ಬೆಂಗಳೂರು: ಉತ್ತರಾಖಂಡ ರಾಜ್ಯದ ಹರಿದ್ವಾರ ಮತ್ತು ಋಷಿಕೇಶದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದಿಂದ ರಾಷ್ಟ್ರೀಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು.
ನಟ ಪ್ರೇಮ್ ಮಾತನಾಡಿ, ‘ಕನ್ನಡ ಭಾಷೆಯನ್ನ ಪಸರಿಸುವ ಕಾರ್ಯ ಎಲ್ಲರಿಂದಾಗಬೇಕು. ಬೇರೆ ಭಾಷೆಗಳನ್ನು ದ್ವೇಷ ಮಾಡಬಾರದು. ಜೊತೆಗೆ ನಮ್ಮ ಭಾಷೆಯನ್ನು ಬಿಟ್ಟುಕೊಡಬಾರದು. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಕದ ಮಳಿಗೆ ತೆರೆಯಬೇಕು. ಮದುವೆ, ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗುವವರು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಬೇಕು’ ಎಂದು ಸಲಹೆ ನೀಡಿದರು.
ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯ ಎಂದು ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತ ಆರ್.ಎಲ್. ದೀಪಕ್ ತಿಳಿಸಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಮಾತನಾಡಿ, ‘ಕನ್ನಡವು ವಿಶ್ವ ಭಾಷೆಯಾಗಬೇಕು. ಅದಕ್ಕಾಗಿ ಹೊರ ನಾಡಿನಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಹಿಂದೆ ಕಾಶಿಯಲ್ಲಿ ರಾಷ್ಟ್ರೀಯ, ನೇಪಾಳದಲ್ಲಿ ಅಂತರರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.
ಉಪ ಆರೋಗ್ಯಾಧಿಕಾರಿ ಡಾ. ಸಂಧ್ಯಾ, ಆಡಳಿತಾಧಿಕಾರಿಯವರ ಆಪ್ತ ಕಾರ್ಯದರ್ಶಿ ನಾರಾಯಣಸ್ವಾಮಿ , ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಸಾಯಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಮೇಯರ್ ಗೌತಮ್ ಕುಮಾರ್, ಮಹದೇವಪುರ ವಲಯ ಜಂಟಿ ಆಯುಕ್ತೆ ದಾಕ್ಷಾಯಿಣಿ, ವಕೀಲ ವಿ. ಶ್ರೀನಿವಾಸ್, ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷೆ ಭೀಮಪುತ್ರಿ ರೇವತಿರಾಜ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.