರು ದಶಕಗಳ ಕಾಲ ಮಿಂಚಿದರೂ, ಎದುರಾಳಿಗಳೊಂದಿಗೆ ಮುಖಾಮುಖಿ ಸಂಘರ್ಷಕ್ಕಿಳಿದ ಉದಾಹರಣೆ ಇಲ್ಲ. ರೌಡಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೂ ಒಂದು ರೀತಿ ಆಕಸ್ಮಿಕ ಎನ್ನಬಹುದೇನೋ. ಪುತ್ತೂರು ಮೂಲದ, ಬಂಟರ‌ ಸಮುದಾಯಕ್ಕೆ ಸೇರಿದ ರೈ ಭೂಗತ ಲೋಕದ ದಂತಕಥೆಯಾಗಿ ಬೆಳೆದದ್ದು ಈಗ ಇತಿಹಾಸ.

ಬ್ಯಾಂಕ್‌ ನೌಕರಿಯಲ್ಲಿದ್ದ ರೈ ಯೂನಿಯನ್‌ ಚಟುವಟಿಕೆಯಲ್ಲೂ ಸಕ್ರಿಯವಾಗಿದ್ದರು. ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಕ್ಯಾಬರೆ ಡಾನ್ಸ್‌ ಬಾರ್, ಕ್ಲಬ್ ವ್ಯವಹಾರಕ್ಕೆ ಕೈಹಾಕಿದ ಬಳಿಕ ಭೂಗತ ಲೋಕದ ಸಂಪರ್ಕ ಸಿಕ್ಕಿತು. ಬೆಂಗಳೂರಿನಲ್ಲಿ ಆ ಕಾಲಕ್ಕೆ ಕೊತ್ವಾಲ್‌ ರಾಮಚಂದ್ರ ಮತ್ತು ಜೈರಾಜ್‌ ದೊಡ್ಡ ರೌಡಿಗಳು. ಅವರ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಿದ್ದರು. ಬದ್ಧ ವೈರಿಗಳಾಗಿದ್ದ ಇಬ್ಬರೂ ಒಬ್ಬರನ್ನೊಬ್ಬರು ಮುಗಿಸಲು ಯತ್ನಿಸುತ್ತಿದ್ದರು. ಕೊತ್ವಾಲ್‌ ಕೊಲೆಯ ಬಳಿಕ ಉಳಿದವನು ಜೈರಾಜ್‌. ಪುಡಿ ಗ್ಯಾಂಗ್‌ಗಳಿಗೆ ಲೆಕ್ಕವಿರಲಿಲ್ಲ.

ಕೊತ್ವಾಲ್‌ ಕೊಲೆ ಪ್ರಕರಣದಲ್ಲಿ ಜೈರಾಜ್‌ ಮತ್ತವರ ಸಹಚರರು ಜೈಲು ಸೇರುತ್ತಾರೆ. ಆಮೇಲೆ ಆರೋಪ ಸಾಬೀತಾಗದೆ ಹೊರಗೆ ಬರುತ್ತಾರೆ. ಅದು ಬೇರೆ ಮಾತು. ಆನಂತರ ಜೈರಾಜ್‌ಗೆ ಕ್ಲಬ್‌ ಮತ್ತು ಬಾರ್‌ಗಳ ಮಾಲೀಕರು ‘ಕಪ್ಪ ಕಾಣಿಕೆ’ ಕೊಡುತ್ತಾರೆ. ಆತ ಪ್ರಬಲವಾಗಿ ಬೆಳೆಯಲು ರಾಜಕಾರಣಿಗಳು ಮತ್ತು ಪೊಲೀಸರ ಬೆಂಬಲವಿರುತ್ತದೆ. ಹೀಗಾಗಿ, ಅವನನ್ನು ಮುಟ್ಟುವುದೇ ಕಷ್ಟ ಎಂಬ ಕಾಲಘಟ್ಟ ಅದು‌‌‌‌‌. ಮುತ್ತಪ್ಪ ರೈ ಜಾಯಿಂಟ್‌ಗಳೂ ಮಾಮೂಲು ಕೊಡುತ್ತವೆ. ಈ ಹಂತದಲ್ಲಿ ರೈಗೆ ಮತ್ತೊಬ್ಬ ರೌಡಿ ಬೂಟ್‌ಹೌಸ್‌ ಕುಮಾರ್‌ ಅಲಿಯಾಸ್‌ ಆಯಿಲ್‌ ಕುಮಾರ್‌ ಜತೆ ಸ್ನೇಹ ಬೆಳೆಯುತ್ತದೆ.

ADVERTISEMENT

ಆಯಿಲ್‌ ಕುಮಾರ್‌ ಅತ್ಯಂತ ಚಾಣಾಕ್ಷ. ಏಕಕಾಲಕ್ಕೆ ಆತ ಕೊತ್ವಾಲ್‌, ಜೈರಾಜ್‌‌ ಇಬ್ಬರನ್ನೂ ‘ಮ್ಯಾನೇಜ್’‌ ಮಾಡುತ್ತಿರುತ್ತಾನೆ. ಜೈರಾಜ್‌ ಜೈಲಿನಿಂದ ಹೊರಬಂದ ಬಳಿಕ ಆಯಿಲ್‌ ಕುಮಾರ್‌ ಮತ್ತು ಅವನ ನಡುವೆ ರಾಜಿ– ಸಂಧಾನಕ್ಕೆ ಪ್ರಯತ್ನಗಳು ನಡೆಯುತ್ತವೆ. ಆದರೆ, ಈ ಪ್ರಯತ್ನ ಸಫಲವಾಗುವುದಿಲ್ಲ. ಈ ನಡುವೆ ಮುತ್ತಪ್ಪ ರೈಗೆ ದಾವೂದ್‌ ಇಬ್ರಾಹಿಂ ಗ್ಯಾಂಗ್‌ನ ಶರತ್‌ಶೆಟ್ಟಿ ಪರಿಚಯವಾಗುತ್ತದೆ . ಆನಂತರ ಏನಾಯಿತು ಎಂದು ಹೇಳಬೇಕಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಪಾತಕಿಯೊಬ್ಬನ ನೆರವು ಸಿಕ್ಕರೆ ಏನಾಗಬಹುದು ಎಂದು ಊಹಿಸುವುದು ಕಷ್ಟವಲ್ಲ.

ಈ ಮಧ್ಯೆ, ಜೈರಾಜ್‌ ಹತ್ಯೆ ನಡೆಯುತ್ತದೆ. ಹತ್ಯೆಗೆ ತಾವೇ ಕಾರಣವೆಂದು ಬಹಳಷ್ಟು ಗ್ಯಾಂಗ್‌ಗಳು ಹೇಳಿಕೊಳ್ಳುತ್ತವೆ. ಬಹುಶಃ ಬೆಂಗಳೂರಿನ ಹಿರಿಯ ನಾಗರಿಕರಿಗೆ ಗೊತ್ತಿದೆ. ಆಯಿಲ್‌ ದಂಧೆ ಕೆಲ ರೌಡಿಗಳ ಜೇಬು ತುಂಬಿಸುತ್ತಿದ್ದ ಸಂಗತಿ. ಬೂಟ್‌ಹೌಸ್‌ ಕುಮಾರ್‌ ಈ ದಂಧೆಯನ್ನೇ ನಂಬಿದ್ದ. ಇದರಿಂದಾಗಿ ಅವನ ಹೆಸರು ಆಯಿಲ್‌ ಕುಮಾರ್‌ ಎಂದಾಗಿತ್ತು. ‘ಆಯಿಲ್‌ ದಂಧೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ’ ಎಂದು ರೌಡಿಗಳಿಗೆ ತಿಳಿದಿದ್ದರಿಂದ ಅದನ್ನು ನಿಯಂತ್ರಿಸಲು ಕಾದಾಟ ನಡೆದಿತ್ತು. ಇಂಥ ಹೊಡೆದಾಟದಲ್ಲೇ ಆಯಿಲ್‌ ಕುಮಾರ್‌ ಪ್ರಾಣ ಕಳೆದುಕೊಂಡಿದ್ದು.

ಬೆಂಗಳೂರಿನ ರೌಡಿಗಳು ಒಬ್ಬೊಬ್ಬರೇ ಖಾಲಿಯಾಗುತ್ತಿದ್ದಂತೆ, ತನಗೆ ಯಾರೂ ಸರಿಸಾಟಿ ಇಲ್ಲ ಎಂದು ರೈ ಭಾವಿಸಿದ್ದಂತಿತ್ತು. ಆದರೆ, ಎಲ್ಲೋ ಮನಸಿನ ಮೂಲೆಯಲ್ಲಿ ಅಗ್ನಿ ಶ್ರೀಧರ್‌ ಬಗ್ಗೆ ಭಯವಿತ್ತು ಎಂಬುದು ಸುಳ್ಳೇನಲ್ಲ. ಹೀಗಾಗಿ, ಶ್ರೀಧರ್‌ ಮುಗಿಸುವ ಸಂಚು ರೂಪಿಸಿದ್ದು. ಈ ಯೋಜನೆ ಕಾರ್ಯಗತವೂ ಆಯಿತು. ಶಾರ್ಪ್‌ ಶೂಟರ್‌ಗಳ ತಪ್ಪು ಗ್ರಹಿಕೆಯಿಂದಾಗಿ ಶ್ರೀಧರ್ ಪ್ರಾಣ ಉಳಿಯಿತು. ಇದಾದ ಬಳಿಕ ಒಬ್ಬರ ತಂಟೆಗೆ ಮತ್ತೊಬ್ಬರು ಹೋಗಲಿಲ್ಲ.

ಶ್ರೀಧರ್‌ ಪರಿವರ್ತನೆಯಾದರು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುತ್ತಪ್ಪ ರೈ ದುಬೈನಿಂದ ಹಿಂತಿರುಗಿದ ಬಳಿಕ ಎಲ್ಲ ಆರೋಪಗಳಿಂದ ಬಿಡುಗಡೆ ಹೊಂದಿ ಬೆಂಗಳೂರಿನ ಹೊರ ವಲಯದಲ್ಲಿ ಉಳಿದರು. ಜಯ ಕರ್ನಾಟಕ ಸೇನೆ ಕಟ್ಟಿದರು. ಆಮೇಲೆ ಕ್ಯಾನ್ಸರ್‌ ರೋಗ ಅವರನ್ನು ಅಪ್ಪಿಕೊಂಡಿತು.

ಬೆಂಗಳೂರಲ್ಲಿ ನಡೆದಿತ್ತು ಹತ್ಯೆ ಯತ್ನ

ಅದು 1996ನೇ ಇಸವಿ. ಮಧ್ಯಾಹ್ನದ ರಣ ಬಿಸಿಲು. ನೃಪತುಂಗ ರಸ್ತೆಯ ಮೆಟ್ರೋಪಾಲಿಟನ್‌ ಕೋರ್ಟ್‌ಗೆ ಮುತ್ತಪ್ಪ ರೈಯನ್ನು ಕರೆತರಲಾಗಿತ್ತು. ವಕೀಲರ ಉಡುಪಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ರೈ ಹತ್ಯೆಗೆ ಯತ್ನಿಸಿದ್ದ. ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ಕುಸಿದು ಬಿದ್ದ ರೈಯನ್ನು ತಕ್ಷಣ ಎದುರಿಗಿದ್ದ ಮಾರ್ಥಾಸ್‌ ಆಸ್ಪತ್ರೆಗೆ ಕೊಂಡೊಯ್ದು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರ ಜೀವ ಉಳಿಯಿತು.

ರೈಗೆ ಗುಂಡು ಹಾರಿಸಿದವನು ಮಂಗಳೂರಿನ ಕುಖ್ಯಾತ ರೌಡಿ ಅಮರ್‌ಆಳ್ವನ ಶಿಷ್ಯ. ಅಮರ್‌ ಆಳ್ವನ ಕೊಲೆ ಪ್ರಕರಣದ ಸಂಬಂಧವಾಗಿ ಈ ಹತ್ಯೆ ಯತ್ನ ನಡೆದಿತ್ತು. ಸ್ಥಳದಲ್ಲೇ ಆರೋಪಿಯನ್ನು ಬಂಧಿಸಲಾಯಿತು. ಗುಂಡುಗಳ ಸದ್ದಿನಿಂದ ಕೋರ್ಟ್‌ ಆವರಣ ತಲ್ಲಣಗೊಂಡಿತ್ತು. ಸಾವಿರಾರು ಜನ ಸೇರಿದ್ದರು.

ಶಸ್ತ್ರಚಿಕಿತ್ಸೆ ಬಳಿಕ ಮುತ್ತಪ್ಪ ರೈನನ್ನು ವಾರ್ಡ್‌ಗೆ ತರಲಾಗಿತ್ತು. ಚಂದೂಲಾಲ್‌ ಆಗ ಪೊಲೀಸ್‌ ಕಮಿಷನರ್‌. ಕೆಂಪಯ್ಯ ಪಶ್ಚಿಮ ವಿಭಾಗದ ಡಿಸಿಪಿ. ಚಂದೂಲಾಲ್‌ ಮುಂದೆಯೇ ಕೆಂಪಯ್ಯ ಅವರ ಮೇಲೆ ರೈ ಕಿಡಿ ಕಾರಿದ್ದ. ದಕ್ಷ ಅಧಿಕಾರಿಯಾಗಿದ್ದ ಕೆಂಪಯ್ಯ ಈತನ ಹೆಡಮುರಿ ಕಟ್ಟಲು ಮುಂದಾಗಿದ್ದೇ ಆಕ್ರೋಶಕ್ಕೆ ಕಾರಣ. ಈ ಘಟನೆಯಿಂದ ಚೇತರಿಸಿಕೊಂಡ ಬಳಿಕರೈ ದೇಶ ಬಿಟ್ಟು ದುಬೈಗೆ ಪಲಾಯನ ಮಾಡಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.