ಬೆಂಗಳೂರು: ನಾಗ್ಪುರ ಶಿಕ್ಷಣ ನೀತಿ ಕುರಿತು ಚರ್ಚಿಸಲು ಹಿಂದೇಟು ಹಾಕಿದ ಬಿಜೆಪಿ ಪಲಾಯನವಾದ ಅನುಸರಿಸಿದೆ ಎಂದು ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'NEP- ನಾಗ್ಪುರ ಎಜ್ಯುಕೇಷನ್ ಪಾಲಿಸಿ ಬಗ್ಗೆ ಸದನದಲ್ಲಿ ಚರ್ಚೆಸಲು ಹಿಂದೇಟು ಹಾಕಿದ ಬಿಜೆಪಿ ಪಲಾಯನವಾದ ಅನುಸರಿಸಿದೆ' ಎಂದು ಟೀಕಿಸಿದೆ.
'ಸಾಕಷ್ಟು ಚರ್ಚೆ, ಮಂಥನ, ವಿಮರ್ಶೆಗಳನ್ನು ನಡೆಸಿದ ನಂತರವೇ ಇಂತಹ ಗಂಭೀರ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳಬೇಕು. ಆದರೆ, ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತುರಾತುರಿಯಲ್ಲಿರುವ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ವಿಚಾರದಲ್ಲಿ ಆಟವಾಡುತ್ತಿದೆ' ಎಂದು ಕೆಪಿಸಿಸಿ ಆರೋಪಿಸಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಚರ್ಚೆ ನಡೆಸದೇ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಶುಕ್ರವಾರ ಧರಣಿ ನಡೆಸಿದ್ದರು. ಇದು ಆರ್‌ಎಸ್ಎಸ್ ಕಾರ್ಯಸೂಚಿ ಎಂಬ ವಿಷಯ ಕಾಂಗ್ರೆಸ್– ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.