ADVERTISEMENT

National Horticultural Fair 2023: ಕಲ್ಲಂಗಡಿ ಬೀಜ ಬೇರ್ಪಡಿಸುವ ಯಂತ್ರ

ಖಲೀಲಅಹ್ಮದ ಶೇಖ
Published 22 ಫೆಬ್ರುವರಿ 2023, 21:45 IST
Last Updated 22 ಫೆಬ್ರುವರಿ 2023, 21:45 IST
ಕಲ್ಲಂಗಡಿ ಬೀಜಗಳನ್ನು ಬೇರ್ಪಡಿಸುವ ಯಂತ್ರ   –ಪ‍್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ
ಕಲ್ಲಂಗಡಿ ಬೀಜಗಳನ್ನು ಬೇರ್ಪಡಿಸುವ ಯಂತ್ರ –ಪ‍್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ   

ಬೆಂಗಳೂರು: ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಬೇರ್ಪಡಿಸುವುದು ರೈತರಿಗೆ ಹೊರೆಯ ಕೆಲಸ. ಇದನ್ನು ತಪ್ಪಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು (ಐಐಎಚ್‌ಆರ್‌) ಈ ಹಣ್ಣಿನ ಬಿತ್ತನೆ ಬೀಜಗಳನ್ನು ಬೇರ್ಪಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

ಹೆಸರಘಟ್ಟದಲ್ಲಿರುವ ಐಐಎಚ್‌ಆರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ರಾಷ್ಟ್ರೀಯ ಮೇಳದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಬಿತ್ತನೆ ಬೀಜ ಬೇರ್ಪಡಿಸುವ ಯಂತ್ರ ರೈತರ ಗಮನ ಸೆಳೆಯುತ್ತಿದೆ.

‘ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ತಿರುಳು ಮತ್ತು ಬೀಜವನ್ನು ಒಂದೆಡೆ ಸಂಗ್ರಹಿಸುತ್ತದೆ. ತಿರುಳನ್ನು ಜ್ಯೂಸ್ ಮಾಡಲು ಬಳಸಿದರೆ, ಬೀಜವನ್ನು ಪ್ರತ್ಯೇಕಗೊಳಿಸುವ ವ್ಯವಸ್ಥೆ ಇದೆ. ಇದು ಗಂಟೆಗೆ 30 ಕೆ.ಜಿ. ಬೀಜಗಳನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ಐಐಎಚ್‍ಆರ್‌ನ ಪ್ರಧಾನ ವಿಜ್ಞಾನಿ ಜಿ.ಸೆಂಥಿಲ್ ಕುಮಾರನ್ ಮಾಹಿತಿ ನೀಡಿದರು.

ADVERTISEMENT

‘ಈ ಯಂತ್ರವನ್ನು ಐಐಎಚ್‌ಆರ್‌ನ ಎಂ.ಟೆಕ್‌ ವಿದ್ಯಾರ್ಥಿಗಳು ಆವಿಷ್ಕಾರಗೊಳಿಸಿದ್ದು, ಇದನ್ನು ಸಂಪೂರ್ಣವಾಗಿ ಸ್ಟೇನ್‌ಲೆಸ್‌ ಸ್ಟೀಲ್‌ ಬಳಸಿ ಮಾಡಲಾಗಿದೆ. ರೈತರು ಈ ಯಂತ್ರ ಬಳಕೆ ಮಾಡುವುದರಿಂದ ಕಲ್ಲಂಗಡಿ ಹಣ್ಣಿನ ಬಿತ್ತನೆ ಬೀಜಗಳನ್ನು ಸರಳವಾಗಿ ಮತ್ತು ವೇಗವಾಗಿ ಬೇರ್ಪಡಿಸುವ ಮೂಲಕ ಸಮಯದ ಉಳಿತಾಯ ಮಾಡಬಹುದು. ಇದರ ಬೆಲೆ ₹1.75 ಲಕ್ಷ ಇದೆ’ ಎಂದು ತಿಳಿಸಿದರು.

ಸಂಚಾರಿ ತ್ರಿಚಕ್ರ ಸೌರ ಚಾಲಿತ ಸೈಕಲ್‌ ಫ್ರಿಡ್ಜ್‌ ಅಭಿವೃದ್ಧಿ:
ಹಣ್ಣು ಮತ್ತು ತರಕಾರಿ ಮಾರಾಟಕ್ಕಾಗಿ ‘ಅರ್ಕಾ’ ಹೆಸರಿನ ಸೌರಚಾಲಿತ–ವಿದ್ಯುತ್‌ ಚಾಲಿತ ತ್ರಿಚಕ್ರ ವಾಹನ ಮತ್ತು ಸೈಕಲ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಾಹನ ಸಣ್ಣ ವ್ಯಾಪಾರಸ್ಥರ ಮೇಲಿನ ಒತ್ತಡ ತಗ್ಗಿಸಿ, ವ್ಯಾಪಾರ ವೃದ್ಧಿಗೂ ನೆರವಾಗುತ್ತದೆ. ಹಣ್ಣು-ತರಕಾರಿಗಳನ್ನು 24 ಗಂಟೆಯವರೆಗೂ ತಾಜಾಸ್ಥಿತಿಯಲ್ಲೇ ಇಡುವ ಈ ಸೈಕಲ್‌. 200 ಕೆ.ಜಿ. ಭಾರವನ್ನು ಹೊತ್ತೊಯ್ಯಬಲ್ಲದು. ಇದೇ ರೀತಿಯ ವಿದ್ಯುತ್‌–ಸೌರ ಶಕ್ತಿ ಚಾಲಿತ ತ್ರಿಚಕ್ರವಾಹನ ಅಭಿವೃದ್ಧಿಪಡಿಸಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ 5 ಗಂಟೆ ಕಾಲ ಬರುತ್ತದೆ. ಇದು 50 ಕಿ.ಮೀವರೆಗೂ ಸಂಚರಿಸುತ್ತದೆ.

ಸೌರ ಚಾಲಿತ ಸೈಕಲ್‌ ಫ್ರಿಡ್ಜ್‌ –ಪ‍್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ

‘ಕೃಷಿ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲಿಡಲು ವಾಹನದ ಮೇಲ್ಭಾಗದಲ್ಲಿ ಸೌರಫಲಕ ಅಳವಡಿಸಲಾಗಿದೆ. ಇದರ ಸಹಾಯದಿಂದ ಉಷ್ಣಾಂಶ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ. ಹವಾಮಾನಕ್ಕೆ ತಕ್ಕಂತೆ ಉತ್ಪನ್ನಗಳಿಗೆ ಅಗತ್ಯವಿರುವ ತಾಜಾ ವಾತಾವರಣ ಕಲ್ಪಿಸ
ಬಹುದು. ಇದರಲ್ಲಿ ಸಾರ್ವಜನಿಕ ಪ್ರಕಟಣೆಗೆ ಧ್ವನಿವರ್ಧಕ, ವಿದ್ಯುತ್‍ಚಾ ಲಿತ ತೂಕದ ಯಂತ್ರ, ರಾತ್ರಿ ವ್ಯಾಪಾರ ಮಾಡಲು ಎಲ್‌ಇಡಿ ಬಲ್ಬ್‌ ಅನ್ನೂ ಅಳವಡಿಸಲಾಗಿದೆ’ ಎಂದು ಐಐಎಚ್‍ಆರ್ ಜಿ.ಸೆಂಥಿಲ್ ಕುಮಾರನ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.