ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ಬಂದರು ಮಂಡಳಿಯು ಅಗತ್ಯ ಅನುಮೋದನೆ ಇಲ್ಲದೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ), ‘ಅರಣ್ಯ ಅನುಮೋದನೆಗೆ ಅರ್ಜಿ ಸಲ್ಲಿಸುವ ಮುನ್ನ ಮಂಡಳಿಯು ಅರಣ್ಯ ಇಲಾಖೆಯಲ್ಲಿ ₹10 ಕೋಟಿ ಠೇವಣಿ ಇಡಬೇಕು’ ಎಂದು ಸೂಚಿಸಿದೆ.
₹2 ಸಾವಿರ ಕೋಟಿ ವೆಚ್ಚದಲ್ಲಿ ಕಾರವಾರದ ವಾಣಿಜ್ಯ ಬಂದರಿನ 2ನೇ ಹಂತದ ವಿಸ್ತರಣಾ ಯೋಜನೆಯನ್ನು ವಿರೋಧಿಸಿ ಸ್ಥಳೀಯ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಯೋಜನೆಯನ್ನು ವಿರೋಧಿಸಿ ಪ್ರದೀಪ್ ಬಾಬು ತಾಂಡೇಲ ಎಂಬುವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠದ ಮೊರೆ ಹೋಗಿದ್ದರು. ಪೀಠವು ಕರ್ನಾಟಕ ಸರ್ಕಾರ, ಕೇಂದ್ರ ಪರಿಸರ ಸಚಿವಾಲಯ, ಬಂದರು ಮಂಡಳಿಗೆ ನೋಟಿಸ್ ನೀಡಿತ್ತು.
‘ಈ ಯೋಜನೆಗೂ ಬಂದರು ಮಂಡಳಿಯ ಅಭಿವೃದ್ಧಿ ಯೋಜನೆಗೂ ಸಂಬಂಧ ಇಲ್ಲ. ಇವೆರಡು ಪ್ರತ್ಯೇಕ ಯೋಜನೆಗಳು. ಬಂದರು ಮಂಡಳಿಯ ಯೋಜನೆಗೆ ಸರ್ವೆ ಸಂಖ್ಯೆ 42ರ ಅರಣ್ಯ ಬಳಕೆಗೆ ಅನುಮೋದನೆ ಕೋರಲಾಗಿದ್ದು, ಈವರೆಗೆ ಒಪ್ಪಿಗೆ ಸಿಕ್ಕಿಲ್ಲ’ ಎಂದು ಬಂದರು ಮಂಡಳಿಯು ಪ್ರಮಾಣಪತ್ರ ಸಲ್ಲಿಸಿತ್ತು.
‘ಬಂದರು ಹಾಗೂ ಮೀನುಗಾರಿಕೆ ತರಬೇತಿ ಸಂಸ್ಥೆಯನ್ನು ಕಾರವಾರದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಯವರು 2022–23ನೇ ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಜಿಲ್ಲೆಯ ಜನರಿಗೆ ತರಬೇತಿ ನೀಡುವ ಹಾಗೂ ಕೌಶಲ ಬೆಳೆಸುವ ಸಂಸ್ಥೆ ಇದಾಗಿದೆ. ಇದಕ್ಕಾಗಿ ಸಂಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ, ಮಂಡಳಿಗೆ ಶಾಶ್ವತ ಕಟ್ಟಡದ ನಿರ್ಮಾಣವೂ ಆಗಬೇಕಿದೆ. ಈ ಕಾಮಗಾರಿಗಳನ್ನು ನಡೆಸಲು ಅರಣ್ಯ ಭೂಮಿ ಬಳಕೆಗೆ ಒಪ್ಪಿಗೆ ಕೇಳಲಾಗಿದೆ’ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿರುವ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಹಾಗೂ ಡಾ.ಸತ್ಯಗೋಪಾಲ್ ಕೊರ್ಲಪಾಟಿ ಪೀಠವು, ‘ಬಂದರು ಮಂಡಳಿಯ ಆಡಳಿತಾತ್ಮಕ ಕಟ್ಟಡ, ಅತಿಥಿ ಗೃಹ, ತರಬೇತಿ ಸಂಸ್ಥೆ, ವಿದ್ಯಾರ್ಥಿ ನಿಲಯ ಇತ್ಯಾದಿಗಳನ್ನು ಅರಣ್ಯ ಪ್ರದೇಶದ ಬದಲು ಬೇರೆ ಕಡೆಗಳಲ್ಲಿ ನಿರ್ಮಾಣ ಮಾಡಲು ಅವಕಾಶ ಇದೆ’ ಎಂದು ಅಭಿಪ್ರಾಯಪಟ್ಟಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ (ಪಿಸಿಸಿಎಫ್) ಪತ್ರ ಬರೆದಿದ್ದ ಬಂದರು ಹಾಗೂ ಒಳನಾಡು ಜಲಸಾರಿಗೆ ನಿರ್ದೇಶಕರು, ‘ಬೈತಖೋಲ್‌ನ ಸರ್ವೆ ಸಂಖ್ಯೆ 42ರಲ್ಲಿನ 15 ಅರಣ್ಯ ಪ್ರದೇಶದಲ್ಲಿ ವಿವಿಧ ನಿರ್ಮಾಣ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಉಳಿದ 14 ಎಕರೆಯನ್ನು ಪರಿಸರ ಪ್ರವಾಸೋದ್ಯಮದ ಮೀಸಲು ಪ್ರದೇಶವನ್ನಾಗಿ ಉಳಿಸಿಕೊಳ್ಳಲಾಗುತ್ತದೆ’ ಎಂದಿದ್ದರು. ಮಂಡಳಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಅರಣ್ಯ ಅನುಮೋದನೆ ನೀಡುವಂತೆ 2020ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಾಗುತ್ತದೆ ಎಂದೂ ತಿಳಿಸಿದ್ದರು. ಆರಂಭದಲ್ಲಿ ಬಂದರು ಮಂಡಳಿಯ ಚಟುವಟಿಕೆಗಳಿಗೆ 29 ಎಕರೆ ಅರಣ್ಯ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.