ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಸುಮಾರು ₹ 1.90 ಕೋಟಿ ವೆಚ್ಚದ ‘ವಿದ್ಯಾರ್ಥಿ ಉಪಗ್ರಹ ಉಡಾವಣೆ’ ಯೋಜನೆಗೆ ಉನ್ನತ ಶಿಕ್ಷಣ, ಐಟಿಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವಿದ್ಯಾರ್ಥಿ ಉಪಗ್ರಹಕ್ಕೆ ನಟ ಪುನೀತ್ ರಾಜಕುಮಾರ್ ಹೆಸರಿಡಲಾಗಿದೆ.
ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಸಂದರ್ಭದಲ್ಲಿ ಸಚಿವರು ಈ ವಿನೂತನ ಪರಿಕಲ್ಪನೆಯ ಯೋಜನೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅಶ್ವತ್ಥನಾರಾಯಣ, ‘ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಉಪಗ್ರಹವನ್ನು ಸೆಪ್ಟೆಂಬರ್–ಅಕ್ಟೋಬರ್ ತಿಂಗಳಲ್ಲಿ ಉಡಾವಣೆ ಮಾಡಲು ತೀರ್ಮಾನಿಸಿದ್ದೇವೆ. ಉಪಗ್ರಹಕ್ಕೆ ಯುವಕರ ಕಣ್ಮಣಿಯಾಗಿದ್ದ ನಟ ಪುನೀತ್ ರಾಜಕುಮಾರ್ ಹೆಸರಿಡಬೇಕು ಎಂಬ ಸಲಹೆ ಬಂದಿತ್ತು. ಹೀಗಾಗಿ, ಅವರ ಹೆಸರಿಡಲಾಗಿದೆ. ಈ ಯೋಜನೆಯಡಿ 20 ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಸಾಮಾನ್ಯ ಉಪಗ್ರಹ ಅಭಿವೃದ್ಧಿಪಡಿಸಲು ₹ 50 ಕೋಟಿಯಿಂದ ₹ 60 ಕೋಟಿ ವೆಚ್ಚ ತಗಲುತ್ತದೆ. ಅಲ್ಲದೆ, ಅದರ ತೂಕ ಕೂಡಾ 50 ಕಿಲೋ ಇರುತ್ತದೆ. ಆದರೆ, ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ, ಪರಿವರ್ತನೆ ಆಗಿದೆ. ಇಲ್ಲಿ ಒಂದೂವರೆ ಕಿಲೋ ತೂಕದಲ್ಲಿ ₹ 1.90 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆಯ ಪರಿಕಲ್ಪನೆ ರೂಪಿಸಲಾಗಿದೆ’ ಎಂದು ಅವರು ವಿವರಿಸಿದರು.
‘ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ವಿಜ್ಞಾನ ವಿಷಯದಲ್ಲಿ ಬದ್ಧತೆ, ಕಾಳಜಿ ತೋರಿಸಬೇಕಾದುದು ಬಹಳ ಮುಖ್ಯ. 20ನೇ ಶತಮಾನದಲ್ಲಿ ವಿಜ್ಞಾನ ಬಹಳ ಪ್ರಮುಖ ಪಾತ್ರ ವಹಿಸಿದೆ. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಾಣುತ್ತೇವೆ. ಹೊಸ ಹೊಸ ಆವಿಷ್ಕಾರಗಳಿಂದ ಸಮಾಜ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದೇವೆ. ವಿಜ್ಞಾನದ ಪ್ರಯೋಜನ ಎಲ್ಲರಿಗೂ ಸಿಗಬೇಕು. ಆದರೆ, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ನಮಗೆ ಸಾಧ್ಯ ಆಗಿಲ್ಲ’ ಎಂದು ಸಚಿವರು ವಿಷಾದಿಸಿದರು.
‘ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯೋಜನೆಗಳನ್ನು ರೂಪಿಸಿದೆ. ವಿಜ್ಞಾನ ಮೂಲ ವಿಷಯ. ಎಲ್ಲದಕ್ಕೂ ಮೂಲ ಗಣಿತ. ಗಣಿತವನ್ನು ಸರಿಯಾಗಿ ಕಲಿಯಬೇಕು. ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಂತದಲ್ಲಿಯೇ ವಿಜ್ಞಾನ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ‘ಈ ದಿನ ಹೊಸ ಭಾರತ ನಿರ್ಮಾಣಕ್ಕೆ ಹೊಸತನ ಕೊಡುವ ದಿನ. ವಿಜ್ಞಾನದ ಬಗ್ಗೆ ಎಳೆಯ ಮಕ್ಕಳಲ್ಲಿ ಅರಿವು ಮೂಡಿಸುವ ದಿನ. ಹಿಂದೆ ಜೀವನೋಪಾಯಕ್ಕಾಗಿ ಶಿಕ್ಷಣ ಕೊಡುವ ವ್ಯವಸ್ಥೆ ಇತ್ತು. ಅದೇ ದೊಡ್ಡ ಸಾಧನೆ ಎಂಬಂತಿತ್ತು. ಈಗ ಜಗತ್ತು ಬದಲಾವಣೆ ಆಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಾಧನೆ ಆಗಬೇಕಿದೆ’ ಎಂದರು.
‘ಹೊಸತನದಿಂದ ಹೊಸ ಆವಿಷ್ಕಾರ ಸಾಧ್ಯ. ಆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರೊ. ಸಿ.ವಿ. ರಾಮನ್ ಅವರು ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದ್ದರು. ವಿಜ್ಞಾನಕ್ಕೆ ಹೊಸ ದಿಕ್ಕು ನೀಡಿದ್ದರು. ಹೊಸತನದ ಹುಡುಕಾಟದ ಕಡೆಗೆ ನಾವು ಹೋಗಲೇಬೇಕು. ಹೊಸ ಆವಿಷ್ಕಾರ ಬರಬೇಕಿದ್ದರೆ ಅದರ ಮೂಲ ಎಲ್ಲಿದೆ ಎಂಬ ಹುಡುಕಾಟ ನಡೆಯಬೇಕು. ಆ ಕೆಲಸ ಮಾಡುವಂಥ ಪ್ರಯತ್ನಗಳು ಆದಾಗ, ಮಾತ್ರ ಹೊಸತನ ಸಾಧ್ಯ ಆಗಲಿದೆ. ಯುವ ಪೀಳಿಗೆಯಲ್ಲಿ ಕೆಳಹಂತದಿಂದಲೇ, ಕುತೂಹಲ ಮೂಡಿಸುವ ಕೆಲಸ ಆಗಬೇಕು’ ಎಂದರು.
‘ವಿದ್ಯಾರ್ಥಿ ಉಪಗ್ರಹ ಉಡಾವಣೆ ಯೋಜನೆ ಎಂಬ ಪರಿಕಲ್ಪನೆಯ ಮೂಲಕ ಮಕ್ಕಳಲ್ಲಿ ಕುತೂಹಲ ಮೂಡಿಸುವಂಥ ಕೆಲಸ ಆಗಬೇಕು. ಎಳೆ ವಯಸ್ಸಿನಲ್ಲಿ ಹೆಚ್ಚು ವಿಷಯಗಳನ್ನು ಕ್ರೋಡೀಕರಿಸುವ ಕೆಲಸ ಆಗಬೇಕು‘ ಎಂದೂ ಅವರು ಆಶಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್. ಅಯ್ಯಪ್ಪನ್ ಮಾತನಾಡಿ, ‘ನಮ್ಮಲ್ಲಿ ಸಂಶೋಧಕರು ಎಷ್ಟಿದ್ದಾರೆ ಎಂದು ನೋಡಬೇಕಿದೆ. ಒಂದು ಕೋಟಿ ಜನಸಂಖ್ಯೆಗೆ 2,500 ಸಂಶೋಧಕರು ಮಾತ್ರ ಇದ್ದಾರೆ. ಅಂದರೆ, ಇಡೀ ದೇಶದಲ್ಲಿ ಬಾಹ್ಯಾಕಾಶ, ಕೃಷಿ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ 5 ಲಕ್ಷದಷ್ಟು ಸಂಶೋಧಕರೂ ಇಲ್ಲ. ನಮ್ಮಲ್ಲಿ ಆಹಾರಧಾನ್ಯಗಳ ಉತ್ಪಾದನೆ ಸಾಕಷ್ಟು ಇದ್ದರೂ ಮೂರನೇ ಒಂದು ಭಾಗದಷ್ಟು ವ್ಯರ್ಥ ಮಾಡುತ್ತೇವೆ. ಹೀಗಾಗಿ, ಆಹಾರ, ವಿದ್ಯುತ್ ಬಳಕೆಯಲ್ಲಿ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ. ನಮ್ಮದು ಜಾಗತಿಕ ಚಿಂತನೆ, ಸ್ಥಳೀಯ ವರ್ತನೆ ಆಗಬೇಕು. ವೈಜ್ಞಾನಿಕವಾಗಿ ಯೋಚಿಸುತ್ತೇವೆ, ವರ್ತಿಸುತ್ತೇವೆ ಎಂದು ಪಣ ತೆಗೆದುಕೊಳ್ಳಬೇಕಾಗಿದೆ’ ಎಂದರು.
ನ್ಯಾನೋ ತಂತ್ರಜ್ಞಾನ ದಾರ್ಶನಿಕ ಸಮೂಹದ ಅಧ್ಯಕ್ಷರಾದ ಪ್ರೊ. ನವಕಾಂತ ಭಟ್ ಮಾತನಾಡಿ, ‘ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮುನ್ನಡೆದರೆ ಸುಸ್ಥಿರ ಭವಿಷ್ಯ. ತಂತ್ರಜ್ಞಾನದಲ್ಲಿ ಸಮಗ್ರ ಪಥ ಸಾಧ್ಯ’ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಕಾರ್ಯದರ್ಶಿ ಪ್ರೊ. ಅಶೋಕ್ ಎಂ. ರಾಯಚೂರ್ ಕೂಡಾ ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡಬೇಕಾದ ಅಗತ್ಯದ ಬಗ್ಗೆ ವಿವರಿಸಿದರು.
ಐಟಿಬಿಟಿ ಇಲಾಖೆಯ ನಿರ್ದೇಶಕ ಎ.ಬಿ. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಇಲಾಖೆಯ ವಿವಿಧ ಸಂಸ್ಥೆಗಳಿಂದ ವಿಜ್ಞಾನ ವಸ್ತು ಪ್ರದರ್ಶನ, ಸಂಚಾರಿ ಡಿಜಿಟಲ್ ತಾರಾಲಯ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.