ADVERTISEMENT

ಸಾಮಾನ್ಯನಿಗೆ ಪತ್ರಿಕೆಗಳೇ ದನಿ: ಪ್ರಾಧ್ಯಾಪಕ ಎ.ನಾರಾಯಣ

ರಾಷ್ಟ್ರೀಯ ಪತ್ರಿಕಾ ದಿನಾಚರಣೆ: ಮಾಧ್ಯಮಗಳ ಬದಲಾವಣೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 16:05 IST
Last Updated 16 ನವೆಂಬರ್ 2024, 16:05 IST
<div class="paragraphs"><p>‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ಯಲ್ಲಿ (ಎಡದಿಂದ) ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಕಾಂಗ್ರೆಸ್‌ ನಾಯಕ ಎಂ.ವೀರಪ್ಪ ಮೊಯಿಲಿ ಅವರ ಚರ್ಚಿಸಿದರು. ಪ್ರಾಧ್ಯಾಪಕ ಎ.ನಾರಾಯಣ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಉಪಸ್ಥಿತರಿದ್ದರು&nbsp; </p></div>

‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ಯಲ್ಲಿ (ಎಡದಿಂದ) ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅವರು ಕಾಂಗ್ರೆಸ್‌ ನಾಯಕ ಎಂ.ವೀರಪ್ಪ ಮೊಯಿಲಿ ಅವರ ಚರ್ಚಿಸಿದರು. ಪ್ರಾಧ್ಯಾಪಕ ಎ.ನಾರಾಯಣ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಉಪಸ್ಥಿತರಿದ್ದರು 

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ದೇಶದ ಅತ್ಯಂತ ಪ್ರಭಾವಿ ಹುದ್ದೆಯಲ್ಲಿರುವ ರಾಜಕಾರಣಿಯು ಪತ್ರಿಕಾಗೋಷ್ಠಿ ನಡೆಸುವ ಅಗತ್ಯವೇ ಇಲ್ಲ. ಸುದ್ದಿ ಪತ್ರಿಕೆಗಳ ಅಗತ್ಯವೇ ಇಲ್ಲ ಎಂಬ ಅಭಿಪ್ರಾಯ ರೂಪಿಸಿದ್ದಾರೆ. ಇದು ತಪ್ಪು. ಹಿಂದೆಂದಿಗಿಂತ ಸುದ್ದಿಪತ್ರಿಕೆಗಳ ಅಗತ್ಯ ಇಂದು ತೀವ್ರವಾಗಿದೆ’ ಎಂದು ಪ್ರಾಧ್ಯಾಪಕ ಎ.ನಾರಾಯಣ ಹೇಳಿದರು.

ADVERTISEMENT

ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ, ‘ಬದಲಾಗುತ್ತಿರುವ ಪತ್ರಿಕಾ ಮಾಧ್ಯಮದ ಸ್ವರೂಪ’ ಕುರಿತು ಅವರು ಮಾತನಾಡಿದರು.

‘ಹತ್ತಾರು ವರ್ಷಗಳಿಂದ ಒಂದೂ ಪತ್ರಿಕಾಗೋಷ್ಠಿ ನಡೆಸದ ಆ ರಾಜಕಾರಣಿ, ಸಾಮಾಜಿಕ ಜಾಲತಾಣಗಳ ಮೂಲಕವೇ ಜನರನ್ನು ತಲುಪುತ್ತೇನೆ ಎಂಬುದನ್ನು ಬಿಂಬಿಸುತ್ತಿದ್ದಾರೆ. ಯಾರೋ ಜನಸಾಮಾನ್ಯ ಮಾಡುವ ಟ್ವೀಟ್‌ ಅಥವಾ ಫೇಸ್‌ಬುಕ್‌ ಪೋಸ್ಟ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸಿ, ಸರ್ಕಾರ ಮತ್ತು ಸಾಮಾನ್ಯನ ಮಧ್ಯೆ ಅಂತರ ಇಳಿಕೆಯಾಗಿದೆ ಎಂದು ತೋರಿಸಲಾಗುತ್ತಿದೆ. ಆದರೆ ಅದು ನಿಜವಲ್ಲ’ ಎಂದರು.

‘ಸಾಮಾನ್ಯನ ಪೋಸ್ಟ್‌ಗಳಿಗೆ ಅಂತಹ ಪ್ರತಿಕ್ರಿಯೆ ಸಿಕ್ಕಿದ್ದು ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ. ಇಂದಿಗೂ ಜನಸಾಮಾನ್ಯನ ಸಮಸ್ಯೆಗಳಿಗೆ, ಅಸಹಾಯಕತೆಗೆ ದನಿ ಆಗುತ್ತಿರುವುದು ಪತ್ರಿಕೆಗಳು ಮಾತ್ರ. ಪತ್ರಿಕೆಗಳಲ್ಲಿ ಬಂದಾಗ ಅದು ಬೀರುವ ಪರಿಣಾಮ ಗಣನೀಯವಾದದ್ದು. ಹೀಗಾಗಿ ಪತ್ರಿಕೆಗಳು ಇಂದು ಹೆಚ್ಚು ಪ್ರಸ್ತುತವಾಗಿವೆ’ ಎಂದರು.

ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾತನಾಡಿ, ‘200 ವರ್ಷಗಳ ಪತ್ರಿಕಾರಂಗ ಮತ್ತು 20 ವರ್ಷಗಳ ಡಿಜಿಟಲ್‌ ಮಾಧ್ಯಮಗಳು ಅಸ್ತಿತ್ವದಲ್ಲಿರುವ ಸಂಘರ್ಷಪೀಡಿತ ಸಂಧಿಕಾಲದಲ್ಲಿ ನಾವಿದ್ದೇವೆ. ಇಂತಹ ಸಂದಿಗ್ಧ ಸ್ಥಿತಿ ಕರಗುತ್ತದೆ. ಈಗ ಎಲ್ಲವೂ ಬದಲಾಗುತ್ತಿದೆ. ಜನ ಸಾಮಾನ್ಯನಿಗೆ ಶಕ್ತಿ ನೀಡಲೆಂದೇ ಮಾಹಿತಿ ಹಕ್ಕು ಕಾಯ್ದೆ ತರಲಾಗಿತ್ತು. ಆದರೆ ಈಗ ಅದನ್ನು ಸಂಪೂರ್ಣ ದುರ್ಬಲಗೊಳಿಸಲಾಗಿದೆ’ ಎಂದರು.

ಲೋಕಪಾಲ ಕಡೆಗಣನೆ: ಮೊಯಿಲಿ

‘ಭ್ರಷ್ಟಾಚಾರವನ್ನು ಪತ್ರಿಕೆಗಳು ಪ್ರಶ್ನಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಲೋಕಪಾಲ ತರಲು ನಮ್ಮ ಸರ್ಕಾರದಲ್ಲಿ ಕ್ರಮ ತೆಗೆದುಕೊಂಡಿದ್ದೆವು. ಲೋಕಪಾಲದ ಹೆಸರಿನಲ್ಲೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಅದನ್ನು ಜಾರಿಗೆ ತರುವ ಬಗ್ಗೆ ಯೋಚಿಸುತ್ತಲೇ ಇಲ್ಲ. ಪತ್ರಿಕೆಗಳು ಇದನ್ನು ಪ್ರಶ್ನಿಸಬೇಕಿತ್ತು. ಆದರೆ ಪ್ರಶ್ನಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಹೇಳಿದರು. ‘ಪ್ರಜಾಪ್ರಭುತ್ವ ಮತ್ತು ದೇಶದ ನಿಜವಾದ ಕಾವಲುಗಾರ ಸುಪ್ರೀಂ ಕೋರ್ಟ್‌ ಅಲ್ಲ. ಬದಲಿಗೆ ಪತ್ರಿಕೆ ಮತ್ತು ಪತ್ರಕರ್ತ. ಆದರೆ ಪತ್ರಿಕೆಗಳ ಮತ್ತು ಪತ್ರಕರ್ತರ ಹತ್ಯೆ ನಡೆಯುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.