ಬೆಂಗಳೂರು: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
‘ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಸೇವೆಗಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಇತರರ ಒಳಿತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದರು. ಅವರ ಜ್ಞಾನೋತ್ಸಾಹಕ್ಕಾಗಿ ಅವರು ಗೌರವ ಗಳಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಅಸಂಖ್ಯಾತ ಭಕ್ತರೊಂದಿಗೆ ನನ್ನ ಸಂವೇದನೆ ಇದೆ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ.
‘ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಯವರು ಲಿಂಗೈಕ್ಯರಾದ ಸುದ್ದಿಯು ಅತ್ಯಂತ ದುಃಖದಾಯಕವಾಗಿದೆ. ಜನರ ಆಸ್ತಿಕ ಭಾವನೆಗಳು ಮೌಢ್ಯಗಳತ್ತ ಜಾರದಂತೆ ಆಧ್ಯಾತ್ಮಿಕ ಅಂತಃಶಕ್ತಿ ತುಂಬಿ, ಸನ್ಮಾರ್ಗ ತೋರುತ್ತಾ, ಸಾಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಸದಾ ಲೋಕದ ಹಿತ ಬಯಸುತ್ತಿದ್ದ ಶ್ರೀಗಳನ್ನ ಕಳೆದುಕೊಂಡ ನಾಡು ಬಡವಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
‘ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ, ಧೀಮಂತ ಪರಮಾರ್ಥ ಜ್ಞಾನದ ಜ್ಞಾನ ಯೋಗಿ, ಸಂಸ್ಕೃತ ವಾಂಜ್ಮಯದ ಪ್ರಭುದ್ಧ, ವೇದೋಪನಿಷತ್ತುಗಳ ಭಂಡಾರ, ನಡೆದಾಡುವ ದೇವರೆಂದೇ ಮನೆ ಮಾತಾಗಿದ್ದ, ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಸುದ್ದಿ ತೀವ್ರ ದುಃಖ ತಂದಿದೆ. ಅವರ ಭಕ್ತವೃಂದದ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುನ್ನತ ಗೌರವವಾಗಿದೆ.
ಅವರ ಅಗಲಿಕೆಯ ದುಃಖವನ್ನು ತಡೆಯುವ ಶಕ್ತಿ ಪರಮಾತ್ಮ ಅವರೆಲ್ಲ ಭಕ್ತರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪರಮಾತ್ಮನಲ್ಲಿ ಲೀನವಾದ ಆ ಪುಣ್ಯಾತ್ಮದ ಆಶೀರ್ವಾದಗಳು ನಮ್ಮ ಮೇಲಿರಲಿ. ಓಂ ಶಾಂತಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
‘ದೇಶ ಕಂಡ ಶ್ರೇಷ್ಟ ಸಂತರು,ಆಧ್ಯಾತ್ಮಿಕ ಪ್ರವಚನಕಾರ, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿರವರು ಲಿಂಗೈಕ್ಯರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟುಮಾಡಿದೆ. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಭಕ್ತ ಸಮೂಹಕ್ಕೆ ಈ ದುಃಖ ತಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.