ADVERTISEMENT

ಪ್ರೀತಂಗೌಡ ಫ್ಲೆಕ್ಸ್‌ಗೆ ಬೆಂಕಿ: ಮೈತ್ರಿ ಕಾರ್ಯಕರ್ತರ ನಡುವೆ ಅಸಮಾಧಾನದ ಹೊಗೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 13:45 IST
Last Updated 8 ಆಗಸ್ಟ್ 2024, 13:45 IST
   

ಮಂಡ್ಯ: ಬಿಜೆಪಿ–ಜೆಡಿಎಸ್‌ ‘ಮೈಸೂರು ಚಲೋ’ ಪಾದಯಾತ್ರೆ ವೇಳೆ ಜೆಡಿಎಸ್‌ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಬೆಂಬಲಿಗರ ನಡುವೆ ನಡೆದ ಮಾತಿನ ಚಕಮಕಿಯು, ಬುಧವಾರ ತಡರಾತ್ರಿ ಪ್ರೀತಂಗೌಡರ ಭಾವಚಿತ್ರವಿದ್ದ ಫ್ಲೆಕ್ಸ್‌ಗೆ ಬೆಂಕಿ ಹಚ್ಚುವವರೆಗೆ ಮುಂದುವರಿದಿದೆ.

‘ಗೌಡರ ಗೌಡ ಪ್ರೀತಂಗೌಡ’ ಎಂದು ಪ್ರೀತಂಗೌಡ ಬೆಂಬಲಿಗರು ಘೋಷಣೆ ಕೂಗಿದ್ದರು. ಇದಕ್ಕೆ ಜೆಡಿಎಸ್‌ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಾತಿನ ಚಕಮಕಿ ನಡೆಸಿದ್ದರು. ನಂತರ ಕೈ–ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಜತೆಗೆ ಎತ್ತಿನಗಾಡಿಯಲ್ಲಿ ಸಾಗುತ್ತಿದ್ದ ಬಿ.ವೈ.ವಿಜಯೇಂದ್ರ ಅವರನ್ನು ಅಡ್ಡಗಟ್ಟಿ, ‘ನಿಮ್ಮವರಿಗೆ ಬುದ್ಧಿಮಾತು ಹೇಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮಂಡ್ಯ ಹೊರವಲಯದ ಉಮ್ಮಡಹಳ್ಳಿ ಸಮೀಪ ಮೈಸೂರು–ಬೆಂಗಳೂರು ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಕಟ್ಟಿದ್ದ ಪ್ರೀತಂಗೌಡರ ಫ್ಲೆಕ್ಸ್‌ ಅನ್ನು ಕೆಲವು ಕಿಡಿಗೇಡಿಗಳು ಹರಿದು ಹಾಕಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ADVERTISEMENT

ಸ್ವಾಭಿಮಾನಕ್ಕೆ ಧಕ್ಕೆಯಾಗದಿರಲಿ:

ಈ ಘಟನೆ ಬಗ್ಗೆ ಗುರುವಾರ ಮಾತನಾಡಿರುವ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ‘ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ಸ್ವಾಭಿಮಾನಿಗಳು ಇದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಆಗದಂತೆ ಎಚ್ಚರವಹಿಸಬೇಕು’ ಎಂದು ಪರೋಕ್ಷವಾಗಿ ಬಿಜೆಪಿ ಕಾರ್ಯಕರ್ತರಿಗೆ ಹೇಳಿದರು.

‘ಕೋ ಆರ್ಡಿನೇಷನ್ ಕಮಿಟಿಯ ಎರಡು ಪಕ್ಷಗಳ ಸದಸ್ಯರು ಈ ಘಟನೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದು ನೋಡೋಣ’ ಎಂದು ತಿಳಿಸಿದರು.

‘ನಮ್ಮ ಉದ್ದೇಶ ಪಾದಯಾತ್ರೆ. ನಿನ್ನೆ ನಡೆದ ಘಟನೆಯ ಬಗ್ಗೆ ನಮ್ಮ ನಾಯಕರಾದ ಕುಮಾರಸ್ವಾಮಿ ಅವರು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಸಂಬಂಧ ಅತ್ಯುತ್ತಮವಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ಬೇರೆ ಬೇರೆ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು, ಕಾರ್ಯಕರ್ತರು ತಾಳ್ಮೆಯಿಂದ ವರ್ತನೆ ಮಾಡಬೇಕು’ ಎಂದು ಮನವಿ ಮಾಡಿದರು.

ಎಚ್‌ಡಿಕೆಗೆ ಗೌರವ, ಪ್ರೀತಂಗೆ ರಕ್ಷಣೆ:

ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ‘ಸಾವಿರಾರು ಕಾರ್ಯಕರ್ತರು ಒಂದೆಡೆ ಸೇರಿದಾಗ ತಳ್ಳಾಟ, ನೂಕಾಟ ಸಹಜ. ಮೈತ್ರಿ ಪಕ್ಷಗಳ ಕಾರ್ಯಕರ್ತರ ನಡುವೆ ಯಾವುದೇ ಘರ್ಷಣೆಯಾಗಿಲ್ಲ. ಎನ್‌ಡಿಎ ಮೈತ್ರಿಕೂಟದ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಗೌರವ ಕೊಟ್ಟು, ಪ್ರೀತಂಗೌಡರನ್ನು ಉಳಿಸಿಕೊಳ್ಳುತ್ತೇವೆ. ನಾವು ಭವಿಷ್ಯದ ರಾಜಕಾರಣದ ಬಗ್ಗೆ ಯೋಚನೆ ಮಾಡಬೇಕಿದ್ದು, ಮೈತ್ರಿ ಮುಂದುವರಿಯದಲಿದೆ’ ಎಂದರು.

ಪಾದಯಾತ್ರೆಗೆ ಪ್ರೀತಂಗೌಡ ಗೈರು!

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರು ಗುರುವಾರ ನಡೆದ 6ನೇ ದಿನದ ಪಾದಯಾತ್ರೆಗೆ ಗೈರು ಹಾಜರಾಗಿದ್ದರು. ಮಂಡ್ಯ ನಗರದಲ್ಲಿ ಪ್ರೀತಂ ಬೆಂಬಲಿಗರು ಮತ್ತು ಜೆಡಿಎಸ್‌ ಕಾರ್ಯಕರ್ತರ ನಡೆದ ಮಾತಿನ ಚಕಮಕಿ ಘಟನೆ ಹಿನ್ನೆಲೆಯಲ್ಲಿ ಪ್ರೀತಂಗೌಡ ಅವರು ಪಾದಯಾತ್ರೆಗೆ ಬರದಂತೆ ನಿರ್ಬಂಧ ಹಾಕಿರಬಹುದು ಎಂಬ ಗುಸುಗುಸು ಹರಿದಾಡುತ್ತಿದೆ. ಈ ವಿಷಯ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.