ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾಗೆ ಭಾನುವಾರ ಬೆಳಿಗ್ಗೆ ಸಡಗರ, ಸಂಭ್ರಮದ ಚಾಲನೆ ದೊರೆಯಿತು.
ಸಾಹಿತಿ ಎಸ್.ಎಲ್.ಭೈರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಬೆಳ್ಳಿ ತೇರಿನಲ್ಲಿದ್ದ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬೆಳಿಗ್ಗೆ 9.45ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ ಅಂಗಡಿ, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ,ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಖ್ಯಮಂತ್ರಿ ಜತೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಉದ್ಘಾಟನಾ ಸಮಾರಂಭದ ಕ್ಷಣಕ್ಷಣದ ಮಾಹಿತಿ:ದಸರಾ LIVE | ನಾನು ದೇವರನ್ನು ನಂಬುತ್ತೇನೆ: ಭೈರಪ್ಪ
ದಸರಾ ಉದ್ಘಾಟನೆಗಾಗಿ ಶನಿವಾರ ರಾತ್ರಿಯೇ ಮೈಸೂರಿಗೆ ಬಂದಿದ್ದ ಯಡಿಯೂರಪ್ಪ ಅವರು ಭಾನುವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ದೇವಿಗೆ ವಿಶೇಷ ಪೂಜೆಗೈಯಲು ಚಾಮುಂಡಿ ಸನ್ನಿಧಿಗೆ ಭೇಟಿ ಕೊಟ್ಟರು. ಭೈರಪ್ಪ ಅವರು ಮುಖ್ಯಮಂತ್ರಿ ಆಗಮನಕ್ಕೂ ಮುನ್ನವೇ ಬೆಟ್ಟಕ್ಕೆ ಬಂದಿದ್ದರು.
ಹಲವರ ಬಂಧನ:ಸಂಸದ ಪ್ರತಾಪ್ ಸಿಂಹ ಮಹಿಷ ದಸರೆಗೆ ಅಡ್ಡಿ ಪಡಿಸಿದ್ದಾರೆ ಎಂದು ಆರೋಪಿಸಿ ದಸರೆ ಪೂಜೆಗೆ ಅಡ್ಡಿಪಡಿಸಲಿಕ್ಕಾಗಿ ಬೆಟ್ಟಕ್ಕೆ ಬರುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಟ್ಟದಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.