ಹೊಸಪೇಟೆ: ‘ಎಲ್ಲೋ ನನ್ನ ಆತ್ಮವಿಶ್ವಾಸ ಕಡಿಮೆಯಾಗಿದೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನು ಕಂಡಿರುವ ಕನಸು, ಯೋಜನೆಗಳನ್ನು ಬಹಳ ವೇಗವಾಗಿ ಮಾಡಲು ಯೋಚಿಸಿದ್ದೆ. ಆದರೆ, ಕೋವಿಡ್‌ನಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ’ ಎಂದು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಅಸಹಾಯಕತೆ ತೋಡಿಕೊಂಡರು.
ಭಾನುವಾರ ನಗರದಲ್ಲಿ ನಡೆದ ಹುಡಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವುದನ್ನೇ ನೆಪ ಮಾಡಿಕೊಂಡು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಯಾರೂ ಈ ವೇಳೆ ಟೀಕೆ ಮಾಡಬಾರದು. ಬೇರೆ ಪಕ್ಷದ ಸರ್ಕಾರವಿದ್ದರೂ ಈಗಿನ ಪರಿಸ್ಥಿತಿ ಬದಲಿಸಲು ಆಗುತ್ತಿರಲಿಲ್ಲ’ ಎಂದರು.
‘ಆರ್ಥಿಕ ಸ್ಥಿತಿ ಕೆಟ್ಟಿರುವುದರಿಂದ ಕೆಲಸಗಳು ಆಮೆಗತಿಯಲ್ಲಿ ನಡೆಯಬಹುದು. ಆದರೆ, ಎರಡ್ಮೂರು ತಿಂಗಳೊಳಗೆ ಜೋಳದರಾಶಿ ಗುಡ್ಡದ ಮೇಲೆ ₹12.5 ಕೋಟಿಯಲ್ಲಿ ವಿವೇಕಾನಂದರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಖನಿಜ ನಿಧಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ದೇಣಿಗೆ ಪಡೆಯಲಾಗುವುದು’ ಎಂದು ಹೇಳಿದರು.
‘ದುಡ್ಡು ಇರಲ್ಲ’:
‘ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದುಡ್ಡು ಇರಲ್ಲ. ಬೇರೆ ರೀತಿಯ ದುಡ್ಡು ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅಭಿವೃದ್ಧಿಗಂತೂ ಹೆಚ್ಚಿನ ದುಡ್ಡು ಇರಲ್ಲ. ಪ್ರತಿಯೊಂದು ಕೆಲಸ ಜಿಲ್ಲಾಡಳಿತದ ಅಡಿಯಲ್ಲಿ ಮಾಡಬೇಕು. ಇದು ಜೀರೆಯವರಿಗೆ ಸವಾಲು’ ಎಂದು ಆನಂದ್ ಸಿಂಗ್ ಹೇಳಿದರು.
‘ಬಿಜೆಪಿ ಪಕ್ಷಕ್ಕಾಗಿ ಜೀರೆ ಸಾಕಷ್ಟು ಬೆವರು ಹರಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕಾಗಿ ಅವರು ನನಗಾಗಲಿ, ಪಕ್ಷದ ಮುಖಂಡರಿಗಾಗಲಿ ಕೇಳಿರಲಿಲ್ಲ. ಅವರ ಕೆಲಸಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ’ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅಶೋಕ ಜೀರೆ, ‘ಆನಂದ್ ಸಿಂಗ್ ಅವರು ನನ್ನ ಹೆಸರು ಸಲಹೆ ಮಾಡಿದ್ದರಿಂದ ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವೆ’ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ವಿಜಯನಗರ ರಾಜವಂಶಸ್ಥ ಕೃಷ್ಣದೇವರಾಯ, ಮುಖಂಡರಾದ ಬಾಬುಲಾಲ್ ಜೈನ್, ಅಯ್ಯಾಳಿ ತಿಮ್ಮಪ್ಪ, ಕೊಟ್ರೇಶ್, ಕವಿತಾ ಈಶ್ವರ್ ಸಿಂಗ್, ಬಸವರಾಜ ನಾಲತ್ವಾಡ, ಗುಜ್ಜಲ್ ನಿಂಗಪ್ಪ, ಕಣ್ಣಿ ಶ್ರೀಕಂಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.