ಬೆಂಗಳೂರು: ನ್ಯಾನೊ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳು ರಾಜ್ಯದಲ್ಲಿ ಉದ್ದಿಮೆಗಳನ್ನು ಆರಂಭಿಸುವಂತೆ ಆಹ್ವಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಜೆಎನ್‌ಸಿಎಎಸ್‌ಆರ್ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 13ನೇ ಬೆಂಗಳೂರು ನ್ಯಾನೊ ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಕ್ಷೇತ್ರದ ತಜ್ಞರ ಸಹಕಾರ ಮತ್ತು ಸಹಭಾಗಿತ್ವದ ಸದುಪಯೋಗ ಪಡೆದು ಯುವ ಉದ್ಯಮಿಗಳು ರಾಜ್ಯದಲ್ಲಿ ಹೊಸ ಉದ್ದಿಮೆಗಳನ್ನು ಆರಂಭಿಸಬೇಕು. ಈ ಉದ್ಯಮದ ಬೆಳವಣಿಗೆಗೆ ಕರ್ನಾಟಕವನ್ನು ಅನುಕೂಲಕರ ಪರಿಸರ ವ್ಯವಸ್ಥೆಯನ್ನಾಗಿ ಮಾಡಲು ಉದಯೋನ್ಮುಖ ಉದ್ಯಮಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
‘ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಜವಾಹರ ಲಾಲ್ ನೆಹರೂ ಉನ್ನತ ವಿಜ್ಞಾನ ಸಂಶೋಧನಾ ಸಂಸ್ಥೆ (ಜೆಎನ್‌ಸಿಎಎಸ್‌ಆರ್), ರಾಷ್ಟ್ರೀಯ ಜೀವ ವಿಜ್ಞಾನಗಳ ಸಂಸ್ಥೆ (ಎನ್‌ಸಿಬಿಎಸ್), ನ್ಯಾನೊ ಮತ್ತು ಸಾಫ್ಟ್ ಮ್ಯಾಟರ್ ವಿಜ್ಞಾನ ಕೇಂದ್ರದಂತಹ (ಸಿಇಎನ್‌ಎಸ್) ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ ದೇಶದ ನ್ಯಾನೊ ಟೆಕ್ ಹಬ್ ಆಗಿ ಬೆಂಗಳೂರು ರೂಪುಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳಿಗೆ ನ್ಯಾನೊ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬೆಂಗಳೂರು ಇಂಡಿಯಾ ನ್ಯಾನೊ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ‘ ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ'ವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು. ತಂತ್ರಜ್ಞಾನ ಮನುಷ್ಯನ ಭವಿಷ್ಯದ ಬದುಕಿಗೆ ಪೂರಕವಾಗಿ ಇರಬೇಕು. ನ್ಯಾನೊ ಮತ್ತು ಕ್ವಾಂಟಮ್ ತಂತ್ರಜ್ಞಾನದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಕೋರಿದರು.
‘ಕಸ ಸಂಸ್ಕರಣೆಗೆ ನ್ಯಾನೊ ತಂತ್ರಜ್ಞಾನ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಅಷ್ಟೊಂದು ಯಶಸ್ವಿ ಕಂಡಿಲ್ಲ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿದೆ’ ಎಂದರು.
ವಿಜ್ಞಾನಿ ಸಿ.ಎನ್. ಆರ್. ರಾವ್ ಅವರನ್ನು ಸನ್ಮಾನಿಸಲಾಯಿತು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಶಾಸಕ ರಿಜ್ವಾನ್ ಅರ್ಷದ್, ನ್ಯಾನೊ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ.ನವಕಾಂತ ಭಟ್, ಐಐಎಸ್‌ಸಿ ಪ್ರಾಧ್ಯಾಪಕ ಪಿ.ಎಸ್.ಅನಿಲ್ ಕುಮಾರ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಪವನ್ ಕುಮಾರ್ ಮಾಲಪಾಟಿ ಉಪಸ್ಥಿತರಿದ್ದರು.
ಕೀಟ ಹಾವಳಿ ತಡೆಗೆ ಮಾತ್ರೆ
ಕೀಟ ಹಾವಳಿ ತಡೆಗೆ ಮಾತ್ರೆ ವಿದ್ಯುತ್ ಕಡಿಮೆ ಮಾಡುವ ‘ಪವರ್ ಸೇವರ್’ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ‘ಒನ್ ಡ್ರಾಪ್’...
ಇವು ನ್ಯಾನೋ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆದವು. ಈ ಕ್ಷೇತ್ರದಲ್ಲಿ ಕೈಗೊಂಡಿರುವ ಇತ್ತೀಚಿನ ಆವಿಷ್ಕಾರಗಳು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಯಿತು.
‘ಕೀಟಗಳ ಹಾವಳಿಯಿಂದಾಗಿ ತರಕಾರಿ ತೆಂಗು ಹಾಗೂ ಅಡಿಕೆ ಬೆಳೆಗಳಲ್ಲಿ ಶೇಕಡ 50 ರಷ್ಟು ಇಳುವರಿ ಕುಂಠಿತವಾಗುತ್ತಿದೆ. ಹಾಗಾಗಿ ಕೀಟಗಳ ತಡೆಗೆ ಔಷಧ ಕಂಡು ಹಿಡಿದಿದ್ದು ಮಾತ್ರೆ ರೂಪದಲ್ಲಿದೆ. ಉದಾಹರಣೆಗೆ ಒಂದು ಎಕರೆ ಜಮೀನಿಗೆ ಎರಡು ಬಕೆಟ್ ನೀರಿನಲ್ಲಿ 'mantra' ಹೆಸರಿನ ಮಾತ್ರೆಯನ್ನು ಹಾಕಿದರೆ ಯಾವುದೇ ಕೀಟಗಳು ಸುಳಿಯುವುದಿಲ್ಲ’ ಎಂದು ಕಂಪನಿಯ ಪ್ರತಿನಿಧಿ ವಿನಯ್ ತಿಳಿಸಿದರು.
‘ತೆಂಗು ಅಡಿಕೆ ಬಾಳೆ ತೋಟಗಳು ತರಕಾರಿ ಹೊಲಕ್ಕೂ ಔಷಧ ಬಳಸಬಹುದು. ಔಷಧವನ್ನು ರೈತರು ಆನ್‌ಲೈನ್ ಮೂಲಕ ಖರೀದಿಸಬಹುದು. ಹತ್ತು ಮಾತ್ರೆಗಳಿಗೆ ₹ 999 ವೆಚ್ಚವಾಗಲಿದೆ’ ಎಂದು ವಿವರಿಸಿದರು.
ವಿದ್ಯುತ್ ಉಳಿತಾಯಕ್ಕಾಗಿ ‘ಪವರ್ ಸೇವರ್’ ಎಂಬ ಎಲೆಕ್ಟ್ರಾನಿಕ್ ಉಪಕರಣವನ್ನು ಬಿಡುಗಡೆ ಮಾಡಲಾಗಿದೆ. ಕೆಲಸಕ್ಕೆ ಹೋಗುವ ಧಾವಂತದಲ್ಲಿ ಹಲವರು ಫ್ಯಾನ್ ಗೀಸರ್ ಬಲ್ಬ್‌ಗಳನ್ನು ಬಂದ್ ಮಾಡುವುದಿಲ್ಲ. ಇದರಿಂದ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಈ ಉಪಕರಣ ಬಳಕೆ ಮಾಡಿದರೆ ವಿದ್ಯುತ್ ಉಳಿಸಬಹುದು ಎಂದು ಕಂಪನಿಯ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದರು.
ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಗಿಡಮೂಲಿಕೆ ಹಾಗೂ ಸಂಬಾರ ಪದಾರ್ಥ ಬಳಸಿ ಡರ್ಮರಿಕ್ ನ್ಯಾಚುರಸಿಟಿಕಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ‘ಒನ್ ಡ್ರಾಪ್’ ಹೆಸರಿನ ಔಷಧವನ್ನು ಪರಿಚಯಿಸಿದೆ. ಕಾಫಿ ಟೀ ಹಾಲು ಅಥವಾ ಹಣ್ಣಿನ ರಸದ ಜತೆಗೆ 10 ಮಿ.ಲೀ. ಔಷಧ ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎನ್ನುತ್ತಾರೆ ಕಂಪನಿ ಸಿಬ್ಬಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.