ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಹೆಚ್ಚಿರುವ ಈ ದಿನಗಳು ವೈದ್ಯರ ಪಾಲಿಗೆ ಅತ್ಯಂತ ಸವಾಲಿನ ಸಂದರ್ಭವನ್ನು ತಂದಿವೆ. ಮನೆಗೆ ಹೋಗದೆ ತಿಂಗಳು ಪರ್ಯಂತ ಆಸ್ಪತ್ರೆಯಲ್ಲಿ ಉಳಿದು, ಸ್ವಂತ ಸುಖ–ದುಃಖ ಮರೆತು ಕಾಯಿಲೆಪೀಡಿತರ ಆರೈಕೆ ಮಾಡಿದ ವೈದ್ಯರ ಸಂಖ್ಯೆ ದೊಡ್ಡದು.ಅಂತಹ ಕೆಲವು ವೈದ್ಯರ ಅನುಭವದ ಪುಟ್ಟ ಕಥೆಗಳು ಇಲ್ಲಿವೆ....
***
ಮನೆಯಲ್ಲಿ ಕೂಸು; 4 ತಿಂಗಳಲ್ಲಿ 1 ದಿನ ರಜೆ!
ನಾಲ್ಕು ತಿಂಗಳಲ್ಲಿ ಒಂದುದಿನ ಮಾತ್ರ ರಜೆ ತೆಗೆದುಕೊಂಡಿದ್ದೇನೆ. ಬೆಳಿಗ್ಗೆ 9 ಗಂಟೆಗೆ ಪ್ರಯೋಗಾಲಯಕ್ಕೆ ಬಂದರೆ ಮನೆಗೆ ಹೋಗುವಾಗ ರಾತ್ರಿ 2 ಗಂಟೆ ಆಗುತ್ತದೆ. 9 ತಿಂಗಳ ಕೂಸಿನೊಂದಿಗೆ ಸಮಯ ಕಳೆಯಲೂ ಆಗುತ್ತಿಲ್ಲ. ಪತಿ ನವೀನ್ ಅವರೇ ಮಗುವಿನ ಕಾಳಜಿ ಹೊತ್ತಿದ್ದಾರೆ.
ಲಾಕ್‌ಡೌನ್‌ನ ಮೊದಲ ಎರಡು ತಿಂಗಳು ಮೈಸೂರು ಅಲ್ಲದೇ, ಕೊಡಗು, ಚಾಮರಾಜನಗರ ಜಿಲ್ಲೆಗಳಿಂದಲೂ ಪರೀಕ್ಷೆಗಾಗಿ ಗಂಟಲು ದ್ರವ ಮಾದರಿಯನ್ನು ಇಲ್ಲಿಗೆ ಕಳಿಸುತ್ತಿದ್ದರು. ಆರಂಭದಲ್ಲಿ ನಿತ್ಯ 200ರಿಂದ 300 ಪರೀಕ್ಷೆ ಮಾಡುತ್ತಿದ್ದೆವು. ಈಗ ಆ ಸಂಖ್ಯೆ ಸಾವಿರಕ್ಕೂ ಹೆಚ್ಚು. ನಿತ್ಯ 18 ಗಂಟೆಗೂ ಹೆಚ್ಚು ಸಮಯವನ್ನು ಪ್ರಯೋಗಾಲಯದಲ್ಲೇ ಕಳೆಯುತ್ತಿದ್ದು, ಭಾರಿ ಒತ್ತಡವಿದೆ. ಈ ಕೆಲಸ ಹೆಚ್ಚು ಅಪಾಯದ್ದು. ಇದೊಂದು ವಿಶೇಷ ಸಂದರ್ಭ; ಸೇವೆ, ವೃತ್ತಿ ಧರ್ಮ ಅಂದುಕೊಂಡು ಕಾರ್ಯ ನಿರ್ವಹಿಸುಸುತ್ತಿದ್ದೇವೆ.
ಮಗುವಿಗೆ ಹಾಲುಣಿಸುವ ಅಗತ್ಯವಿರುವುದರಿಂದ ಹೊರಗಡೆ ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿ ಪರೀಕ್ಷೆ ನಡೆಸುತ್ತಿದ್ದೇವೆ. ಪತಿಯ ಪ್ರೋತ್ಸಾಹದ ನುಡಿಗಳು ಧೈರ್ಯ ತುಂಬಿವೆ.
-ಡಾ.ಅಮೃತಾ,ಕೋವಿಡ್ ಪ್ರಯೋಗಾಲಯದ ನೋಡಲ್ ಅಧಿಕಾರಿ, ಮೈಸೂರು
**
ಅತ್ತೆಯೇ ಸೊಸೆ ಸೇವೆ ಮಾಡುವಂತಾಗಿದೆ
ಕೋವಿಡ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಕೆಲಸ ಮುಗಿದ ಮೇಲೆ ನಾನು ಮನೆಗೆ ಹೋಗುವುದಿಲ್ಲ. ಜಿಮ್ಸ್‌ನ ಕ್ವಾಟರ್ಸ್‌ನಲ್ಲಿ ಐದು ದಿನ ಕಳೆಯುತ್ತೇನೆ. ಸೋಂಕಿನ ಯಾವುದೇ ಲಕ್ಷಣ ನನ್ನಲ್ಲಿ ಕಂಡುಬರದಿದ್ದನ್ನು ಖಾತ್ರಿ ಮಾಡಿಕೊಂಡು ಮನೆಗೆ ಹೋಗುತ್ತೇನೆ. ಮನೆಯಲ್ಲಿ ಕೂಡ ಮಹಡಿ ಮೇಲೆ ಪ್ರತ್ಯೇಕ ರೂಮ್‌ನಲ್ಲಿ ವಾಸಿಸುತ್ತೇನೆ. ಕುಟುಂಬದ ಸದಸ್ಯರೊಂದಿಗೆ ಬೆರೆಯುವುದು ಸಾಧ್ಯವಾಗುತ್ತಿಲ್ಲ. ಎಲ್ಲರೂ ಹರಟುವುದನ್ನು ದೂರದಿಂದ ನೋಡಿಯೇ ಖುಷಿಪಡಬೇಕು.
ಪತಿ ಕೂಡ ವೈದ್ಯರಾಗಿದ್ದು, ಬೆಂಗಳೂರಿನಲ್ಲಿ ಕೋವಿಡ್ ಡ್ಯೂಟಿ ಮಾಡುತ್ತಿದ್ದಾರೆ. ಮೂರು ತಿಂಗಳಿಂದ ಅವರೊಂದು ತೀರ– ನಾನೊಂದು ತೀರ. ಅತ್ತೆ, ಮಾವ ನನ್ನೊಂದಿಗೆ ಇದ್ದಾರೆ. ಮನೆ ಕೆಲಸವೆಲ್ಲ ಈಗ ಅತ್ತೆಯೇ ನಿಭಾಯಿಸುತ್ತಿದ್ದಾರೆ. ನನಗೂ ಅಡುಗೆ ಮಾಡಿ ಕೊಡುತ್ತಾರೆ. ನಾವು ಎಷ್ಟೇ ಸುರಕ್ಷಿತ ಆಗಿದ್ದೇವೆ ಎಂದರೂ ಅವರಲ್ಲಿ ಅಳುಕು ಇದ್ದೇ ಇರುತ್ತದೆ.
ಐಸಿಯು ಘಟಕದಲ್ಲಿ ವೈರಾಣು ಲೋಡ್ ಅತಿ ಹೆಚ್ಚಿರುತ್ತದೆ. ಪಿಪಿಇ ಕಿಟ್ ನೂರಕ್ಕೆ ನೂರಷ್ಟು ರಕ್ಷಿಸುತ್ತದೆ ಎಂದೇನಿಲ್ಲ. ಅದು ಗರಿಷ್ಠ ಪ್ರಮಾಣದ ಸುರಕ್ಷತಾ ಕವಚ ಅಷ್ಟೆ. ರೋಗಿಗಳನ್ನು ಕಾಪಾಡಬೇಕಾದರೆ ನಾವು ‘ರಿಸ್ಕ್’ ತೆಗೆದುಕೊಳ್ಳಲೇಬೇಕು.
-ಡಾ.ಉಲ್ಲಾಸಿನಿ ಕೊಲ್ಹಾರ,ವೈದ್ಯೆ, ಜಿಮ್ಸ್, ಕಲಬುರ್ಗಿ
**
ಎರಡು ಬಾರಿ ಮದುವೆ ಮುಂದೂಡಿದ್ದೆ
ಕೊರೊನಾ ಸೋಂಕು ತೀವ್ರವಾಗಿ ಕಾಡಿದ ಸಂದರ್ಭ ಕರ್ತವ್ಯದ ಮೇಲಿದ್ದ ನಾನು ಎರಡು ಬಾರಿ ಮದುವೆಯನ್ನು ಮುಂದೂಡಬೇಕಾಯಿತು. ಕೊನೆಗೆ ಜೂನ್ 29ರಂದು ಮದುವೆಯಾದೆ. ಜೂನ್ 27ರಿಂದಷ್ಟೇ ಮದುವೆಗೆ ರಜೆ ಹಾಕಿರುವೆ. ನಾಲ್ಕೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದೇನೆ.
ಮೊದಲು ಏಪ್ರಿಲ್ 28ಕ್ಕೆ ಮದುವೆ ನಿಗದಿಯಾಗಿತ್ತು. ಅದನ್ನು ಮೇ 19ಕ್ಕೆ ಮುಂದೂಡಲಾಯಿತು. ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಪತ್ತೆ ಆಗತೊಡಗಿದ್ದರಿಂದ ಜೂನ್ 29ಕ್ಕೆ ಮರುನಿಗದಿ ಮಾಡಲಾಯಿತು. ಮದುವೆ ಬಗ್ಗೆ ಚರ್ಚೆ ಮಾಡಲೂ ನನಗೆ ಸಮಯ ಇರಲಿಲ್ಲ. ರಾಜ್ಯ ಸರ್ವೇಕ್ಷಣಾ ತಂಡ ಮತ್ತು ಜಿಲ್ಲಾ ಸರ್ವೇಕ್ಷಣಾ ತಂಡಗಳ ನಡುವೆ ಸಂವಹನಕಾರನಾಗಿ ಕೆಲಸ ಮಾಡಬೇಕಿತ್ತು. ಬೆಳಿಗ್ಗೆ ಮನೆಯಿಂದ ಹೊರಟರೆ ರಾತ್ರಿ 12ರ ನಂತರ ಮನೆಗೆ ತಲುಪುತ್ತಿದ್ದೆ. ಮದುವೆ ಬಗ್ಗೆ ಅಪ್ಪ, ಅಮ್ಮ, ಅಜ್ಜ, ಅಜ್ಜಿಯೇ ತೀರ್ಮಾನ ಕೈಗೊಂಡರು.
-ಡಾ.ಯತೀಶ್ ಕರ್ಪಣ್ಣ, ಜಿಲ್ಲಾ ಸಾಂಕ್ರಾಮಿಕ ರೋಗ ತಜ್ಞ, ದಾವಣಗೆರೆ
**
ಸಂಕಷ್ಟದಲ್ಲೂ ಕರ್ತವ್ಯ ಬಿಡಲಿಲ್ಲ
ನಾನು ಮೇ 7ರಿಂದ ಕೋವಿಡ್ ರೋಗಿಗಳ ಚಿಕಿತ್ಸೆಗೆನಿಯುಕ್ತಿಗೊಂಡಿದ್ದೆ. ಮೇ 8ರಂದು ನನ್ನ ಪತ್ನಿಗೆ ಗರ್ಭಪಾತವಾಯಿತು. ಆದರೂ ಸೋಂಕಿತರ ಚಿಕಿತ್ಸೆಯಲ್ಲೇ ಮುಂದುವರಿದೆ.
ಗರ್ಭಪಾತವಾದ ವಿಚಾರವನ್ನು ಸಂಸ್ಥೆಯ ನಿರ್ದೇಶಕರಿಗೆ ತಿಳಿಸಿದೆ. ಊರಿಗೆ ತೆರಳಲು ಹೇಳಿದರು. ಆದರೆ, ನಾನು ಕರ್ತವ್ಯವನ್ನು ನಿಭಾಯಿಸಲು ನಿರ್ಧರಿಸಿದ್ದೆ. ಕ್ವಾರಂಟೈನ್ ಅವಧಿಯನ್ನೂ ಮುಗಿಸಿಯೇ ತೆರಳುವುದಾಗಿ ತಿಳಿಸಿದ್ದೆ. ಹಾಗೇ ಮಾಡಿದೆ.
ಸಮಸ್ಯೆಗಳು ಇರುತ್ತವೆ. ನಾವು ವಹಿಸಿಕೊಂಡ ಜವಾಬ್ದಾರಿಯನ್ನುಪೂರ್ಣಗೊಳಿಸುವುದು ಮುಖ್ಯ. ಕ್ರಿಮ್ಸ್‌ನಲ್ಲಿ ಅಪಸ್ಮಾರದ ಸಮಸ್ಯೆಯಿದ್ದ ಐದು ತಿಂಗಳ ಮಗುವಿನಿಂದ 83 ವರ್ಷದ ವ್ಯಕ್ತಿಯವರೆಗೂ ಹಲವರನ್ನು ಗುಣಮುಖರನ್ನಾಗಿ ಮಾಡಲಾಗಿದೆ. ಕರ್ತವ್ಯದಲ್ಲಿದ್ದ ಎಲ್ಲರೂ ಸಮನ್ವಯ ಸಾಧಿಸಿ ಕೆಲಸ ಮಾಡಿದ್ದರಿಂದ ಯಶಸ್ಸು ಸಿಕ್ಕಿದೆ.
ಕಾರವಾರದಲ್ಲಿ ಸೆಕೆ, ಬೆವರುವ ಕಾರಣ ವೈಯಕ್ತಿಕ ರಕ್ಷಣೆ ಸಲಕರಣೆ (ಪಿ.ಪಿ.ಇ) ಧರಿಸಿ ಆರು ತಾಸು ಆರೈಕೆ ಮಾಡುವುದು ಕಷ್ಟದ ಕೆಲಸ. ನಮಗೂ ಉಸಿರಾಡಲು ಸಮಸ್ಯೆಯಾಗುತ್ತದೆ. ಕರ್ತವ್ಯದ ಅವಧಿಯನ್ನು ನಾಲ್ಕು ಗಂಟೆಗೆ ಸೀಮಿತಗೊಳಿಸಿದ್ದು ಅನುಕೂಲವಾಯಿತು.
-ಡಾ.ರಾಜು ತಳವಾರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಜನರಲ್ ಫಿಸಿಷಿಯನ್, ಕಾರವಾರ
**
ಸಂತಸ ಮರೆತು ಸೇವೆಗೆ...
ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂಬತ್ತು ವರ್ಷ ಪೂರೈಸಿದ ದಿನವೂ ನಾನು ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕಾಯಿತು. ನನ್ನ ಪತಿ ಡಾ.ಜಿ.ಎಚ್. ಹನುಮಂತರಾಯ ಹಾಗೂ ನಾನು ಪ್ರತಿವರ್ಷ ವಿವಾಹ ವಾರ್ಷಿಕೋತ್ಸವವನ್ನು ಪ್ರೇಕ್ಷಣೀಯ ಸ್ಥಳದಲ್ಲಿ ಆಚರಿಸಿಕೊಳ್ಳುತ್ತಿದ್ದೆವು. ಈ ಸಲದ ವಿವಾಹ ದಿನದ (ಮೇ 11) ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ ಮನೆಯಲ್ಲೇ ಸಂತಸ ಹಂಚಿಕೊಳ್ಳಲು ನಿರ್ಧರಿಸಿದ್ದೆವು.
ಮೇ 8ಕ್ಕೆ ಆಸ್ಪತ್ರೆಯಿಂದ ಕರೆ ಬಂದಿತು. ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಅತ್ತೆ, ತಾಯಿಯನ್ನು ಊರಿನಿಂದ ಕರೆಸಿಕೊಂಡೆ. ಎರಡೂವರೆ ವರ್ಷದ ಮಗ ಹಾಗೂ ಆರು ವರ್ಷದ ಮಗಳನ್ನು ಅಜ್ಜಿಯರ ಮಡಿಲಿಗೆ ಹಾಕಿ ಆಸ್ಪತ್ರೆಗೆ ತೆರಳಿದೆ. ಏಳು ದಿನ ಆಸ್ಪತ್ರೆಯಲ್ಲಿ ಹಾಗೂ 21 ದಿನ ಕ್ವಾರಂಟೈನ್‌ನಲ್ಲಿ ಕಳೆದ ನಾನು, ಕುಟುಂಬದಿಂದ 21 ದಿನ ದೂರವಿದ್ದೆ. ಮಕ್ಕಳೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದೆ.
ಕೊರೊನಾ ಸೋಂಕು ಚಿತ್ರದುರ್ಗ ಜಿಲ್ಲೆಗೂ ಕಾಲಿಡುವ ಸಾಧ್ಯತೆ ಇರುವುದನ್ನು ಮೊದಲೇ ಅರಿತಿದ್ದೆ. ಆದರೆ, ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ ಆಲೋಚಿಸಿರಲಿಲ್ಲ. ಕುಟುಂಬದ ಸಹಕಾರದಿಂದ ನಿರಾತಂಕವಾಗಿ ಕರ್ತವ್ಯ ನಿರ್ವಹಿಸಿದೆ.
-ಡಾ. ಜಿ.ಆರ್. ಕಮಲಾ,ಅರಿವಳಿಕೆ ತಜ್ಞೆ, ಚಿತ್ರದುರ್ಗ
**
ಮೂರು ತಿಂಗಳಿಂದ ಆಸ್ಪತ್ರೆಯೇ ನಮಗೆ ಮನೆ
ದಿನದ ಬಹುತೇಕ ಸಮಯವನ್ನು ಆಸ್ಪತ್ರೆಯಲ್ಲಿ ರೋಗಿಗಳ ಜತೆಗೆ ಕಳೆಯುತ್ತಿದ್ದೇವೆ. ತಡರಾತ್ರಿ ಮನೆಗೆ ಬಂದು, ಬೆಳಿಗ್ಗೆ ಬೇಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಕೆಲವು ವೇಳೆ ಮಧ್ಯರಾತ್ರಿ ಕೂಡ ಆಸ್ಪತ್ರೆಯಿಂದ ದೂರವಾಣಿ ಕರೆಗಳು ಬರುತ್ತವೆ. ಬಿಡುವಿಲ್ಲದ ಕೆಲಸದಿಂದ ಮಾನಸಿಕ ಒತ್ತಡ ಸಹ ಉಂಟಾಗುತ್ತದೆ. ಆಗ ಸೈಕೋ ಥೆರಪಿ ತೆಗೆದುಕೊಳ್ಳುತ್ತಿದ್ದೇವೆ.
ಕೊರೊನಾ ವಿರುದ್ಧದ ಹೋರಾಟವನ್ನು ಜಯಿಸಬೇಕಾದರೆ ಪ್ರತಿಯೊಬ್ಬರು ಜೀವನದಲ್ಲಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ನಾನು ಯಾವಾಗ ಮನೆಗೆ ಬರುತ್ತೇನೆ ಯಾವಾಗ ಆಸ್ಪತ್ರೆಗೆ ಹೋಗುತ್ತೇನೆ ಎನ್ನುವುದು ಪತ್ನಿ ಹಾಗೂ ಮಕ್ಕಳಿಗೆ ತಿಳಿಯದಂತಾಗಿದೆ. ಕೆಲವು ದಿನಗಳು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ಇದರಿಂದಾಗಿ ಅವರು ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಮನೆಗೆ ಬೇಕಾದ ದಿನಸಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಅವರೇ ತಂದು, ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.
ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಊಟಮಾಡಿ ಎಷ್ಟೋ ದಿನಗಳಾಗಿವೆ. ಅವರ ಆರೋಗ್ಯವನ್ನು ವಿಚಾರಿಸಲೂ ಸಾಧ್ಯವಾಗುತ್ತಿಲ್ಲ. ನಾವು ಅಪಾಯದಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವುದು ಅರಿವಿಗಿದೆ. ಹಾಗಂತ ರೋಗಿಗಳನ್ನು ಕೈಬಿಡಲು ಸಾಧ್ಯವಿಲ್ಲ. ಮೊಬೈಲ್‌ಗಳಿಗೆ ಬರುವ ಶುಭ ಹಾರೈಕೆಯ ಸಂದೇಶಗಳು ಚಿಕಿತ್ಸೆಗೆ ಇನ್ನಷ್ಟು ಪ್ರೇರಣೆ ನೀಡುತ್ತಿದೆ.
-ಡಾ. ಅನ್ಸರ್ ಅಹಮದ್,ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯ ಅಧೀಕ್ಷಕ, ಇಂದಿರಾನಗರ, ಬೆಂಗಳೂರು
*
ಅಮ್ಮಾ, ನಿನಗೇ ಕೋವಿಡ್ ಬಂದ್ರೆ ಎಂದ ಮಗ
ನಾನು ಕೋವಿಡ್ ಡ್ಯೂಟಿಗೆ ಹೊರಟು ನಿಂತಿದ್ದೆ. ‘ಅಮ್ಮಾ ನಿನಗೇ ಕೋವಿಡ್–19 ಬಂದ್ರೆ...’ ಎಂದು ಮಗ ಅಳುಕಿನಿಂದ ಪ್ರಶ್ನಿಸಿದ. ನಾನೇ ಹೆದರಿ ಮನೆಯಲ್ಲಿ ಕೂತರೆ, ಸೋಂಕಿತರ ಗತಿಯೇನು ಎಂದು ಸಮಾಧಾನಿಸಿ ಕರ್ತವ್ಯಕ್ಕೆ ಅಣಿಯಾದೆ.
ಕೋವಿಡ್ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚನೆಯಿಂದ ಆತ್ಮಸ್ಥೈರ್ಯ ತುಂಬುವುದು ನನ್ನ ಕೆಲಸ. ಉಳಿದ ಸಮಯದಲ್ಲಿ ಒಪಿಡಿಯಲ್ಲಿ ಮಾನಸಿಕ ರೋಗಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಿದ್ದೇನೆ.ಮಾರ್ಚ್ 13ರಿಂದ ಇದುವರೆಗೂ ವಾರದ ರಜೆ ಸಹ ತೆಗೆದುಕೊಂಡಿಲ್ಲ.
‘ಪಾಸಿಟಿವ್’ ಎಂದು ಕೇಳಿದ ತಕ್ಷಣ ಕೆಲವರು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ. ಕುಟುಂಬದವರಿಂದ ದೂರ ಮಾಡಿ, ಪ್ರತ್ಯೇಕ ಕೋಣೆಯಲ್ಲಿಟ್ಟು ಚಿಕಿತ್ಸೆ ನೀಡುವುದರಿಂದ ಸಹಜವಾಗಿಯೇ ಸೋಂಕಿತರಲ್ಲಿ ಗಾಬರಿ, ಖಿನ್ನತೆ, ಒಂಟಿತನ, ಆಕ್ರೋಶ, ಭಯ, ಆತಂಕ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಅಂಥವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದೇನೆ.
ಸೋಂಕಿತಳಾಗಿದ್ದ ನರ್ಸಿಂಗ್ ಶಾಲೆಯ ಶಿಕ್ಷಕಿಯೊಬ್ಬರು ವೈದ್ಯಕೀಯ ಸಿಬ್ಬಂದಿ ವಿರುದ್ಧ ಕಿರುಚಾಡುತ್ತಾ, ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಅವರ ಬಳಿ ಕುಳಿತು ಅವರ ಸಮಸ್ಯೆಗಳಿಗೆ ಒಂದು ಗಂಟೆ ಕಿವಿಗೊಟ್ಟೆ ಅಷ್ಟೆ. ಆಕೆಯ ಮನಸ್ಸಿನ ದುಗುಡ, ದುಃಖ ಎಲ್ಲವನ್ನೂ ಹೊರಹಾಕಿಸಿದೆ. ಆಕೆ ಮರುದಿನದಿಂದಲೇ ಶಾಂತ ಸ್ವಭಾವದಿಂದ ವರ್ತಿಸಿದಳು.
-ಡಾ.ಲೀಲಾ ಪ್ರಕಾಶ್, ಮನೋರೋಗ ತಜ್ಞೆ ಜಿಲ್ಲಾಸ್ಪತ್ರೆ ಹಾವೇರಿ
**
27 ಸಾವಿರ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿದೆ
ವಿಜಯಪುರದಲ್ಲಿ ಕೋವಿಡ್ ವಿರುದ್ಧದ ಕಾರ್ಯಾಚರಣೆ ಯಲ್ಲಿ ನನ್ನದು ಸೋಂಕು ಪರೀಕ್ಷೆ ಮಾಡಿಸುವ ಹೊಣೆ. ಇದುವರೆಗೆ ಜಿಲ್ಲೆಯ 27 ಸಾವಿರ ಜನರ ಕೋವಿಡ್ ಪರೀಕ್ಷೆಯನ್ನು ನಿರ್ವಹಿಸಿದ್ದೇನೆ.
ಕೋವಿಡ್ ಪೀಡಿತರ ಗಂಟಲುದ್ರವ ಸಂಗ್ರಹಿಸಿ, ಅದನ್ನು ಬೆಂಗಳೂರಿನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಪಡೆಯುವ ಕೆಲಸ ನನ್ನದು.
ತಂದೆ, ತಾಯಿ, ಇಬ್ಬರು ಸಹೋದರರು ಸೇರಿದಂತೆ ಒಟ್ಟು 14 ಜನರನ್ನು ಒಳಗೊಂಡಿರುವ ಕೂಡುಕುಟುಂಬ ನಮ್ಮದು. ನನ್ನಿಂದ ಮನೆಯವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಮೂರು ತಿಂಗಳಿಂದ ಹೋಟೆಲ್‌ನಲ್ಲಿ ತಂಗುತ್ತಿದ್ದೇನೆ.ನಾಲ್ಕು ತಿಂಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ.
ಕೋವಿಡ್ ಕ್ವಾರಂಟೈನ್ ಕೇಂದ್ರಗಳ ಉಸ್ತುವಾರಿ, ಕೊರೊನಾ ಸೋಂಕಿತರೊಂದಿಗಿನ ಪ್ರಥಮ, ದ್ವಿತೀಯ ಸಂಪರ್ಕ ಪತ್ತೆ ಹಚ್ಚುವುದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವುದು, ಬಿಡುಗಡೆ ಬಳಿಕ ಹೋಂ ಕ್ವಾರಂಟೈನ್ ಉಸ್ತುವಾರಿ ಸಹ ನನ್ನ ಹೊಣೆಯಾಗಿದೆ.
ಎಲ್ಲದಕ್ಕೂ ಸವಾಲಿನ ಕೆಲಸವೆಂದರೆ ಮಹಾರಾಷ್ಟ್ರದಿಂದ 19 ಸಾವಿರ ವಲಸೆ ಕಾರ್ಮಿಕರು ಜಿಲ್ಲೆಗೆ ಒಮ್ಮೆಲೆ ಮರಳಿದರು. ಕೇವಲ ನಾಲ್ಕೈದು ದಿನಗಳಲ್ಲಿ ಎಲ್ಲರ ಗಂಟಲುದ್ರವ ಪರೀಕ್ಷೆ ಮಾಡಬೇಕಾಗಿತ್ತು. ಹಗಲು, ರಾತ್ರಿ ಎನ್ನದೇ ಎಲ್ಲರ ಗಂಟಲುದ್ರವ ಸಂಗ್ರಹಿಸಿದ್ದು ಮರೆಯಲಾಗದು.ಯಾವುದಕ್ಕೂ ಹಿಂಜರಿಯದೆ ಕರ್ತವ್ಯ ನಿರ್ವಹಿತ್ತಿದ್ದೇನೆ.
-ಡಾ.ಮಲ್ಲನಗೌಡ ಬಿ.ಬಿರಾದಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ವಿಜಯಪುರ
**
ಒಂದೆಡೆಯಿದ್ದರೂ ಭೇಟಿ ಅಪರೂಪ
ಇಬ್ಬರೂ ಒಂದೇ ಮನೆಯಲ್ಲಿದ್ದರೂ ಮೂರು ತಿಂಗಳಲ್ಲಿ ಪರಸ್ಪರ ಭೇಟಿ ಆದದ್ದು ತುಂಬಾ ಅಪರೂಪ.ಒಟ್ಟಿಗೆ ಕುಳಿತು ಊಟ–ತಿಂಡಿ ಮಾಡಿದ್ದು ಇಲ್ಲವೇ ಇಲ್ಲ. ಹಾಗೆಂದು ಬೇಸರವಿಲ್ಲ. ರೋಗಿಗಳನ್ನು ಗುಣಮುಖರನ್ನಾಗಿಸುವುದು ನಮ್ಮ ಮೊದಲ ಆದ್ಯತೆ.
ಆರಂಭದಲ್ಲಿ ಆತಂಕ ಹೆಚ್ಚಾಗಿತ್ತು. ನಮಗೆ ನಾವೇ ಧೈರ್ಯ ತಂದುಕೊಳ್ಳುತ್ತಿದ್ದೆವು. ಪತಿಯ ಜತೆ ಮಾತನಾಡಿ ಆತಂಕ ದೂರ ಮಾಡಿಕೊಳ್ಳಬೇಕು ಎನಿಸಿದರೂ ಕೆಲಸದ ಒತ್ತಡದಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಬೇಸರವಾದರೂ ಕರ್ತವ್ಯದಿಂದ ವಿಮುಖರಾಗಲಿಲ್ಲ. ಕೊರೊನಾ, ಕರ್ತವ್ಯ ನಿಷ್ಠೆಯನ್ನು ಹೆಚ್ಚಿಸಿದೆ. ಪ್ರತಿ ರೋಗಿಗಳನ್ನೂ ಸಾವಿನ ದವಡೆಯಿಂದ ತಪ್ಪಿಸುವುದೊಂದೇ ನಮ್ಮ ಈಗಿನ ಮುಖ್ಯ ಕಳಕಳಿಯಾಗಿದೆ.
-ಡಾ. ಮೋಹನ್‌ದಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ. ಎನ್. ಆರ್. ರಮ್ಯಾ, ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯೆ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.