ADVERTISEMENT

‘ನಾತಿಚರಾಮಿ’ ವಿವಾದ: ತುರ್ತು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:45 IST
Last Updated 20 ಆಗಸ್ಟ್ 2019, 19:45 IST
   

ಬೆಂಗಳೂರು: ಕನ್ನಡದ ‘ನಾತಿಚರಾಮಿ’ ಸಿನಿಮಾಕ್ಕೆ 2018ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಐದು ಪ್ರಶಸ್ತಿ ನೀಡಿರುವುದನ್ನು ತಡೆ ಹಿಡಿಯಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನವದೆಹಲಿಯ ಚಲನಚಿತ್ರೋತ್ಸವ ನಿರ್ದೇಶನಾಲಯದ ಕಾರ್ಯದರ್ಶಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಸಿನಿಮಾ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2018ರ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ಹಾಗೂ ‘ನಾತಿಚರಾಮಿ’ ಚಿತ್ರ ನಿರ್ಮಾಪಕ ಎಂ.ರಮೇಶ್ ಅವರಿಗೂ ನೋಟಿಸ್ ಜಾರಿಗೆ ಆದೇಶಿಸಲಾಗಿದೆ. ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ.

ADVERTISEMENT

ಆರೋಪವೇನು?: ಬಿ.ಎಸ್.ಲಿಂಗದೇವರು ‘ಅಕ್ಕ ಕಮ್ಯುನಿಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಯ ನಿರ್ದೇಶಕರಾಗಿದ್ದಾರೆ. ‘ನಾತಿಚರಾಮಿ’ ಚಿತ್ರದ ಸಂಕಲನಕ್ಕೆ ‘ಅಕ್ಕ’ ಕಂಪನಿ ಸಹಾಯ ಮಾಡಿದೆ. ಇದರಿಂದಾಗಿ ಲಿಂಗದೇವರು ‘ನಾತಿಚರಾಮಿ’ ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ. ಆದರೆ, ಆಯ್ಕೆ ಸಮಿತಿ ಮುಂದೆ ನೀಡಲಾಗಿದ್ದ ಘೋಷಣಾ ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ಮುಚ್ಚಿಡಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.