ಬೆಂಗಳೂರು: ‘ಸೀತೆಯನ್ನು ಅಪಹರಿಸಿದರೂ, ಆಕೆಯ ಮಾತಿಗೆ ಬೆಲೆ ಕೊಟ್ಟು ರಾವಣ ಗೌರವದಿಂದ ನಡೆಸಿಕೊಂಡಿದ್ದ. ಮತ್ತೊಂದೆಡೆ ಸೀತೆಯನ್ನು ಕಾಡಿಗೆ ಅಟ್ಟಿದ್ದು ಮತ್ತು ಬೆಂಕಿಗೆ ದೂಡಿದ್ದು ರಾಮ. ಈ ಇಬ್ಬರು ಪುರುಷರಲ್ಲಿ ಯಾರನ್ನು ಗೌರವದಿಂದ ಕಾಣಬೇಕು’ ಎಂಬ ಪ್ರಶ್ನೆಯನ್ನು ಲೇಖಕಿ ಕೆ.ಆರ್.ಸಂಧ್ಯಾ ರೆಡ್ಡಿ ಸಭಿಕರ ಮುಂದಿಟ್ಟರು.
ನ್ಯಾಷನಲ್ ಕಾಲೇಜು ನಗರದಲ್ಲಿ ಆಯೋಜಿಸಿರುವ ಸಾಹಿತ್ಯ ಹಬ್ಬದಲ್ಲಿ ಶುಕ್ರವಾರ, ‘ಜನಪದ ಸಾಹಿತ್ಯ ಚರಿತ್ರೆ ಮತ್ತು ತತ್ವಗಳು’ ಕುರಿತ ಗೋಷ್ಠಿ ವೇಳೆ ಅವರು ಎತ್ತಿದ ಈ ಪ್ರಶ್ನೆಯನ್ನು ಹಲವು ವಿದ್ಯಾರ್ಥಿನಿಯರೂ ಚರ್ಚಿಸಿದರು.
‘ಯಾರನ್ನು ಗೌರವದಿಂದ ಕಾಣಬೇಕು ಎಂಬುದನ್ನೇ ಜನಪದರು, ಜನಪದ ರಾಮಾಯಣಗಳು ಚರ್ಚಿಸುತ್ತಾ ಹೋಗುತ್ತವೆ. ಈ ರೀತಿಯ ಚರ್ಚೆ ಜನಪದ ಸಾಹಿತ್ಯದಲ್ಲಿ ಮಾತ್ರ ಸಾಧ್ಯ. ವಾಲ್ಮೀಕಿ ರಾಮಾಯಣದಂತ ಶಿಷ್ಟ ಸಾಹಿತ್ಯದಲ್ಲಿ ಈ ರೀತಿಯ ವ್ಯಾಖ್ಯಾನ ಅಥವಾ ಚರ್ಚೆ ಎತ್ತಿಕೊಂಡರೆ ದಾಳಿಗಳೇ ಆಗಿಬಿಡುತ್ತವೆ’ ಎಂದು ಸಂಧ್ಯಾ ಅವರು ತಮ್ಮ ಪ್ರಶ್ನೆಗೆ ತಾವೇ ವಿವರಣೆಯನ್ನೂ ನೀಡಿದರು.
ಸಂವಾದದ ವೇಳೆ ಈ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿನಿಯೊಬ್ಬರು, ‘ಜನಪದರು ರಾವಣನಲ್ಲಿನ ಒಳ್ಳೆಯ ಗುಣಗಳನ್ನು ಚರ್ಚಿಸಿದ್ದಾರೆ. ಆದರೆ ಆರ್ಯನ್ನರ ಪ್ರಭಾವದ ಶಿಷ್ಟ ಸಾಹಿತ್ಯಗಳು ಆ ಬಗ್ಗೆ ಮಾತನಾಡುವುದಿಲ್ಲ. ರಾವಣ ದ್ರಾವಿಡ ಜನಾಂಗದವನು ಎಂದು ಆರ್ಯನ್ನರು ಆತನನ್ನು ಕೆಟ್ಟವನಂತೆ ಚಿತ್ರಿಸಿದರೇ’ ಎಂದು ಪ್ರಶ್ನಿಸಿದರು.
‘ಸಂಸ್ಕೃತದಲ್ಲಿ ರಚನೆಯಾದ ಶಿಷ್ಟ ಸಾಹಿತ್ಯವೆಲ್ಲವೂ ಆರ್ಯನ್ನರದ್ದೇ. ಅವರು ತಮ್ಮ ಮೌಲ್ಯಗಳನ್ನು ಮುಂದು ಮಾಡುವುದಕ್ಕಾಗಿ ಪಾತ್ರಗಳನ್ನು ತಮಗೆ ಅಗತ್ಯವಿದ್ದಂತೆ ಚಿತ್ರಿಸಿದ್ದಾರೆ’ ಎಂದು ಸಂಧ್ಯಾರೆಡ್ಡಿ ಉತ್ತರಿಸಿದರು.
ಈ ವಿವರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಬ್ಬ ವಿದ್ಯಾರ್ಥಿನಿ, ‘ರಾವಣ ಒಳ್ಳೆಯವನು ಎಂದು ಜನಪದರು ಹೇಳಿದ್ದಾರೆ ಎಂಬ ಚರ್ಚೆಯಿದು. ಕೆಟ್ಟವರನ್ನು ಒಳ್ಳೆಯವರು ಎಂದು ಬಿಂಬಿಸುವ ಮೂಲಕ ನಾವು ಮುಂದಿನ ಸಮಾಜಕ್ಕೆ ಏನನ್ನು ಹೇಳಲು ಹೊರಟಿದ್ದೇವೆ. ಆ ರೀತಿಯ ವ್ಯಾಖ್ಯಾನ ಮಾಡುವ ಜನಪದ ಸಾಹಿತ್ಯಗಳು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಸಂಧ್ಯಾ, ‘ಪುರಾತನ ಕಾಲದಲ್ಲಿ ಇದ್ದಂತೆಯೇ ಇರಬೇಕು ಎಂಬುದು ನಿಮ್ಮ ನಿಲುವೇ? ಶಿಷ್ಟ ಸಾಹಿತ್ಯದಲ್ಲಿ ಪಾತ್ರಗಳ ಕಪ್ಪು–ಬಿಳುಪು ಎಂಬ ಚಿತ್ರಣವಿದೆ. ಆದರೆ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಒಳ್ಳೆಯವನೇ ಆಗಿರುವುದಿಲ್ಲ, ಹಾಗೆಯೇ ಸಂಪೂರ್ಣವಾಗಿ ಕೆಟ್ಟವನೂ ಆಗಿರುವುದಿಲ್ಲ. ಎರಡೂ ರೀತಿಯ ಗುಣಗಳು ಒಬ್ಬ ವ್ಯಕ್ತಿಯಲ್ಲೇ ಇರುತ್ತವೆ. ಇದನ್ನೇ ಜನಪದರು, ಜನಪದ ಸಾಹಿತ್ಯಗಳು ಹುಡುಕಾಡುವುದು’ ಎಂದರು.
ಬಸವಣ್ಣನ ಚರ್ಚೆ: ‘ಬಸವಣ್ಣನ ಕುರಿತು ವಿನಯಾ ಒಕ್ಕುಂದ ಅವರು ಬರೆದಾಗ ಅವರ ವಿರುದ್ಧ ದೊಡ್ಡಮಟ್ಟದ ದಾಳಿಗಳೇ ನಡೆದವು’ ಎಂದ ಅವರು, ‘ಮಹಿಳೆಯರಿಗೆ ಬಸವಣ್ಣ ಕೊಟ್ಟಷ್ಟು ಪ್ರಾತಿನಿಧ್ಯ ಇನ್ಯಾರೂ ನೀಡಿಲ್ಲ. ಆದರೆ ಅದೇ ಬಸವಣ್ಣ, ನಾರಿಗೆ ಗುಣವೇ ಶೃಂಗಾರ ಎಂದಿದ್ದಾರೆ. ಗುಣವು ಮಹಿಳೆಯರಿಗಷ್ಟೇ ಇರಬೇಕೆ? ಪುರುಷರಿಗೆ ಇರಬಾರದೇ’ ಎಂದು ಪ್ರಶ್ನಿಸಿದರು.
‘ವಚನಗಳ ಹೊಸ ಓದಿನ ಅವಶ್ಯಕತೆ’ ಕುರಿತ ಗೋಷ್ಠಿಯಲ್ಲಿ ಓ.ಎಲ್. ನಾಗಭೂಷಣಸ್ವಾಮಿ ಮತ್ತು ‘ಜಯಮೋಹನ್‌ರವರ ಕಥಾ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಟಿ.ಪಿ. ಅಶೋಕ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.