ADVERTISEMENT

ನ.21,22ಕ್ಕೆ ‘ನಮ್ಮ ಭೂಮಿ ನಮ್ಮ ಹಕ್ಕು’ ಬಿಜೆಪಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:18 IST
Last Updated 19 ನವೆಂಬರ್ 2024, 15:18 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ಕೃಷಿ ಭೂಮಿ, ಮಠ, ದೇವಸ್ಥಾನಗಳ ಜಮೀನುಗಳ ಸ್ವಾದೀನಕ್ಕೆ ವಕ್ಫ್‌ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಹೆಸರಿನಲ್ಲಿ ಇದೇ 21 ಮತ್ತು 22ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳು ಮತ್ತು ತಹಶೀಲ್ದಾರ್‌ಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಪ್ರತಿಭಟನೆಯ ಜತೆಗೆ  ಸಂತ್ರಸ್ತರಿಂದ ಅರ್ಜಿಗಳ ಸ್ವೀಕಾರ, ವಕ್ಫ್‌ ಅಧಿಕಾರ ದುರ್ಬಳಕೆಯಿಂದ ಸಮಸ್ಯೆ– ಶೋಷಣೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಈ ಜನಾಂದೋಲನ ನಡೆಸಲು ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದೆ. ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧಪಕ್ಷದ ನಾಯಕ ಆರ್‌.ಅಶೋಕ ಮತ್ತು ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಂಡಗಳ ನೇತೃತ್ವ ವಹಿಸಲಿದ್ದಾರೆ.

ADVERTISEMENT

‘ಈ ತಂಡಗಳು ಡಿಸೆಂಬರ್‌ ಮೊದಲನೇ ವಾರದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಲಿವೆ. ರೈತರು, ಮಠಾಧೀಶರು ಸೇರಿ ತೊಂದರೆಗೆ ಒಳಗಾದವರಿಂದ ಮಾಹಿತಿ ಪಡೆಯಲಿವೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಜನರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ. ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತೊಂದರೆಗೆ ಒಳಗಾದವರಿಂದ ಅಹವಾಲು ಮತ್ತು ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ರೈತರು, ವಕೀಲರು ಸೇರಿ ಪ್ರಮುಖರನ್ನು ಒಳಗೊಂಡ ಐದು ಜನರ ತಂಡ ರಚಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

ಬಿಜೆಪಿ ಹೋರಾಟದಿಂದ ರಾಜ್ಯ ಸರ್ಕಾರವು ನೋಟಿಸ್‌ ಹಿಂದಕ್ಕೆ ಪಡೆಯಲು ಸೂಚನೆ ನೀಡಿದೆ. ಪಹಣಿಯಲ್ಲಿ ವಕ್ಫ್‌ ಹೆಸರು ಇದ್ದರೆ ಅದನ್ನೂ ತೆಗೆದುಹಾಕಬೇಕು. 1974ರ ಗೆಜೆಟ್‌ ಅಧಿಸೂಚನೆ ಹಿಂದಕ್ಕೆ ಪಡೆಯಬೇಕು ಎಂದು ಅವರು ಹೇಳಿದರು.

ವಕ್ಫ್‌ ಮೂಲಕ ಆಸ್ತಿ ವಶಪಡಿಸಿಕೊಳ್ಳುವ ವಿಚಾರದಲ್ಲಿ ಜನಜಾಗೃತಿ ಆಗಿದೆ. ವಕ್ಫ್‌  ಮತ್ತು ಕಾಂಗ್ರೆಸ್‌ ಸರ್ಕಾರದ ಅಧಿಕಾರ ದುರ್ಬಳಕೆ, ಜಮೀರ್‌ ಅಹಮ್ಮದ್‌ ಖಾನ್ ಅವರು ಮುಖ್ಯಮಂತ್ರಿಯವರ ಆದೇಶ ಎಂದು ತಿಳಿಸಿ ತ್ವರಿತವಾಗಿ ಕಲಂ 9 ಮತ್ತು 11ರಲ್ಲಿ ಇಂಡೀಕರಣ, ಆಸ್ತಿ ಬದಲಾವಣೆ ಪ್ರಯತ್ನ ಮಾಡಿದ್ದರು ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಮತ್ತು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.