ತುಮಕೂರು: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ ನೀಡಿ ನವಭಾರತ ನಿರ್ಮಾಣಕ್ಕೆ ಮುಂದಾಗಿದ್ದು, ಅವರ ಆಡಳಿತ ಸಹಿಸದ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಮಹಾ ಘಟಬಂಧನ್ ರಚಿಸಿಕೊಂಡಿವೆ. ಅದು ಮಹಾ ಘಟಬಂಧನ್ ಅಲ್ಲ ಸ್ವಾರ್ಥ ಘಟ ಬಂಧನ್ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐದು ವರ್ಷದಲ್ಲಿ ಪ್ರಧಾನಿ ಮೋದಿಅವರು ಮಾದರಿ ಸರ್ಕಾರ ನೀಡಿದ್ದಾರೆ. ಎಲ್ಲ ವರ್ಗ ಸಮುದಾಯಗಳ ಹಿತಾಸಕ್ತಿಗೆ ಪೂರಕವಾಗಿ ಯೋಜನೆ ರೂಪಿಸಿ ಅನುಷ್ಠಾನ ಮಾಡಿದ್ದಾರೆ. ಈ ಬಾರಿಯೂ ಮತ್ತೆ ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಗ್ರವಾದಿಗಳು ಯೋಧರ ಮೇಲೆ ದಾಳಿ ನಡೆಸಿದಾಗ ನಮ್ಮ ಪಕ್ಷ ಕೇಂದ್ರ ಸರ್ಕಾರದೊಂದಿಗೆ ಇದೆ. ಯೋಧರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳುತ್ತಾರೆ. ಮತ್ತೊಂದೆಡೆ ಅದೇ ಪಕ್ಷದ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಇಮ್ರಾನ್ ಖಾನ್ ಮತ್ತು ಮೋದಿ ಅವರ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿಕೆ ನೀಡಿದ್ದಾರೆ. ಮನಸೋ ಇಚ್ಛೆ ಹೇಳಿಕೆ ನೀಡುವ ಇಂತಹವರ ಬಗ್ಗೆ ಏನೂ ಕ್ರಮ ಆಗಿಲ್ಲ. ಕಾಂಗ್ರೆಸ್ ಧೋರಣೆ ಏನು ಎಂಬುದು ಇದರಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು.
ಸ್ವಾಮಿನಾಥನ್ ವರದಿ ಅಂಶಗಳನ್ನು ಸರ್ಕಾರ ಅಳವಡಿಸಿಕೊಂಡಿದೆ. ಫಸಲ್ ಬೀಮಾ, ಸಣ್ಣ ರೈತರ ಖಾತೆಗೆ ವರ್ಷಕ್ಕೆ ₹ 6000 ಹಣ ಪಾವತಿ, ಸಬ್ಸಿಡಿ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.
ಶಿವಕುಮಾರ ಶ್ರೀ ಗದ್ದುಗೆ ದರ್ಶನ
ಇದೇ ವೇಳೆಶಿವರಾಜ್ ಸಿಂಗ್ ಚೌಹಾಣ್ ಅವರು ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಮಾಜಿ ಸಚಿವ ಲಕ್ಷ್ಮಣ ಸವದಿ, ಮಾಜಿ ಸಂಸದ ಜಿ.ಎಸ್. ಬಸವರಾಜ್, ಮಾಜಿ ಸಚಿವ ಸೊಗಡು ಶಿವಣ್ಣ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.