ಮೈಸೂರು: ‘ಸಿದ್ದರಾಮಯ್ಯ 42 ವರ್ಷದ ರಾಜಕಾರಣದಲ್ಲಿ ಎಂದೂ ಬಡವರಿಗೆ ಅನ್ಯಾಯ ಮಾಡಿಲ್ಲ. ಒಂದು ರೂಪಾಯಿ ಲಂಚ ಪಡೆದಿಲ್ಲ. ನನ್ನ ಮೇಲಿನ ಸುಳ್ಳು ಆರೋಪವನ್ನು ಸಹಿಸುತ್ತೀರ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣದ ಮತದಾರರನ್ನು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ₹501 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.
'ಸಾರ್ವಜನಿಕರಿಂದ ಹಣ ಪಡೆದಿದ್ದರೆ ಒಂಭತ್ತು ಚುನಾವಣೆ ಗೆಲ್ಲಲು ಆಗುತ್ತಿತ್ತ? ನನ್ನ ಜೀವನ ತೆರೆದ ಪುಸ್ತಕ, ಯಾರೂ ಬೇಕಾದರೂ ಓದಬಹುದು' ಎಂದರು.
‘ನನ್ನ ಭಾಮೈದ ತಂಗಿಗೆ ಅರಿಶಿನ ಕುಂಕುಮಕ್ಕೆ ಕೊಟ್ಟ ಜಮೀನನ್ನು ವಿವಾದ ಮಾಡಿದರು. ಅದಕ್ಕೇ ನಿವೇಶನವನ್ನೇ ವಾಪಸ್ ಕೊಟ್ಟಿದ್ದೇವೆ. 40 ವರ್ಷದಿಂದ ಶಾಸಕನಾಗಿದ್ದರೂ ಸ್ವಂತ ಮನೆ ಇಲ್ಲ. ಮೈಸೂರಿನಲ್ಲಿ ಮರಿಸ್ವಾಮಿ ಎಂಬುವರ ಮನೆಯಲ್ಲಿದ್ದೇನೆ. ಈಗ ಸ್ವಂತ ಮನೆ ಕಟ್ಟಿಸುತ್ತಿದ್ದೇನೆ. ನೀವೇ ನಮ್ಮ ಮಾಲೀಕರು, ನೀವೇ ಯಜಮಾನರು. ನೀವು ಮಾತನಾಡಿ’ ಎಂದರು.
‘ಕುಮಾರಸ್ವಾಮಿ, ಯಡಿಯೂರಪ್ಪ, ಜೋಶಿ, ವಿಜಯೇಂದ್ರ ಮೊದಲಾದವರಿಗೆ ನನ್ನನ್ನು ಕಂಡರೆ ಹೊಟ್ಟೆ ಉರಿ. ಮೂರು ವರ್ಷದಿಂದ ಮೈಸೂರಿನ ಕುವೆಂಪು ರಸ್ತೆಯಲ್ಲಿ ಮನೆ ಕಟ್ಟಿಸುತ್ತಿದ್ದೇನೆ. ಒಬ್ಬ ಮುಖ್ಯಮಂತ್ರಿ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಕಾಯಾ ವಾಚ ಮನಸಾ ಪ್ರಾಮಾಣಿಕವಾಗಿ ರಾಜಕಾರಣದಲ್ಲಿ ಇದ್ದೇನೆ. ನನಗೆ ಜಾತಿ- ಧರ್ಮದ ಹಂಗಿಲ್ಲ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇನೆ’ ಎಂದು ನುಡಿದರು
‘ನಿಮ್ಮ ಆಶೀರ್ವಾದ ಇರುವವರೆಗೆ ಬಿಜೆಪಿ- ಜೆಡಿಎಸ್ ಅನ್ನು ಸಮರ್ಥವಾಗಿ ಎದುರಿಸಲಿದ್ದೇನೆ. ಅವರ ಸುಳ್ಳು ಆರೋಪಗಳಿಗೆ ಜಗ್ಗುವುದಿಲ್ಲ, ಬಗ್ಗೂವುದು ಇಲ್ಲ. ಕಾನೂನಿನ ಮೇಲೆ ಗೌರವ ಇದ್ದು, ಅಲ್ಲಿಯೇ ನ್ಯಾಯ ಸಿಗುವ ವಿಶ್ವಾಸ ಇದೆ. ನಾನು ಇರುವವರೆಗೂ ಬಡವರಿಗೆ ನ್ಯಾಯ ಕೊಡಿಸುತ್ತೇನೆ. ಎಂದೂ ಮತದಾರರಿಗೆ ಅಗೌರವ ತರುವ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.