ಬೆಂಗಳೂರು: ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೊವಿಡ್ ಪರಿಸ್ಥಿತಿ ನಿರ್ವಹಿಸಲು ಮುಂದಾಗಿರುವ ರಾಜ್ಯ ಸರ್ಕಾರ, ನ್ಯಾಸ್ಕಾಮ್ ಸಹಯೋಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಅಭಿವೃದ್ಧಿಪಡಿಸಿದ್ದು,ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಇದನ್ನು ಶನಿವಾರ ಬಿಡುಗಡೆ ಮಾಡಿದರು.
ಐಟಿ-ಬಿಟಿ ವಲಯದ ಪ್ರಮುಖರ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಆ್ಯಂಡ್ ಸರ್ವೀಸಸ್ ಕಂಪನೀಸ್ (ನ್ಯಾಸ್ಕಾಮ್) ಅಭಿವೃದ್ಧಿ ಪಡಿಸಿದ ದತ್ತಾಂಶ ವಿಶ್ಲೇಷಣೆ ಸಾಧನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕೊರೊನಾ ಸೋಂಕು ಹರಡುವ ಸಾಧ್ಯತೆ ವಿವರ, ಸೋಂಕಿನ ಮೂಲ, ಅದರ ವರ್ಗೀಕರಣ, ಸೋಂಕಿನ ಪ್ರಮಾಣ, ಅಂಕಿ ಅಂಶದ ಮಾಹಿತಿ, ಸೋಂಕು ಪತ್ತೆ ಪರೀಕ್ಷೆ ವಿವರ, ಚಿಕಿತ್ಸೆ ಹಾಗೂ ಲಭ್ಯ ಇರುವ ಮೂಲಸೌಕರ್ಯ, ಮಾನವ ಸಂಪನ್ಮೂಲದ ರಿಯಲ್ ಟೈಮ್ ಮಾಹಿತಿ ಒದಗಿಸುವ ಈ ಸಾಧನ ಕೊವಿಡ್ ನಿಯಂತ್ರಣದಲ್ಲಿ ದೊಡ್ಡ ಮಟ್ಟದ ಸುಧಾರಣೆಗೆ ನೆರವಾಗಬಲ್ಲುದು. ನ್ಯಾಸ್ಕಾಮ್ ಬಹಳ ಒಳ್ಳೆಯ ಕೆಲಸ ಮಾಡಿದ್ದು, ನಾನಾ ಇಲಾಖೆಗಳು ಸಹಕರಿಸಿವೆ. ಎಲ್ಲರಿಗೂ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ತಿಳಿಸಿದರು.
‘ತಂತ್ರಜ್ಞಾನವನ್ನು ಬಳಸಿಕೊಂಡು ಕೊವಿಡ್ ಪರಿಸ್ಥಿತಿಯನ್ನು ಕರ್ನಾಟಕ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಬಿಎಂಪಿ ಹೆಲ್ತ್‌ಕೇರ್, ಆಪ್ತಮಿತ್ರ ಸಹಾಯವಾಣಿಯ ಕೆಲಸದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕೊವಿಡ್ ನಿಯಂತ್ರಣದಲ್ಲಿ ಬೆಂಗಳೂರನ್ನು ಮಾದರಿ ನಗರ ಎಂದು ಭಾರತ ಸರ್ಕಾರ ಗುರುತಿಸಿದೆ.ಈ ನಿಟ್ಟಿನಲ್ಲಿ ಐಟಿ-ಬಿಟಿ ವಲಯದ ಕೊಡುಗೆ ಬಗ್ಗೆ ಇಡೀ ದೇಶ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಪ್ರಶಂಸಿಸಿದರು.
‘ಕೊವಿಡ್ ಸೋಂಕು ಬಹು ದಿನಗಳವರೆಗೆ ನಮ್ಮ ನಡುವೆ ಇರುವುದರಿಂದ ಅರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸಿಕೊಳ್ಳಬೇಕು. ಆರೋಗ್ಯ ಸೇವೆಯನ್ನು ಡಿಜಿಟಲೈಸ್ ಮಾಡುವುದು ಬಹಳ ಮುಖ್ಯವಾಗಿದ್ದು, ಇದಕ್ಕೆ ಐಟಿ-ಬಿಟಿ ವಲಯದವರ ನೆರವು ಅಗತ್ಯ. ಲಭ್ಯ ಇರುವ ಎಲ್ಲ ಸಂಪನ್ಮೂಲ ಬಳಸಿ ನಗರದಲ್ಲಿ 24/7 ಆರೋಗ್ಯ ಸೇವೆ ಒದಗಿಸಬೇಕು. ನಮ್ಮ ಎಲ್ಲ ಕೆಲಸಗಳು ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಇರಬೇಕು. ವೈದ್ಯನಾಗಿ ಎಲ್ಲ ರೀತಿಯ ಸಹಕಾರ ನೀಡಲು ನಾನು ಸಿದ್ಧವಿದ್ದು, ಉತ್ತಮ ಕಾರ್ಯಕ್ಕೆ ಎಲ್ಲ ಕಂಪನಿಗಳು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.
ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜೂಂದಾರ್, ಮಾಹಿತಿ ತಂತ್ರಜ್ಞಾನದ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ನ್ಯಾಸ್ಕಾಮ್ ಅಧ್ಯಕ್ಷೆ ದೇಬ್ಜಾನಿ ಘೋಷ್, ನ್ಯಾಸ್ಕಾಮ್ ಉಪಾಧ್ಯಕ್ಷ ವಿಶ್ವನಾಥನ್, ಇಂಟೆಲ್ ಮುಖ್ಯಸ್ಥೆ ನಿವೃತ್ತಿ ರಾಯ್, ಇನ್‌ಫೋಸಿಸ್ ಸಿಇಓ ಪ್ರವೀಣ್ ರಾವ್, ಫ್ರಾಕ್ಟಲ್ ಸಿಇಓ ಶ್ರೀಕಾಂತ್, ಮೈಕ್ರೊಸಾಫ್ಟ್‌ನ ರೋಹೀಣಿ ಶ್ರೀವತ್ಸ ವಿಡಿಯೊಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.