ಬೆಳಗಾವಿ: ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ತೆರವುಗೊಳಿಸಿದ ಸ್ಥಾನವನ್ನು, ಅವರ ವೈಚಾರಿಕತೆಯ ನೆರಳಿನಲ್ಲಿಯೇ ಬೆಳೆದುಬಂದ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ತುಂಬಲಿದ್ದಾರೆ. ಬಸವ ತತ್ವಗಳ ಪಾಲನೆ, ವೈಚಾರಿಕತೆ, ಜಾತ್ಯಾತೀತ ಮನೋಭಾವ ಸೇರಿದಂತೆ ಹಲವು ವಿಚಾರಗಳಲ್ಲಿ ಇಬ್ಬರೂ ಒಂದೇ ಅಭಿಪ್ರಾಯ ಹೊಂದಿದ್ದರು. ಸಮಾನ ಮನಸ್ಕರರಾಗಿದ್ದರು.
ತಮ್ಮ ವಿಚಾರಧಾರೆಗಳ ಬಗ್ಗೆ ಸಾಮ್ಯತೆ ಹೊಂದಿರುವ ಸಿದ್ಧರಾಮ ಸ್ವಾಮೀಜಿಗಳನ್ನು ತೋಂಟದ ಸ್ವಾಮೀಜಿಗಳು ಸುಮಾರು 32 ವರ್ಷಗಳ ಹಿಂದೆಯೇ ಗುರುತಿಸಿದ್ದರು. ಅದು 1986ರ ಸಮಯ. ‘ಪರಂಜ್ಯೋತಿ’ ಎನ್ನುವ ಅಧ್ಯಾತ್ಮಿಕ ಮಾಸ ಪತ್ರಿಕೆಯಲ್ಲಿ ಚರಂತಿಮಠದ ಪ್ರಭುದೇವರ ಕುರಿತಾದ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನದಲ್ಲಿ ಮಠಾಧೀಶರು ಹಾಗೂ ಸಮಾಜದ ನಡುವಿನ ಬಾಂಧವ್ಯ ಕುರಿತು ಸಿದ್ಧರಾಮ ಸ್ವಾಮೀಜಿ ಅವರು ಬರೆದಿದ್ದರು.
ಆ ಸಂದರ್ಭದಲ್ಲಿ ಸಿದ್ಧರಾಮ ಸ್ವಾಮೀಜಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿರುವ ಕಲ್ಮಠದ ಉತ್ತರಾಧಿಕಾರಿಯಾಗಿದ್ದರು. ಈ ಲೇಖನವನ್ನು ಓದಿದ ತೋಂಟದ ಸ್ವಾಮೀಜಿಯವರು, ಸಿದ್ಧರಾಮ ಸ್ವಾಮೀಜಿ ಅವರನ್ನು ಭೇಟಿಯಾಗಿ, ಹರಿಸಿದ್ದರು. ಅಂದಿನಿಂದ ಇವರಿಬ್ಬರ ಬಾಂಧವ್ಯ ಬೆಳೆಯಿತು.
ರುದ್ರಾಕ್ಷಿ ಮಠಕ್ಕೆ ನೇಮಕ:
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನಾಗನೂರು ಗ್ರಾಮದಲ್ಲಿರುವ ರುದ್ರಾಕ್ಷಿಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಯಾರನ್ನು ಮಾಡಬೇಕೆಂದು 1988ರಲ್ಲಿ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿ ಅವರು ತೋಂಟದ ಸ್ವಾಮೀಜಿ ಅವರ ಸಲಹೆ ಕೇಳಿದ್ದರು. ಅದಕ್ಕೆ ಸಿದ್ಧರಾಮ ಸ್ವಾಮೀಜಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಅವರ ಸಲಹೆಯಂತೆ ಸಿದ್ಧರಾಮ ಸ್ವಾಮೀಜಿಯವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಲಾಯಿತು. 1989ರಲ್ಲಿ ಪಟ್ಟ ಕಟ್ಟಲಾಯಿತು. 1994ರಲ್ಲಿ ಶಿವಬಸವ ಸ್ವಾಮೀಜಿ ಅವರ ಲಿಂಗೈಕ್ಯದ ನಂತರ ಪೀಠಾಧಿಪತಿಯಾದರು.
ಅಂದಿನಿಂದ ಇಂದಿನವರೆಗೆ ಮಠದ ಎಲ್ಲ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಎಂಜಿನಿಯರಿಂಗ್ ಕಾಲೇಜಿನವರೆಗೆ ಕಾಲೇಜುಗಳನ್ನು ಕಟ್ಟಿದ್ದಾರೆ. ಬಿ.ಇಡ್, ಐ.ಟಿ.ಐ ಸೇರಿದಂತೆ ಒಟ್ಟು 30 ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ವಚನ ಸಾಹಿತ್ಯಕ್ಕೆ ಕೊಡುಗೆ:
ವಚನ ಸಾಹಿತ್ಯಕ್ಕೆ ಪುನಶ್ಚೇತನ ನೀಡಲು ಬೆಳಗಾವಿಯ ರುದ್ರಾಕ್ಷಿ ಮಠದಲ್ಲಿ ವಚನ ಅಧ್ಯಯನ ಕೇಂದ್ರ ಸ್ಥಾಪಿಸಿದರು. ಪ್ರಾಚೀನ ಕಾಲದ ಹಸ್ತಪ್ರತಿಗಳು ಹಾಗೂ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ನೂರಾರು ಗ್ರಂಥಗಳನ್ನು ಸಂಗ್ರಹಿಸಿದ್ದಾರೆ. ಲಿಂಗಾಯತ ಅಧ್ಯಯನ ಅಕಾಡೆಮಿ, ಸಿದ್ಧರಾಮೇಶ್ವರ ಮಾರ್ಗದರ್ಶಿ, ಲಿಂಗಾಯತ ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಇಲ್ಲಿ 16,000ಕ್ಕೂ ಹೆಚ್ಚು ಗ್ರಂಥಗಳನ್ನು ಸಂಗ್ರಹಿಸಿದ್ದಾರೆ.
ಸ್ವಾಮೀಜಿಯವರು ಸ್ವತಃ ಹಲವು ಕೃತಿಗಳನ್ನು ರಚಿಸಿದ್ದಾರೆ. ವಚನಾರ್ಥ ಚಿಂತನ, ಭಕ್ತಿ ದರ್ಶನ, ಇಷ್ಟಲಿಂಗ ಪೂಜಾವಿಧಾನ, ಚಿಂತನ, ಇಸ್ಲಾಂ ಧರ್ಮ ಸಂದೇಶ ಹಾಗೂ ಧರ್ಮ ಜ್ಯೋತಿ ಪ್ರಮುಖವಾದವು. ‘ಲಿಂಗಾಯತ ದರ್ಶನ’ ಮಾಸ ಪತ್ರಿಕೆಯನ್ನು 2006ರಿಂದ ಹೊರತರುತ್ತಿದ್ದಾರೆ. ಸ್ವಾಮೀಜಿಯವರ ಸೇವಾ ಕಾರ್ಯಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ, ಗೌರವಿಸಿದೆ.
ಅಕ್ಷರ ದಾಸೋಹ:
ಸಿದ್ದರಾಮ ಸ್ವಾಮೀಜಿಯವರು ಶಿಕ್ಷಣ ಕ್ರಾಂತಿಯ ಜೊತೆ ಅನ್ನದಾಸೋಹಕ್ಕೂ ಮಹತ್ವ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಪ್ರಮುಖ ಸಮ್ಮೇಳನಗಳಲ್ಲಿ ದಾಸೋಹ ಏರ್ಪಡಿಸಿದ್ದಾರೆ. 2003ರಲ್ಲಿ ನಡೆದ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಜನರಿಗೆ ಅನ್ನದಾಸೋಹ ಏರ್ಪಡಿಸಿದ್ದರು.
ಹೋರಾಟಗಳಲ್ಲಿ ಮುಂಚೂಣಿ:
ಗಡಿ ನಾಡು ಬೆಳಗಾವಿಯಲ್ಲಿ ನಡೆಯುತ್ತಿದ್ದ ಕನ್ನಡದ ಚಟುವಟಿಕೆಗಳಿಗೆ ಸ್ವಾಮೀಜಿ ಸಾಕಷ್ಟು ಬೆಂಬಲ ನೀಡುತ್ತಿದ್ದರು. ಹಲವು ಕನ್ನಡ ಕೃತಿಗಳನ್ನು ಮುದ್ರಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟದ ನೇತೃತ್ವವನ್ನು ವಹಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.