ಬೆಂಗಳೂರು: ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ಈಚೆಗೆ ಹೊಸರೂಪದಲ್ಲಿ ಮತ್ತೆ ತೆರೆಕಂಡಿತು. ಈ ಸಂದರ್ಭ ಚಿತ್ರೀಕರಣದ ನೆನಪೊಂದನ್ನು ನಟ ಲೋಕನಾಥ್ ಹಂಚಿಕೊಂಡ ಬಗೆ ಇದು...
‘ನಾಗರಹಾವು’ ಅಂದಾಗ ನನಗೆ ನನ್ನ ಬದುಕಿನಲ್ಲಿ ನಡೆದ ಕೆಲವು ಘಟನೆಗಳು ಪಕ್ಕನೆ ನೆನಪಾಗುತ್ತವೆ. ಆ ಚಿತ್ರ ಮಾಡುವಾಗ ನಾನೊಂದು ಫ್ಯಾಕ್ಟರಿ ನಡೆಸುತ್ತಿದ್ದೆ. ನಾಲ್ಕೈದು ದಿನಗಳ ಶೂಟಿಂಗ್ ಮುಗಿಸಿಕೊಂಡು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದೆ. ಆದರೆ ನನ್ನ ಹಿಂದೆಯೇ ಮತ್ತೊಂದು ಕಾರು ಬಂತು. ‘ನಿರ್ದೇಶಕರು ಯಾವ್ದೋ ಒಂದು ಶಾಟ್ ತೆಗೆಯಲು ಮರ್ತಿದಾರೆ. ಹಾಗಾಗಿ ಮತ್ತೆ ಬರಬೇಕಂತೆ’ ಎಂದರು. ‘ಈಗಾಗಲೇ ನಾಲ್ಕೈದು ದಿನ ಫ್ಯಾಕ್ಟರಿ ಬಿಟ್ಟು ಇದ್ದೇನೆ. ಮತ್ತೆ ಹೇಗೆ ಬರುವುದು’ ಎಂದು ಕೇಳಿದೆ. ‘ಬರ್ಲೇ ಬೇಕಂತೆ. ಬಹಳ ಮುಖ್ಯವಾದ ದೃಶ್ಯವಂತೆ ಅದು. ಸಂಜೆಯೇ ತಿರುಗಿ ಕಳಿಸಿಕೊಟ್ಟುಬಿಡ್ತಾರಂತೆ’ ಎಂದು ಒತ್ತಾಯಿಸಿದರು.
ಇನ್ಮೇನ್ಮಾಡೋದು? ಮತ್ತೆ ಹೊರಟು ಮಧ್ಯಾಹ್ನ ಎರಡು ಗಂಟೆಯಷ್ಟೊತ್ತಿಗೆ ಚಿತ್ರದುರ್ಗಕ್ಕೆ ಹೋದೆ. ಮೂರು ಗಂಟೆ ಆಯ್ತು, ನಾಲ್ಕಾಯ್ತು, ಐದು ಗಂಟೆ ಆಯ್ತು... ರಾತ್ರಿ ಎಂಟು ಗಂಟೆಗೆ ಒಂದು ಶಾಟ್ ತೆಗೆದರು. ನನ್ನನ್ನು ಕಂಬಕ್ಕೆ ಕಟ್ಟಿ ಬಟ್ಟೆ ಬಿಚ್ಚಿ ಹೊಡೆಯುವ ದೃಶ್ಯ ಇದೆಯಲ್ಲ, ಅದೇ ದೃಶ್ಯ ಆಗ ಶೂಟ್ ಮಾಡಿದ್ದು. ಶಾಟ್ ಮುಗಿದಾಗ ರಾತ್ರಿ ಎರಡು ಗಂಟೆ. ‘ಮನೆಗೆ ಕಳಿಸಿಕೊಡಿ’ ಎಂದೆ. ‘ಸರ್, ನಿಮ್ಮನ್ನು ಕರ್ಕೊಂಡು ಬಂದ ಡ್ರೈವರ್ ಚೆನ್ನಾಗಿ ಮೊಸರು ತಿಂದು ಮಲ್ಕೊಂಬಿಟ್ಟಿದಾನೆ. ಬೆಳಿಗ್ಗೆ ನಸುಕಿಗೆ ಕಳಿಸಿಕೊಡ್ತೀವಿ’ ಎಂದರು. ಆದರೆ ಪ್ಯಾಕ್ಟರಿ ಬೀಗದ ಕೈ ನನ್ನ ಬಳಿಯೇ ಇದೆ. ಏನ್ಮಾಡೋದು? ಕೆಲಸದ ಹುಡುಗರು ನಾಲ್ಕೂವರೆ ಐದು ಗಂಟೆಗೆ ಬಂದುಬಿಡ್ತಾರೆ. ‘ನಾನು ಹೇಗಾದ್ರೂ ಹೋಗ್ಲೇಬೇಕು. ಮುಖ್ಯರಸ್ತೆ ಹತ್ರ ಬಿಡಿ ಯಾವ್ದಾದ್ರೂ ಗಾಡಿ ಹತ್ಕೊಂಡುಹೋಗ್ತೀನಿ’ ಅಂದೆ.
ಮುಖ್ಯರಸ್ತೆಗೆ ತಂದು ಯಾವ್ದೋ ವ್ಯಾನ್ ಹತ್ತಿಸಿ ಕಳಿಸಿದರು. ಒಳಗಡೆ ಏಳೆಂಟು ಜನ ಕಳ್ಳು ಕುಡಿದುಕೊಂಡು, ಬೀಡಿ ಸಿಗರೇಟು ಸೇದುತ್ತ ಕೂತಿದ್ದರು... ಕೂತುಕೊಳ್ಳಲಿಕ್ಕೇ ಸಾಧ್ಯವಿಲ್ಲ. ಮೂಗು ಒತ್ತಿಕೊಂಡು ಕೂತೆ. ನಾಲ್ಕಗಂಟೆಯಷ್ಟೊತ್ತಿಗೆ ತುಮಕೂರು ಬಸ್‌ಸ್ಟ್ಯಾಂಡ್ ಇದ್ಯಲ್ಲ, ಅಲ್ಲಿ ಬಂದು ಗಾಡಿ ನಿಲ್ಲಿಸಿದರು. ನಾನೂ ಇಳಿದೆ. ನನ್ನ ನೋಡಿದ ಡ್ರೈವರ್ ನನ್ನ ಗುರ್ತು ಹಿಡಿದು, ‘ಏನಣ್ಣಾ ನೀವಿಲ್ಲಿದ್ದೀರಾ? ಮುಂದುಗಡೆ ಕೂತುಕೊಳ್ಳಿ’ ಎಂದ. ‘ಸದ್ಯ ಇಲ್ಲಿ ಗಾಳಿ ಸೇವಿಸ್ತಾ ಇರ್ತೀನಿ. ನೀನು ಹೋಗು ಟೀ ಕುಡ್ಕೊಂಡು ಬಾ, ಕಾಯ್ತಿರ್ತೀನಿ’ ಎಂದೆ. ಸಾಮಾನ್ಯವಾಗಿ ತುಮಕೂರಿನಲ್ಲಿ ಬೆಳಿಗ್ಗೆ ನಾಲ್ಕು ಗಂಟೆಯಷ್ಟೊತ್ತಿಗೆ ಯಾವ ಬಸ್ಸುಗಳೂ ಬಸ್‌ಸ್ಟ್ಯಾಂಡ್ ಹೋಟೆಲ್ ಹತ್ತಿರ ಬರುವುದಿಲ್ಲ. ಅವತ್ತು ಯಾವ್ದೋ ಬಸ್ ಬಂತು. ‘ಯಾರ್ರೀ.. ಬೆಂಗಳೂರು’ ಎಂದು ಕೂಗುತ್ತಿದ್ದುದನ್ನು ನೋಡಿ, ಹೇಳದೆ ಕೇಳದೆ ಬಸ್ ಹತ್ತಿಬಿಟ್ಟೆ.
ಬೆಂಗಳೂರು ಸೇರಿಕೊಂಡೆ, ಫ್ಯಾಕ್ಟರಿ ಹೊಸ್ತಿಲಲ್ಲಿ ಹುಡುಗರು ಕಾಯ್ತಿದ್ರು. ಬೀಗ ತೆಗೆದುಕೊಟ್ಟೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಮನೆಗೆ ಹೋದೆ. ಅಷ್ಟರಲ್ಲಾಗಲೇ ಮನೆಗೆ ಎರಡು ಮೂರು ಸಲ ಫೋನ್ ಬಂದುಹೋಗಿದೆ. ‘ಲೋಕನಾಥ್ ಬಂದ್ರಾ’ ಎಂದು ಕೇಳಿದ್ದಾರೆ. ಮನೆಯಲ್ಲಿ ‘ಇಲ್ಲ ಇನ್ನೂ ಬಂದಿಲ್ಲ’ ಎಂದು ಹೇಳಿದ್ದಾರೆ. ನಾನು ಮನೆಗೆ ಹೋದ ತಕ್ಷಣ ಪೋನ್ ಬಂದ ಸುದ್ದಿ ಹೇಳಿದರು. ‘ಸುಮ್ನಿರಮ್ಮಾ, ನಿನ್ನೆ ಬಂದ ಹಾಗೆಯೇ ಮತ್ತೆ ಕರೆದುಕೊಂಡು ಹೋದರು. ಈಗ ಮತ್ತೆ ಕರೀತಾರೋ ಏನೋ.. ನಾನು ಆಮೇಲೆ ವೀರಾಸ್ವಾಮಿ ಅವರ ಆಫೀಸಿಗೇ ಹೋಗ್ತೀನಿ’ ಎಂದು ಸುಮ್ಮನಾದೆ. ಮರುದಿನ ಬೆಳಿಗ್ಗೆ ಎದ್ದು ವೀರಾಸ್ವಾಮಿ ಅವರ ಆಫೀಸಿಗೆ ಹೋದೆ. ಅವರು ಬೆಳಿಗ್ಗೆ ಒಂಬತ್ತು ಗಂಟೆಗೆಲ್ಲ ಆಫೀಸಿಗೆ ಬಂದು ಕೂತಿರುತ್ತಿದ್ದರು.
ಬಹಳ ಚಿಂತಾಕ್ರಾಂತರಾಗಿ ಕೂತಿದ್ದರು. ನಾನು ‘ಯಾಕ್ ಸಾರ್? ಏನಾಯ್ತು?’ ಎಂದು ಕೇಳಿದೆ. ಅವರು ಥಟ್ಟನೆ ತಲೆಯೆತ್ತಿ ದುರುಗುಟ್ಟಿ ನೋಡಿದರು. ಮೇಲಿಂದ ಕೆಳಗಿನವರೆಗೆ ಹತ್ತಾರು ಬಾರಿ ನೋಡಿದರು. ‘ಯಾಕ್ ಸಾರ್ ಹಾಗೆ ನೋಡ್ತಿದೀರಿ?’ ಕೇಳಿದೆ. ಮೈ ಚಿವುಟಿಕೊಂಡರು. ಅಚ್ಚರಿಯಿಂದ ‘ಏನ್ರೀ... ಬದ್ಕಿದೀರೇನ್ರೀ ನೀವು?’ ಎಂದು ಕೇಳಿದರು. ‘ಯಾಕ್ ಸಾರ್?’ ಅಂದೆ. ‘ಅಯ್ಯೋ ನೋಡಿ ಇಲ್ಲಿ’ ಎಂದು ಪೇಪರ್ ಮುಖಕ್ಕೆ ಹಿಡಿದರು. ಅದರಲ್ಲಿ ‘ವ್ಯಾನ್ ಅಪಘಾತ; ಎಂಟು ಜನರ ದುರ್ಮರಣ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು!
ಅದೃಷ್ಟ ಅಂತ ಇದಕ್ಕೆ ಹೇಳುವುದು. ಅವತ್ತು ವ್ಯಾನ್ ಬಿಟ್ಟು ಬಸ್ ಯಾಕೆ ಹತ್ತಿದೆನೋ ಗೊತ್ತಿಲ್ಲ. ಬದುಕಿಕೊಂಡೆ.
ಆ ನಂತರ ಎಲ್ಲಿ ಯಾರು ‘ನಾಗರಹಾವು’ ಎಂದರೆ ಸಾಕು, ಈ ಘಟನೆ ನೆನಪಾಗುತ್ತದೆ. ಇಂಥ ಹಲವು ಘಟನೆಗಳು ನಡೆದಿವೆ. ಇವೆಲ್ಲದಕ್ಕಿಂತ ಆ ಸಿನಿಮಾ ತುಂಬ ಚೆನ್ನಾಗಿದೆ. ಈಗ ಮತ್ತೆ ಬಿಡುಗಡೆಯಾಗುತ್ತಿದೆ. ಜನರು ನೋಡಲಿ ಎಂದು ಆಶಿಸುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.