ಮೈಸೂರು: ‘ಇಲ್ಲಿ ಶನಿವಾರ ನಡೆದ ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಗೆಂದು ಚಿನ್ನದ ಅಂಬಾರಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವಲ್ಲಿ ನಮ್ಮಿಂದ ವಿಳಂಬವಾಗಿಲ್ಲ’ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಭಾನುವಾರ ಪ್ರಕಟಣೆ ನೀಡಿರುವ ಅವರು, ‘ಮೆರವಣಿಗೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 2.05ಕ್ಕೇ ಅಂಬಾರಿ ಹಸ್ತಾಂತರಿಸಲಾಯಿತು’ ಎಂದು ತಿಳಿಸಿದ್ದಾರೆ. ಅಂಬಾರಿಯು 2.05ಕ್ಕೆ ದೊರೆತ ಬಗ್ಗೆ ಅರಮನೆ ಭದ್ರತಾ ಪಡೆಯ ಎಸಿಪಿ ಚಂದ್ರಶೇಖರ್ ಅವರಿಂದ ಅರಮನೆ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್ ಅವರು ಸ್ವೀಕೃತಿ ಪಡೆದಿರುವ ಪ್ರತಿಯನ್ನೂ ಪ್ರಕಟಣೆಯೊಂದಿಗೆ ಲಗತ್ತಿಸಿದ್ದಾರೆ.
‘ಮೆರವಣಿಗೆಯ ಸಂದರ್ಭದಲ್ಲಿ ಅಭಿಮನ್ಯು ಆನೆಯು ಚಿನ್ನದ ಅಂಬಾರಿಯನ್ನು ಸಾಗಿಸುವಲ್ಲಿ ಹಾಗೂ ಮುಹೂರ್ತದೊಳಗೆ ಪುಷ್ಪಾರ್ಪಣೆ ಮಾಡಲು ಆಗಿರುವ ವಿಳಂಬಕ್ಕೆ ನಾವು ಕಾರಣವಲ್ಲ’ ಎಂದು ತಿಳಿಸಿದ್ದಾರೆ.
‘ಎಲ್ಲವನ್ನೂ ಸೂಕ್ಷ್ಮವಾಗಿ ನಿರ್ವಹಿಸಲು, ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಮತ್ತು ಅಂಬಾರಿ ಸಿದ್ಧವಾಗಿದ್ದರೂ, ಅದನ್ನು ಸ್ಥಳಾಂತರಿಸಲು ಸಂಬಂಧಿಸಿದ ಸಿಬ್ಬಂದಿಗೆ ತೊಂದರೆಯಾಯಿತು. ಜನಸಂದಣಿಯ ಕಳಪೆ ನಿರ್ವಹಣೆಯೂ ಇದಕ್ಕೆ ಕಾರಣವಾಯಿತು. ಕೆಲವು ಸರ್ಕಾರಿ ಕಾರ್‌ಗಳು ಮತ್ತು ಸರ್ಕಾರಿ ಅತಿಥಿಗಳು ಹಾಗೂ ಪಾಲ್ಗೊಳ್ಳುವವರನ್ನು ಕರೆತಂದ ಖಾಸಗಿ ಬಸ್ ಅಂಬಾರಿ, ಆನೆಗಳು ಸಾಗುವ ಮಾರ್ಗದಲ್ಲಿ ನಿಂತಿದ್ದರಿಂದ ತೊಂದರೆಯಾಯಿತು. ಅಂಬಾರಿಯನ್ನು ಅನೆ ಮೇಲೆ ಕಟ್ಟುವ ಸ್ಥಳಕ್ಕೆ ಸಾಗಿಸಲು ಹಾಗೂ ಅಭಿಮನ್ಯುವಿನ ಮೇಲೆ ಕಟ್ಟಲು ಸಿಬ್ಬಂದಿಗೆ ಕಷ್ಟವಾಯಿತು. ಇದು ನನಗೆ ಆತಂಕವನ್ನುಂಟು ಮಾಡಿದೆ’ ಎಂದು ಹೇಳಿದ್ದಾರೆ.
‘ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸವಾಗಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಸಂಬಂಧಿಸಿದವರಿಗೆ ಅನಗತ್ಯ ಆತಂಕ ಉಂಟಾಗುವುದನ್ನು ತಪ್ಪಿಸಬೇಕು’ ಎಂದಿದ್ದಾರೆ.
‘ಅಂಬಾರಿ ಹಸ್ತಾಂತರದ ಸಮಯದ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ಈ ಹೇಳಿಕೆ ನೀಡಿದ್ದೇನೆ. ಇದರಲ್ಲಿ ಯಾವುದೇ ಅಪರಾಧವಾಗಿಲ್ಲ’ ಎಂದು ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅವರ ಪದ್ಧತಿ ಮೇಲೆ ಅಂಬಾರಿ ಕೊಡುವುದು ಸ್ವಲ್ಪ ತಡವಾದ್ದರಿಂದ, ಜಂಬೂಸವಾರಿ ಕೊಂಚ ವಿಳಂಬವಾಯಿತು. ಆದರೂ ಎಲ್ಲವೂ ಚೆನ್ನಾಗಿ ನಡೆಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.