ADVERTISEMENT

ಹೊಸ ಮುಖ್ಯಮಂತ್ರಿ ಕುರಿತ ನಳಿನ್‌ ಕುಮಾರ್ ಕಟೀಲ್‌ ಆಡಿಯೊ ‘ನಕಲಿ’?

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 20:50 IST
Last Updated 18 ಜುಲೈ 2021, 20:50 IST
ನಳಿನ್‌ ಕುಮಾರ್ ಕಟೀಲ್‌
ನಳಿನ್‌ ಕುಮಾರ್ ಕಟೀಲ್‌   

ಬೆಂಗಳೂರು: ‘ರಾಜ್ಯದ ಹೊಸ ಮುಖ್ಯಮಂತ್ರಿಯಾಗುವವರು ದೆಹಲಿಯಿಂದ ಬರಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ ಎನ್ನಲಾದ ಆಡಿಯೊ ರಾಜಕೀಯ ಸಂಚಲನ ಮೂಡಿಸಿದ ಬೆನ್ನಲ್ಲೇ, ‘ಈ ಆಡಿಯೊ ನಕಲಿ’ ಎಂದು ಕಟೀಲ್ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುನ್ನೆಲೆ ಬಂದಿತ್ತಲ್ಲದೇ, ಅವರು ರಾಜೀನಾಮೆ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ‘ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚನೆ ನೀಡಿರುವ ಅಮಿತ್ ಶಾ, ಪಕ್ಷ ಬಲವರ್ಧನೆ ಮಾಡುವಂತೆಯೂ ತಿಳಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವೆಲ್ಲ ವದಂತಿ’ ಎಂದು ಯಡಿಯೂರಪ್ಪ ಶನಿವಾರ ಪ್ರತಿಪಾದಿಸಿದ್ದರು.

ADVERTISEMENT

ಈ ಬೆಳವಣಿಗೆ ಮಧ್ಯೆಯೇ ಭಾನುವಾರ ರಾತ್ರಿ 9.15ರ ಸುಮಾರಿಗೆ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಕಟೀಲ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಂಭಾಷಣೆ ತುಳುವಿನಲ್ಲಿದೆ. ‘ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲ, ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಸೇರಿ ಹಲವು ಹಿರಿಯರನ್ನು ಕೈಬಿಟ್ಟು ಹೊಸ ತಂಡವನ್ನೇ ಕಟ್ಟುವ ಸ್ಪಷ್ಟ ಸೂಚನೆ ನೀಡಿದ್ದಾರೆ’ ಎಂಬ ಮಾತುಗಳೂ ಇದ್ದವು.

‘ಆಡಿಯೋ ನಕಲಿಯಾಗಿದ್ದು, ಇದರ ಮೂಲಕ ಕಳಂಕ ತರುವ ಕೆಲಸ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಡಿಯೋ ಹರಿದಾಡಿದ 2 ಗಂಟೆ ಬಳಿಕ ರಾತ್ರಿ 11.20 ಕ್ಕೆ ಕಟೀಲ್‌ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಧ್ವನಿಯನ್ನು ಅನುಕರಿಸಿ ಪಕ್ಷಕ್ಕೆ ಧಕ್ಕೆ ತರುವ ಮಾದರಿಯಲ್ಲಿ ನಕಲಿ ಆಡಿಯೊವನ್ನುಯಾರೋ ಕಿಡಿಗೇಡಿಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿ ಬಿಟ್ಟಿದ್ದು, ಇದರ ಸತ್ಯಾಸತ್ಯತೆ ತನಿಖೆ ಆಗಬೇಕು. ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಆಡಿಯೊ ಹರಿಬಿಡಲಾಗಿದೆ. ಕಿಡಿಗೇಡಿಗಳನ್ನು ಪತ್ತೆ ಮಾಡಬೇಕು’ ಎಂದು ಯಡಿಯೂರಪ್ಪ ಅವರಲ್ಲಿ ಕಟೀಲ್‌ ಮನವಿ ಮಾಡಿದ್ದಾರೆ.

ಆಡಿಯೊ ಸಂಭಾಷಣೆ

ನಳಿನ್‌: ಯಾರಿಗೂ ಹೇಳಲು ಹೋಗಬೇಡಿ.

ಈಶ್ವರಪ್ಪ, ಜಗದೀಶ ಶೆಟ್ಟರ್‌.... ಆ ತಂಡವನ್ನೇ ತೆಗೆಯುತ್ತೇವೆ.

ಎಲ್ಲ ಹೊಸ ತಂಡ ಮಾಡುತ್ತಿದ್ದೇವೆ. ಹೇಳಲು ಹೋಗಬೇಡಿ. ಈಗ ಸದ್ಯಕ್ಕೆ ಯಾರಿಗೂ ಕೊಡಬೇಡಿ ಅಂದಿದ್ದಾರೆ...

(ನಗು)..

ಇಲ್ಲ. ಯಾರಿಗೂ ಹೇಳಬೇಡಿ. ಬೇಡ. ಹೂಂ... ಏನೂ ತೊಂದರೆ ಇಲ್ಲ.

ಯಾರಿಗೂ ಹೆದರಬೇಡಿ. ಯಾರಾದರೂ ಸರಿ ಇನ್ನು ನಮ್ಮ ಕೈಯಲ್ಲೇ ಎಲ್ಲ. ಮೂರು ಹೆಸರುಗಳು ಇವೆ. ಅದರಲ್ಲಿ ಯಾವುದಾದರೂ ಆಗುವ ಸಾಧ್ಯತೆಗಳಿವೆ.

ಇಲ್ಲ.. ಇಲ್ಲ. ಇಲ್ಲಿಂದ ಯಾರನ್ನೂ ಮಾಡುವುದಿಲ್ಲ. ದೆಹಲಿಯಿಂದಲೇ ಹಾಕುತ್ತಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.