ADVERTISEMENT

ದೇಗುಲಗಳಲ್ಲಿ ಸ್ತ್ರೀಯರಿಗೆ ಕುಂಕುಮ, ಬಳೆ: ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 23:19 IST
Last Updated 21 ಆಗಸ್ಟ್ 2023, 23:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ (ಆ.25) ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಹಿಂದಿನ ವರ್ಷ ನೀಡಿದಂತೆ ಈ ಬಾರಿಯೂ ಅರಿಶಿಣ, ಕುಂಕುಮ, ಕಸ್ತೂರಿ ಹಾಗೂ ಹಸಿರು ಬಳೆಗಳನ್ನು ನೀಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮಹತ್ವಪೂರ್ಣ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ. ಸ್ವರ್ಣಗೌರಿ, ನವರಾತ್ರಿಗಳಲ್ಲಿ ಸ್ತ್ರೀದೇವತೆಗಳನ್ನು ಪೂಜಿಸುವಂತೆ ಶ್ರಾವಣಮಾಸದಲ್ಲಿ ವರಮಹಾಲಕ್ಷ್ಮಿ ಪೂಜಿಸುವುದು ಸಂಪ್ರದಾಯವಾಗಿದೆ. ಹಬ್ಬದ ದಿನ ದೇವಿಯನ್ನು ಅಲಂಕಾರ ಮಾಡಿ, ವಿಶೇಷವಾಗಿ ಪೂಜಿಸಲಾಗುತ್ತದೆ. ಮಹಿಳೆಯರು ಮನೆಯಲ್ಲಿ ದೇವಿಯನ್ನು ಪೂಜಿಸಿದ ನಂತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೀಗೆ ದೇವಸ್ಥಾನಕ್ಕೆ ಬರುವವರಿಗೆ ಉತ್ತಮ ಗುಣಮಟ್ಟದ ಅರಿಶಿಣ, ಕುಂಕುಮ, ಬಳೆ ನೀಡಬೇಕು ಎಂದು ಸೂಚಿಸಲಾಗಿದೆ.

ದೇವರ ಮುಂದೆ ಇಟ್ಟು ಇವೆಲ್ಲವನ್ನೂ ಪೂಜಿಸಿದ ನಂತರ ಸರ್ಕಾರದ ಲಾಂಛನ, ದೇವಸ್ಥಾನದ ಹೆಸರು ಒಳಗೊಂಡ ಲಕೋಟೆಯಲ್ಲಿ ಹಾಕಿ ಗೌರವ ಸೂಚಕವಾಗಿ ಕೊಡಬೇಕು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಯಾ ದೇವಸ್ಥಾನಗಳೇ ವೆಚ್ಚವನ್ನು ಭರಿಸಬೇಕು ಎಂದು ವಿವರಿಸಲಾಗಿದೆ.

ADVERTISEMENT

ಸ್ತ್ರೀದೇವತೆಗಳನ್ನು ಪೂಜಿಸುವ ದಿನಗಳಂದು ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಿಸುವಂತೆ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನೇ ಕಾಂಗ್ರೆಸ್‌ ಸರ್ಕಾರ ಮುಂದುವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.