ಬೆಂಗಳೂರು: ‘ಸಂವಿಧಾನ ರಚನಾ ಸಭೆಯಲ್ಲಿ ನೂರಾರು ದಿನ ಚರ್ಚೆ ನಡೆದು, ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಳ್ಳಲಾಗಿತ್ತು. ಆದರೆ ಈಗ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೇ ಮಸೂದೆಗಳನ್ನು ಪಾಸು ಮಾಡಲಾಗುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಕಾಂಗ್ರೆಸ್ ನಾಯಕ ಮತ್ತು ಸಾಹಿತಿ ಎಂ.ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಎಂವಿಆರ್ ಪ್ರತಿಷ್ಠಾನ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಎಂ.ವಿ.ರಾಜಶೇಖರನ್ ಜನ್ಮ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮದಲ್ಲಿ, ‘ಭಾರತ ಸಂವಿಧಾನದ ಆಶಯಗಳು–ಸ್ವಾತಂತ್ರ್ಯಾನಂತರ ನಮ್ಮ ನಡೆ’ ವಿಷಯ ಕುರಿತು ಅವರು ಮಾತನಾಡಿದರು.
‘ದೇಶದಲ್ಲಿ ರಾಜಕೀಯ ಚಿಂತನೆ ಸೊರಗುತ್ತಿದೆ. ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಆ ಬಗ್ಗೆ ಯೋಚಿಸುವವರು ಇಲ್ಲವೇ ಇಲ್ಲ. ಈ ಕಾರಣದಿಂದಲೇ ಸಮಸ್ಯೆಗಳು ಬಿಗಡಾಯಿಸುತ್ತಿವೆ. ದೇಶವನ್ನು ಉಳಿಸಬೇಕಾದರೆ ನೀವೆಲ್ಲರೂ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಯೋಚಿಸುವ ಕೆಲಸ ಮಾಡಬೇಕು’ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎಂವಿಆರ್ ಪ್ರತಿಷ್ಠಾನದ ಟ್ರಸ್ಟಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಎಚ್.ಹನುಮಂತಪ್ಪ, ‘ಸಂವಿಧಾನ ರಚನೆ ವೇಳೆ ಸೇರಿಸಲಾಗಿದ್ದ 370ನೇ ವಿಧಿಯನ್ನು ಯಾವುದೇ ಚರ್ಚೆ ಇಲ್ಲದೆಯೇ ನಿಷ್ಕ್ರಿಯ ಮಾಡಲಾಯಿತು. ಅದನ್ನು ಏಕೆ ನಿಷ್ಕ್ರಿಯ ಮಾಡಲಾಗುತ್ತಿದೆ ಎಂದು ವಿವರಿಸುವ ಗೋಜಿಗೂ ಹೋಗದ ಸರ್ಕಾರ, ಜಮ್ಮು–ಕಾಶ್ಮೀರದ ರಾಜ್ಯದ ಸ್ಥಾನವನ್ನೇ ಕಿತ್ತುಕೊಂಡಿತು’ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.