ನಾಪೋಕ್ಲು: ನಾಲ್ನಾಡ್ ಕೊಡವ ಕಪ್ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಕಲಿಯಂಡ, ಅರೆಯಡ, ಅಂಜಪರವಂಡ, ಕುಲ್ಲೇಟಿರ ತಂಡಗಳು ಗೆಲುವು ಸಾಧಿಸಿ ಸೆಮಿ ಫೈನಲ್ಸ್ ಪ್ರವೇಶಿಸಿವೆ.
ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಕಲಿಯಂಡ ತಂಡವು ಕಂಗಂಡ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.
ತಂಡದ ಪರವಾಗಿ ಆಟಗಾರ ಕಲಿಯಂಡ ಭರತ್ ಕೆ.ಕೆ. 2 ಗೋಲು ಗಳಿಸಿದರೆ ಕಲಿಯಂಡ ಕಾರ್ಯಪ್ಪ 1 ಗೋಲು ಗಳಿಸಿದರು. ಅರೆಯಡ ಮತ್ತು ಕುಂಡ್ಯೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಅರೆಯಡ ತಂಡವು 4-1 ಅಂತರದ ಗೆಲುವು ಸಾಧಿಸಿತು.
ಅರೆಯಡ ತಂಡದ ಪರವಾಗಿ ಆಟಗಾರ ಅರೆಯಡ ಚೆಂಗಪ್ಪ ಮತ್ತು ಅರೆಯಡ ಬೆಳ್ಯಪ್ಪ ತಲಾ 2ಗೋಲು ಗಳಿಸಿದರೆ ಕುಂಡ್ಯೋಳಂಡ ತಂಡದ ಡಿಪಿನ್ 1 ಗೋಲು ಗಳಿಸಿದರು. ಅಂಜಪರವಂಡ ಮತ್ತು ಶಿವಚಾಳಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂಜಪರವಂಡ ತಂಡ 3 ಗೋಲು ಗಳಿಸಿ ಜಯ ಸಾಧಿಸಿತು. ತಂಡದ ಆಟಗಾರರಾದ ಜತಿನ್ ಬೋಪಣ್ಣ ಮತ್ತು ಚಿರಾಗ್ ತಲಾ 1 ಗೋಲು ಗಳಿಸಿದರು.
ಕುಲ್ಲೇಟಿರ ಮತ್ತು ಮುಕ್ಕಾಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ ತಂಡವು 5 ಗೋಲು ದಾಖಲಿಸಿ ಭರ್ಜರಿ ಗೆಲುವು ಸಾಧಿಸಿತು. ಆಟಗಾರರಾದ ಶುಭಂ ಚಿಣ್ಣಪ್ಪ 2 ನಿಶಾಲ್ ನಾಚಪ್ಪ 2 ಹಾಗೂ ಯಶಿಕ್ ಮುತ್ತಣ್ಣ 1 ಗೋಲು ಗಳಿಸಿದರು.
ಟೂರ್ನಿಯಲ್ಲಿ ತೀರ್ಪುಗಾರರಾಗಿ ಚಂದಪಂಡ ಆಕಾಶ್, ಬೊಳ್ಳಚಂಡ ನಾಣಯ್ಯ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕೋಡಿಮಣಿಯಂಡ ಗಣಪತಿ, ಚೆಯ್ಯಂಡ ಲವ ಚೋಯಮಾಡಂಡ ಚೆಂಗಪ್ಪ, ಬಡಕ್ಕಡ ದೀನಾಪೂವಯ್ಯ, ಸಣ್ಣುವಂಡ ಲೋಕೇಶ್ ಕಾರ್ಯನಿರ್ವಹಿಸಿದರು. ತಾಂತ್ರಿಕ ನಿರ್ದೇಶಕರಾಗಿ ಅಂಜಪರವಂಡ ಕುಶಾಲಪ್ಪ ಕಾರ್ಯನಿರ್ವಹಿಸಿದರೆ ವೀಕ್ಷಕ ವಿವರಣೆಯನ್ನು ಕುಲ್ಲೇಟಿರ ಅರುಣ್ ಬೇಬ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.