ಸಾಗರ: ಭಾಷೆ, ಕಲೆ, ಸಂಸ್ಕೃತಿ, ರಂಗಭೂಮಿಗೆ ಸಂಬಂಧಿಸಿದ ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಬೇಕು ಎಂದು ಒತ್ತಾಯಿಸಿ ರಂಗಕರ್ಮಿ ಪ್ರಸನ್ನ ಅವರು ವಿಶ್ವ ರಂಗಭೂಮಿ ದಿನವಾಗಿರುವ ಮಾರ್ಚ್ 27ರಂದು ಮೈಸೂರಿನಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿರುವ ನಾಟಕ ಶಾಲೆ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮರ್ಜಿಯಿಂದ ಸಂಪೂರ್ಣ ಮುಕ್ತವಾಗಿರಬೇಕು. ಶಾಲೆಗಳಲ್ಲಿ ರಂಗಭೂಮಿ ಚಟುವಟಿಕೆಯನ್ನು ನಡೆಸಲು ಸರ್ಕಾರ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನೂ ಈಡೇರಿಸಲು ಒತ್ತಾಯಿಸಿ ಈ ಉಪವಾಸ ಕೈಗೊಳ್ಳುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
‘ಸಾಂಸ್ಕೃತಿಕ ಸಂಸ್ಥೆಗಳು ಜನರ ಸಂಸ್ಥೆಗಳೇ ಹೊರತು ಸರ್ಕಾರದ ಸಂಸ್ಥೆಗಳಲ್ಲ. ಸರ್ಕಾರ ಅನುದಾನ ನೀಡಿದೆ ಎಂದ ಮಾತ್ರಕ್ಕೆ ಅವುಗಳ ಚಟುವಟಿಕೆಯಲ್ಲಿ ಮೂಗು ತೂರಿಸುವ ಅಧಿಕಾರವಿಲ್ಲ. ಆದರೆ ಈಚೆಗೆ ಸರ್ಕಾರ ಹಾಗೂ ರಾಜಕಾರಣಿಗಳ ಹಸ್ತಕ್ಷೇಪ ಅತಿಯಾಗುತ್ತಿರುವುದರಿಂದ ಸಾಂಸ್ಕೃತಿಕ ಸಂಘಟನೆಗಳ ಸ್ವಾಯತ್ತೆಗೆ ಧಕ್ಕೆಯಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ರಾಜ್ಯದ ಕೇಂದ್ರಗಳಲ್ಲಿರುವ ನಾಟಕ ಶಾಲೆಗಳು ಕೂಡ ಆಯಾ ಭಾಗದ ಜನರ ಸಂಸ್ಥೆಯಾಗಿವೆ. ಅವುಗಳನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಅಗತ್ಯವಿದೆ. ಆದರೆ ದೆಹಲಿಯಲ್ಲಿರುವ ಸಂಸ್ಥೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಸ್ಥಳೀಯ ಅಭಿರುಚಿಗೆ ವಿರುದ್ಧವಾದ ಕಾರ್ಯಕ್ರಮಗಳೇ ಮುನ್ನೆಲೆಗೆ ಬರುತ್ತವೆ’ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಶಾಲೆಗಳಲ್ಲಿ ಈಗಿರುವ ಶಿಕ್ಷಣ ಪದ್ಧತಿಯಿಂದ ಭಾಷೆ, ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ ಎಂಬುದು ಸಾಬೀತಾಗಿದೆ. ಹೀಗಾಗಿ ಮಕ್ಕಳಲ್ಲಿ ಸದಭಿರುಚಿಯ ಸಾಂಸ್ಕೃತಿಕ ಮನೋಭಾವ ಬೆಳೆಸಲು ಸರ್ಕಾರ ನೇರವಾಗಿ ಶಾಲೆಗಳಿಗೆ ದೊಡ್ಡ ಮೊತ್ತದ ಅನುದಾನ ನೀಡಬೇಕು. ಆಯಾ ಭಾಗದ ಶಾಲೆಗಳ ಸಮಿತಿ ಸ್ಥಳೀಯ ರಂಗ ಕಲಾವಿದರ ನೆರವಿನಿಂದ ಮಕ್ಕಳಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.